ಸಲಿಂಗ ಸಂಬಂಧ ಇನ್ನು ಭಾರತದಲ್ಲಿ ಅಪರಾಧವಲ್ಲ; ಸುಪ್ರೀಂ ಕೋರ್ಟ್​ ಮಹತ್ವದ ಆದೇಶ

ದಶಕಗಳ ಹೋರಾಟಕ್ಕೆ ತಾರ್ಕಿಕ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್​, ಸೆಕ್ಷನ್​ 377 ರದ್ದು ಗೊಳಿಸುವ ಮಹತ್ವದ ಆದೇಶ ಹೊರಡಿಸಿದೆ.

Illustration by Mir Suhail

Illustration by Mir Suhail

  • News18
  • Last Updated :
  • Share this:
ನ್ಯೂಸ್​ 18 ಕನ್ನಡ

ನವದೆಹಲಿ (ಸೆ.06): ಸಲಿಂಗಕಾಮ ಅಪರಾಧ ಎಂದು ಪರಿಗಣಿಸುವ ಸೆಕ್ಷನ್​ 377 ಕಾಯ್ದೆಯನ್ನು ನಿರಾಪರಾಧೀಕರಣಗೊಳಿಸುವ ಕುರಿತು  ಸುಪ್ರೀಂ ಕೋರ್ಟ್​ ಸಾಂವಿಧಾನಿಕ ಪೀಠದಿಂದ‌ ಇಂದು ಐತಿಹಾಸಿಕ ತೀರ್ಪು ಹೊರಬಿದ್ದಿದೆ. ಸಲಿಂಗ ಸಂಬಂಧ ಇನ್ನು ಭಾರತದಲ್ಲಿ ಅಪರಾಧವಲ್ಲ, ಸಲಿಂಗ ಸಂಬಂಧ ಮಾನವ ಸಹಜ ಗುಣವೆಂದು ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ಪೀಠ ಆದೇಶಿಸಿದೆ.

ನ್ಯಾಯಮೂರ್ತಿ ದೀಪಕ್​ ಮಿಶ್ರಾ ಅವರನ್ನು ಒಳಗೊಂಡ ಪಂಚ ಸದಸ್ಯ ಪೀಠ ತೀರ್ಪು ಪ್ರಕಟಿಸಿದೆ. ಕಳೆದ ಜುಲೈ 17ರಂದು ಈ ಕುರಿತು ವಿಚಾರಣೆ ನಡೆಸಿ, ಆದೇಶವನ್ನು ಕೋರ್ಟ್​ ಕಾಯ್ದಿರಿಸಿತ್ತು.

ಸಲಿಂಗ ಸಂಬಂಧ ಅಪರಾಧ ಎಂದು ಪರಿಗಣಿಸುವ ಸೆ.377ನ್ನು ನಿರಪರಾಧೀಕರಣ ಗೊಳಿಸವ ಆದೇಶಕ್ಕೆ ಈ ಹಿಂದೆ ಕೋರ್ಟ್​ ತಡೆ ನೀಡಿತ್ತು. ಈ ಕುರಿತು ಜುಲೈನಲ್ಲಿ  ವಾದ ವಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್​ ಈ ಕುರಿತು ತೀರ್ಪನ್ನು ಕಾಯ್ದಿರಿಸಿತು.

ಸೆಕ್ಷನ್​ 377 ಪ್ರಕಾರ ಸಲಿಂಗ ಸಂಬಂಧ ಅನೈಸರ್ಗಿಕ ಮತ್ತು ಅಪರಾಧವಾಗಿದ್ದು,  ಈ ಕಾಯ್ದೆ ಪ್ರಕೃತಿಯ ಕ್ರಮಕ್ಕೆ ವಿರುದ್ಧವಾಗಿದೆ. ಒಂದೇ ಲಿಂಗದವರು ದೈಹಿಕ ಕ್ರಿಯೆಯನ್ನು ಸ್ವಯಂ ಪ್ರೇರಿತವಾಗಿ ಹೊಂದಿದರೆ, ಅವರು ಜೈಲು ಶಿಕ್ಷೆಗೆ ಒಳಗಾಗುತ್ತಾರೆ. ಇವರಿಗೆ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಸೆಕ್ಷನ್‌ 377ಕ್ಕೆ ತಿದ್ದುಪಡಿ ತಂದು ಸಲಿಂಗಿಗಳನ್ನು ಕಾನೂನು ಬದ್ಧವಾಗಿಸಬೇಕೋ ಅಥವಾ ಅಪರಾಧವೆಂದು ಪರಿಗಣಿಸಬೇಕೋ ಎಂದು ಸುಪ್ರಿಂ ಕೋರ್ಟ್‌ನ 5 ನ್ಯಾಯಮೂರ್ತಿಗಳ ಪೀಠ ಈಗ ನಿರ್ಧರಿಸಿದೆ.

ಸೆಕ್ಷನ್​ 377 ವಿಷಯವನ್ನು ಮೊದಲಿಗೆ ಎನ್​ಜಿಒ, ನಾಜಾ ಫೌಂಡೆಷನ್​ ಮೊದಲ ಬಾರಿಗೆ ಬೆಳಕಿಗೆ ತಂದಿತ್ತು.  2001ರಲ್ಲಿ ಈ ಕುರಿತು ದೆಹಲಿ  ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.

ಅಸ್ವಾಭಾವಿಕ ಲೈಂಗಿಕತೆಯನ್ನು ಅಪರಾಧೀಕರಿಸುವ 377 ಸೆಕ್ಷನ್ ಸಲಿಂಗಕಾಮ ನಿಷೇಧ ವಿರೋಧಿಸಿ ನೃತ್ಯಗಾರ್ತಿ ನವತೇಜ್ ಜೌಹರ್, ಪತ್ರಕರ್ತ ಸುನಿಲ್ ಮೆಹ್ರಾ, ಚೆಫ್ ರಿತು ಡಾಲ್ಮಿಯಾ, ಹೋಟೆಲ್ ಉದ್ಯಮಿಗಳಾದ ಅಮನ್ ನಾಥ್, ಕೇಶವ ಸೂರಿ, ಆಯೇಷಾ ಕಪೂರ್, ಐಐಟಿಯ 20 ಮಾಜಿ, ಪ್ರಸ್ತುತ ವಿದ್ಯಾರ್ಥಿಗಳ ಪ್ರಶ್ನಿಸಿದ್ದರು.

ತೀರ್ಪಿಗೆ ಮಿಶ್ರ ಪ್ರತಿಕ್ರಿಯೆ:

ಬಾಲಿವುಡ್​ನ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್​ ಜೋಹರ್​ ಪ್ರತಿಕ್ರಿಯೆ ನೀಡಿದ್ದು, ತೀರ್ಪನ್ನು ಸ್ವಾಗತಿಸಿದ್ದಾರೆ. ಸೆಕ್ಷನ್​ 377ನ್ನು ವಜಾಗೊಳಿಸಿರುವುದು, ಮಾನವೀಯತೆಗೆ ಸಿಕ್ಕ ಜಯ. ದೇಶದಲ್ಲಿ ಮತ್ತೆ ಉಸಿರಾಡಲು ಆಮ್ಲಜನಕ ದೊರೆತಂತಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.ಮತ್ತೊಬ್ಬ ಬಾಲಿವುಡ್​ ನಟ ಆಯುಶ್ಮಾನ್​ ಖುರಾನ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯಿಸಿದ್ದು, ಪ್ರಗತಿಪರ ಆಶಾಕಿರಣ ಭಾರತದಲ್ಲಿ ಇಂದು ಹೊಸ ಶಕ್ತಿ ಪಡೆದಿದೆ ಎಂದಿದ್ದಾರೆ.ಕಾಂಗ್ರೆಸ್​ ನಾಯಕ ಶಶಿ ತರೂರ್​ ಕೂಡ ತೀರ್ಪನ್ನು ಸ್ವಾಗತಿಸಿದ್ದಾರೆ. ಈ ಹಿಂದೆ ವ್ಯಕ್ತಿಯ ಖಾಸಗೀತನದಲ್ಲಿ ಮೂಗು ತೂರಿಸುವುದು ಸರಿಯಲ್ಲ ಎಂದು ನಾನು ಲೋಕಸಭೆಯಲ್ಲಿ ಅಭಿಪ್ರಾಯ ಪಟ್ಟಾಗ ಬಿಜೆಪಿ ಸಂಸದರು ವಿರೋಧಿಸಿದ್ದರು. ಸುಪ್ರೀಂ ಕೋರ್ಟ್​ ಇಂದು ನೀಡಿದ ತೀರ್ಪು ನನ್ನ ಅಭಿಪ್ರಾಯವೂ ಆಗಿತ್ತು, ಎಂದು ಶಶಿ ತರೂರ್​ ಟ್ವೀಟ್​ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ರಿಂದಲೂ ತೀರ್ಪಿಗೆ ಸ್ವಾಗತ ವ್ಯಕ್ತವಾಗಿದೆ. ಭಾರತ ಯಾವಾಗಲೂ ಕಾಲದ ಜತೆ ಹೆಜ್ಜೆ ಹಾಕುತ್ತದೆ, ಅದಕ್ಕೆ ಈ ಆದೇಶ ಹೊಸದೊಂದು ಉದಾಹರಣೆ ಎಂದಿದ್ದಾರೆ.ಬಿಜೆಪಿ ಹಿರಿಯ ಮುಖಂಡ ಸುಬ್ರಮಣ್ಯನ್​ ಸ್ವಾಮಿ ತೀರ್ಪಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಂಚ ನ್ಯಾಯಮೂರ್ತಿಗಳ ಪೀಠದ ಆದೇಶವೇ ಅಂತಿಮವಲ್ಲ, ಈ ತೀರ್ಪನ್ನು ಏಳು ಸದಸ್ಯರ ಪೀಠದಲ್ಲಿ ಪ್ರಶ್ನಿಸಬಹುದು ಎಂದಿದ್ದಾರೆ.

ನಗರದ ಟೌನ್​ ಹಾಲ್​ ಬಳಿ ಸಲಿಂಗಿಗಳು ಸುಪ್ರೀಂ ಕೋರ್ಟ್​ ಆದೇಶವನ್ನು ಸ್ವಾಗತಿಸಿ, ಸಂಭ್ರಮಾಚರಣೆ ಮಾಡಿದರು.

First published: