ನವದೆಹಲಿ: ರಾಮಸೇತುವನ್ನು (Ram Setu) ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ (National Heritage Monument) ಘೋಷಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಬಿಜೆಪಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ (Subramanian Swamy) ಅವರು ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation) ಸಲ್ಲಿಸಿದ್ದರು. ಇದೀಗ ಮಾರ್ಚ್ 20 ರಂದು ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಕೇಂದ್ರ ಸರ್ಕಾರ ಕಳೆದ 9 ವರ್ಷಗಳಿಂದ ಈ ವಿಷಯದಲ್ಲಿ ವಿಳಂಬ ಮಾಡುತ್ತಿದೆ ಎಂದು ಸ್ವಾಮಿ ಕೋರ್ಟ್‌ಗೆ (Supreme Court) ಹೇಳಿದ್ದಾರೆ.
ಸಿಜೆಐ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ನಾವು ಶೀಘ್ರದಲ್ಲೇ ಅದನ್ನು ಆಲಿಸುತ್ತೇವೆ ಎಂದು ಹೇಳಿದೆ. ಇದಕ್ಕೂ ಮುನ್ನ ಜನವರಿ 19 ರಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ರಾಮಸೇತುವನ್ನು ರಾಷ್ಟ್ರೀಯ ಪರಂಪರೆಯಾಗಿ ಘೋಷಿಸುವ ಪ್ರಕ್ರಿಯೆಯಲ್ಲಿ ಸಂಸ್ಕೃತಿ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿತ್ತು.
ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸೂಚಿಸಿದ ಪೀಠ, ಇದರಲ್ಲಿ ಸ್ವಾಮಿ ಅವರಿಗೆ ಅಸಮಾಧಾನವಿದ್ದರೆ ಮತ್ತು ಮಧ್ಯಂತರ ಅರ್ಜಿ ವಿಲೇವಾರಿ ಮಾಡಿದರೆ ಅವರು ಮುಂದಿನ ಹಂತಕ್ಕೆ ಹೋಗಲು ಸ್ವತಂತ್ರರು ಎಂದು ಕೂಡ ಹೇಳಿದೆ.
ಸುಣ್ಣದ ಕಲ್ಲುಗಳ ಸರಪಳಿ
ರಾಮಸೇತುವನ್ನು ಆ್ಯಡಮ್ಸ್ ಸೇತುವೆ ಎಂದೂ ಕರೆಯಲಾಗುತ್ತದೆ, ಇದು ತಮಿಳುನಾಡಿನ ಆಗ್ನೇಯ ಕರಾವಳಿಯಲ್ಲಿರುವ ಪಂಬನ್ ದ್ವೀಪ ಮತ್ತು ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪದ ನಡುವಿನ ಸುಣ್ಣದ ಕಲ್ಲುಗಳ ಸರಪಳಿಯಾಗಿದೆ. ರಾಮಸೇತು ಅಸ್ತಿತ್ವವನ್ನು ಕೇಂದ್ರ ಸರ್ಕಾರ ಈಗಾಗಲೇ ಒಪ್ಪಿಕೊಂಡಿರುವುದರಿಂದ ನಾನು ಈಗಾಗಲೇ ವ್ಯಾಜ್ಯದಲ್ಲಿ ಜಯಗಳಿಸಿದ್ದೇನೆ ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Ram Setu: ರಾಮಸೇತು ರಾಮನೇ ಕಟ್ಟಿದ್ದಾ, ಪ್ರಕೃತಿಯೇ ನಿರ್ಮಿಸಿದ್ದಾ? ಅಪರೂಪದ ಸ್ಥಳ ವಿವಾದವಾಗಿದ್ದೇಕೆ?
ರಾಮಸೇತು ಎನ್ನುವುದಕ್ಕೆ ಸ್ಪಷ್ಟ ಪುರಾವೆಯಿಲ್ಲ
ರಾಮಸೇತು ಕುರಿತು ಸಂಸತ್‌ನಲ್ಲಿ ನಡೆದಿದ್ದ ಚರ್ಚೆಯಲ್ಲಿ ಹರಿಯಾಣದ ಸಂಸದ ಕಾರ್ತಿಕೇಯಾ ಶರ್ಮಾ ಚಾರಿತ್ರಿಕ ಹಿನ್ನೆಲೆ ಹೊಂದಿರುವ ರಾಮಸೇತು ಬಗ್ಗೆ ಹಿಂದಿನ ಸರಕಾರ ಉದಾಸೀನತೆ ತೋರಿದೆ. ಆದರೆ ಪುರಾತನ ಸ್ಮಾರಕವಾಗಿ ರೂಪಿಸಲು ಬಿಜೆಪಿ ಸರಕಾರ ಯಾವುದಾದರೂ ವೈಜ್ಞಾನಿಕ ಸಂಶೋಧನೆ ನಡೆಸಿದೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವ ಜಿತೇಂದ್ರ ಸಿಂಗ್, " ಭಾರತದಿಂದ -ಶ್ರೀಲಂಕಾಗೆ ಸಂಪರ್ಕ ಕೊಂಡಿಯಾಗಿ ಹಿಂದೂ ಮಹಾಸಾಗರದಲ್ಲಿ ನಿರ್ಮಿಸಿರುವ ಸೇತುವೆಯನ್ನು ರಾಮಸೇತು ಎಂದು ನಿಖರವಾಗಿ ಹೇಳುವುದು ಕಷ್ಟಕರ " ಎಂದು ತಿಳಿಸಿದ್ದರು.
ಸೇತುವೆ ರೂಪದ ರಚನೆ ಇರುವುದು ಸತ್ಯ
8 ಸಾವಿರ ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಹೇಳಲಾದ ಸೇತುವೆ ಬಗ್ಗೆ ಖಚಿತವಾಗಿ ಏನನ್ನು ಹೇಳಲಾಗದು. 56 ಕಿ.ಮೀ. ಉದ್ದದ ಸೇತುವೆಯ ಕುರುಹು ಅಲ್ಲಿದ್ದರೂ ಇದನ್ನು ರಾಮಸೇತು ಎಂದು ದೃಢವಾಗಿ ಹೇಳುವುದು ಕಷ್ಟಸಾಧ್ಯ. ಆದರೂ ಅಲ್ಲಿ ಸೇತುವೆ ರೂಪದ ರಚನೆ ಇರುವುದಂತೂ ಸತ್ಯ.
ಬಾಹ್ಯಾಕಾಶ ತಂತ್ರಜ್ಞಾನದ ಮೂಲಕ ನಾವು ಒಂದಷ್ಟು ಮಟ್ಟಿಗೆ ತುಣುಕುಗಳು ಮತ್ತು ದ್ವೀಪಗಳನ್ನು, ಒಂದು ರೀತಿಯ ಸುಣ್ಣದ ಕಲ್ಲಿನ ಹಾಸನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಆದರೆ ಅದನ್ನು ಸೇತುವೆಯ ಭಾಗಗಳು ಅಥವಾ ಅವಶೇಷಗಳು ಎಂದು ನಿಖರವಾಗಿ ಹೇಳುವುದು ಸಾಧ್ಯವಿಲ್ಲ ಎಂದು ಸಚಿವರು ತಿಳಿಸಿದ್ದರು.
ರಾಮಸೇತು ಬಗ್ಗೆ ಒಂದಿಷ್ಟು ಮಾಹಿತಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ