ಬೆಂಗಳೂರು: 2ಬಿ ಪಟ್ಟಿಯಲ್ಲಿ ಮುಸ್ಲಿಮರಿಗೆ (Reservation For Muslims) ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ರಾಜ್ಯ ಸರ್ಕಾರಕ್ಕೆ (Karnataka Govt) ಸುಪ್ರೀಂ ಕೋರ್ಟ್ (Supreme Court) ಶಾಕ್ ನೀಡಿದ್ದು, ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಜೊತೆಗೆ ಮುಸ್ಲಿಂ ಸಮುದಾಯಕ್ಕೆ ಒಬಿಸಿ ಪಟ್ಟಿಯಲ್ಲಿ ನೀಡಿದ್ದ 4% ಮೀಸಲಾತಿಯನ್ನು ರದ್ದುಗೊಳಿಸುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮೇ 9 ಕ್ಕೆ ಮುಂದೂಡಿದೆ.
ಒಬಿಸಿ ಮೀಸಲಾತಿ ಪಟ್ಟಿಯಲ್ಲಿ ಮುಸ್ಲಿಮರಿಗೆ ನೀಡಲಾಗಿದ್ದ ಶೇ. 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿತ್ತು. ಅದರನ್ವಯ ಈ ಮೀಸಲಾತಿಯನ್ನು ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಕ್ಕೆ ತಲಾ ಶೇ. 2ರಷ್ಟು ಹಂಚಿಕೆ ಮಾಡಿ, 2ಬಿಯಲ್ಲಿದ್ದ ಮುಸ್ಲಿಂ ಸಮುದಾಯವನ್ನು ಶೇ.10ರಷ್ಟು ಮೀಸಲಾತಿ ಇರುವ EWS ಕೋಟಾಕ್ಕೆ ಸ್ಥಳಾಂತರಿಸುತ್ತಿರುವುದಾಗಿ ಸರ್ಕಾರ ಹೇಳಿತ್ತು.
ಇದನ್ನೂ ಓದಿ: Siddaramaiah: ಮುಸ್ಲಿಂ ಮೀಸಲಾತಿ ನಿರ್ಧಾರ ವಾಪಸ್ ತೆಗೆದು ರಾಜ್ಯ ಸರ್ಕಾರ ಮಾನ ಉಳಿಸಿಕೊಳ್ಳಲಿ: ಸಿದ್ದರಾಮಯ್ಯ
ಸಮಯ ಕೇಳಿದ ಸರ್ಕಾರದ ಪರ ವಕೀಲ
ಮುಸ್ಲಿಂ ಮೀಸಲಾತಿ ರದ್ದತಿ ಪ್ರಕರಣದ ವಿಚಾರಣೆ ಆರಂಭಕ್ಕೂ ಮುನ್ನ ಅರ್ಜಿ ಬಗ್ಗೆ ಪ್ರಸ್ತಾಪಿಸಿದ ರಾಜ್ಯ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಮಾಹಿತಿಯುಳ್ಳ ಅಫಿಡವಿಟ್ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇನ್ನೊಂದು ವಾರ ಸಮಯ ಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿವಾದಿಯಾಗಿದ್ದ ಕಪಿಲ್ ಸಿಬಲ್ ಕೂಡಾ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳು ವಿಚಾರಣೆಯನ್ನು ವಾರಗಳ ಕಾಲ ಮುಂದೂಡಿದರು.
ಕಳೆದ ಬಾರಿ ಈ ಪ್ರಕರಣದ ವಿಚಾರಣೆಯಲ್ಲಿ ಸರ್ಕಾರದ ಮೀಸಲಾತಿ ರದ್ಧತಿ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ನ್ಯಾಯಾಲಯ ಮುಂದಿನ ವಿಚಾರಣೆ ನಡೆಯುವವರೆಗೂ ಹೊಸ ಮೀಸಲಾತಿ ಅನ್ವಯ ಯಾವುದೇ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಾತಿ ನೀಡದಂತೆ ಸೂಚನೆ ನೀಡಿತ್ತು. ಇದನ್ನು ಖಾತ್ರಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು. ಇದಕ್ಕೆ ಒಪ್ಪಿಕೊಂಡಿದ್ದ ಸರ್ಕಾರದ ಪರ ವಕೀಲರು ಹೊಸ ಮೀಸಲಾತಿ ನಿಯಮ ಸದ್ಯ ಜಾರಿ ಮಾಡುವುದಿಲ್ಲ ಎಂದು ತಿಳಿಸಿದ್ದರು.
ಸಿಎಂ ಏನ್ ಹೇಳಿದ್ದರು?
ಈ ಬಗ್ಗೆ ಅಂದು ಮಾತನಾಡಿದ್ದ ಸಿಎಂ ಬಸವರಾಜ ಬೊಮ್ಮಾಯಿ, 2ಬಿ ಅಡಿ ಮುಸ್ಲಿಮರಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ರದ್ದುಗೊಳಿಸಲಾಗಿದ್ದು, ಅವರಿಗೆ ಆರ್ಥಿಕವಾಗಿ ಹಿಂದುಳಿದ ವರ್ಗದ(EWS) ಅಡಿಯಲ್ಲಿ ಮೀಸಲಾತಿ ನೀಡಲಾಗುವುದು. ಧಾರ್ಮಿಕ ಅಲ್ಪಸಂಖ್ಯಾತರಿಗೆ 7 ರಾಜ್ಯಗಳಲ್ಲಿ ಒಬಿಸಿ ಮೀಸಲಾತಿ ಇಲ್ಲ ಎಂಬುದನ್ನು ನಾವು ಗಮನಿಸಬೇಕು ಎಂದು ಹೇಳಿದ್ದರು.
ಶೋಭಾ ಕರಂದ್ಲಾಜೆ ಹೇಳಿದ್ದೇನು?
ಇನ್ನು ಮುಸ್ಲಿಂ ಸಮುದಾಯಕ್ಕೆ ನೀಡಿದ್ದ 4% ಮೀಸಲಾತಿಯನ್ನು ರದ್ದುಗೊಳಿಸಿದ ಸರ್ಕಾರದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಂವಿಧಾನ ಪ್ರಕಾರ ಅಲ್ಪಸಂಖ್ಯಾತರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಡುವ ಬಗ್ಗೆ ಎಲ್ಲಿಯೂ ಉಲ್ಲೇಖ ಇಲ್ಲ. ಆದರೆ ನಾವು ಸುಪ್ರೀಂ ಕೋರ್ಟ್‌ಗೆ ಮತ್ತೊಮ್ಮೆ ಮನವಿ ಮಾಡುತ್ತೇವೆ ಎಂದರು.
ಸುಪ್ರೀಂ ಕೋರ್ಟ್ ಆದೇಶಕ್ಕೆ ನಮ್ಮ ಸಮ್ಮತಿ ಇಲ್ಲ ಎಂದ ಕರಂದ್ಲಾಜೆ!
ಮುಂದುವರಿದು ಮಾತನಾಡಿದ ಅವರು, 4 ಪರ್ಸೆಂಟ್ ಮೀಸಲಾತಿ ತೆಗೆಯುವ ನಿರ್ಧಾರಕ್ಕೆ ಈಗಲೂ ನಾವು ಬದ್ಧರಿದ್ದೇವೆ. ಹಿಂದೆ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಈ ಮೀಸಲಾತಿಯ ನಿರ್ಣಯ ಮಾಡಿದ್ರು. ನಾವು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತೇವೆ. ಸುಪ್ರೀಂ ಕೋರ್ಟ್ ತಡೆಗೆ ನಮ್ಮ ಸಮ್ಮತಿ ಇಲ್ಲ. ಸುಪ್ರೀಂಕೋರ್ಟ್ ಕೂಡ ಸಂವಿಧಾನದಡಿಯಲ್ಲಿ ಕೆಲಸ ಮಾಡಲು ನಾವು ಮನವಿ ಮಾಡುತ್ತೇವೆ. ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ನಮ್ಮ ವಿರೋಧವಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ