ಒಂದೆಡೆ ಕೊರೊನಾ ಹಾವಳಿ, ಮತ್ತೊಂದೆಡೆ ಲಾಕ್‌ಡೌನ್ ಅಂತ ಬ್ಯಾಂಕ್‌ಗೆ ಹೋಗುವುದು ಕಷ್ಟಸಾಧ್ಯ. ಜತೆಗೆ ವೀಕೆಂಡ್ ಆದ ಕಾರಣ ಬ್ಯಾಂಕ್ ಬಂದ್ ಆಗಿರುತ್ತೆ. ಈ ಹಿನ್ನೆಲೆ ಮನೆಯಲ್ಲೇ ಇದ್ದು ಆರಾಮಾಗಿ ನಾಳೆ ಭಾನುವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆ್ಯಪ್ ಹಾಗೂ ನೆಟ್ ಬ್ಯಾಂಕಿಂಗ್ ಸೇವೆಗಳ ಮೂಲಕ ಏನಾದರೂ ಬುಕ್ ಮಾಡಬೇಕು ಅಂದುಕೊಂಡಿರುತ್ತೀರಾ.. ಆದರೆ, ಹಾಗೆ ಮಾಡೋಕೆ ರೆಡಿಯಾಗುವ ಮುನ್ನ ಸ್ವಲ್ಪ ಇಲ್ಲಿ ನೋಡಿ. ಭಾನುವಾರ ಅಂದರೆ ಮೇ 23, 2021 ರಂದು 14 ಗಂಟೆಗಳ ಕಾಲ ಎಸ್‌ಬಿಐ ಆ್ಯಪ್ ಹಾಗೂ ನೆಟ್ ಬ್ಯಾಂಕಿಂಗ್ ಸೇವೆ ಲಭ್ಯವಿರುವುದಿಲ್ಲ!.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ನೆಫ್ಟ್ ವ್ಯವಸ್ಥೆಗಳ ತಾಂತ್ರಿಕ ನವೀಕರಣದಿಂದಾಗಿ ಅದರ ಡಿಜಿಟಲ್ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ ಭಾನುವಾರ 00:01 ರಿಂದ 14:00 ರವರೆಗೆ ಇಂಟರ್ನೆಟ್ ಬ್ಯಾಂಕಿಂಗ್, ಆ್ಯಪ್‌ಗಳಾದ ಯೋನೊ ಮತ್ತು ಯೋನೊ ಲೈಟ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಮಾಹಿತಿ ಹಂಚಿಕೊಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ, “2021 ರ ಮೇ 22 ರಂದು ಆರ್‌ಬಿಐ ತನ್ನ ನೆಫ್ಟ್ ವ್ಯವಸ್ಥೆಗಳ ನವೀಕರಣವನ್ನು ಕೈಗೊಳ್ಳಲಿದೆ. ಈ ಹಿನ್ನೆಲೆ 2021 ರ ಮೇ 23 ರ ಭಾನುವಾರ ಇಂಟರ್ನೆಟ್ ಬ್ಯಾಂಕಿಂಗ್, ಯೋನೊ ಮತ್ತು ಯೋನೊ ಲೈಟ್‌ನಲ್ಲಿ ನೆಫ್ಟ್ ಸೇವೆಗಳು ಬೆಳಿಗ್ಗೆ 00:01 ರಿಂದ 14:00 ರವರೆಗೆ ಲಭ್ಯವಿರುವುದಿಲ್ಲ. ಆರ್‌ಟಿಜಿಎಸ್ ಸೇವೆಗಳು ಎಂದಿನಂತೆ ಲಭ್ಯವಿರುತ್ತವೆ" ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.
ಇನ್ನು, ಮೇ 21 ರ ಶುಕ್ರವಾರವೂ ನಿರ್ದಿಷ್ಟ ಅವಧಿಯಲ್ಲಿ ಎಸ್‌ಬಿಐ ಇಂಟರ್ನೆಟ್ (ಆನ್‌ಲೈನ್) ಸೇವೆಗಳು ಲಭ್ಯವಿಲ್ಲ ಎಂದು ಸಹ ಗುರುವಾರ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶುಕ್ರವಾರವೂ ಸಹ ಕೆಲಕಾಲ ಎಸ್‌ಬಿಐ ಗ್ರಾಹಕರು ಅಡಚಣೆ ಅನುಭವಿಸಿದರು. ನಿರ್ವಹಣಾ ಚಟುವಟಿಕೆಗಳು ಆನ್‌ಲೈನ್ ಸೇವೆಗಳ ಅಲಭ್ಯತೆಗೆ ಕಾರಣವಾಗುತ್ತವೆ ಎಂದು ಬ್ಯಾಂಕ್ ಗುರುವಾರ ಗ್ರಾಹಕರಿಗೆ ಹೇಳಿತ್ತು. "ನಾವು ಉತ್ತಮ ಬ್ಯಾಂಕಿಂಗ್ ಅನುಭವವನ್ನು ನೀಡಲು ಶ್ರಮಿಸುತ್ತಿರುವುದರಿಂದ ನಮ್ಮ ಗೌರವಾನ್ವಿತ ಗ್ರಾಹಕರನ್ನು ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾವು ವಿನಂತಿಸುತ್ತೇವೆ" ಎಂದು ಮೇ 20 ರಂದು ಎಸ್‌ಬಿಐ ಟ್ವೀಟ್ ಮಾಡಿತ್ತು.
ಮೇ 7 ಮತ್ತು 8 ರಂದು ಸಹ ಎಸ್‌ಬಿಐನ ಆನ್‌ಲೈನ್ ಸೇವೆಗಳು ನಿರ್ವಹಣೆಯ ಕಾರಣದಿಂದಾಗಿ ಪರಿಣಾಮ ಬೀರಿದ್ದವು.
ದೇಶಾದ್ಯಂತ 22,000 ಕ್ಕೂ ಹೆಚ್ಚು ಶಾಖೆಗಳು ಮತ್ತು 57,889 ಕ್ಕೂ ಹೆಚ್ಚು ಎಟಿಎಂಗಳನ್ನು ಹೊಂದಿರುವ ಎಸ್‌ಬಿಐ ಭಾರತದ ಅತಿದೊಡ್ಡ ಸಾಲ ನೀಡುವ ಬ್ಯಾಂಕ್. ಇದು ಡಿಸೆಂಬರ್ 31 ರ ವೇಳೆಗೆ 85 ಮಿಲಿಯನ್ ಇಂಟರ್ನೆಟ್ ಬ್ಯಾಂಕಿಂಗ್ ಮತ್ತು 19 ಮಿಲಿಯನ್ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರನ್ನು ಹೊಂದಿದೆ. ಎಸ್‌ಬಿಐ ಯೋನೊ 34.5 ಮಿಲಿಯನ್ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ದಿನಕ್ಕೆ 9 ಮಿಲಿಯನ್ ಲಾಗಿನ್‌ಗಳಿಗೆ YONO ಸಾಕ್ಷಿಯಾಗಿದೆ ಎಂದು ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಾಹಿತಿ ನೀಡಿತ್ತು.
We request our esteemed customers to bear with us as we strive to provide a better banking experience.#SBI #StateBankOfIndia #ImportantNotice #InternetBanking #OnlineSBI pic.twitter.com/a3zwn5qprb
— State Bank of India (@TheOfficialSBI) May 21, 2021
ಅಲ್ಲದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ 30 ಲಕ್ಷ ರೂ.ವರೆಗಿನ ಸಾಲಗಳಿಗೆ ಗೃಹ ಸಾಲ ಬಡ್ಡಿದರಗಳನ್ನು 6.70% ಕ್ಕೆ ಇಳಿಸಿದೆ. ಇನ್ನು, 30 ಲಕ್ಷ ರೂ.ಗಿಂತ ಹೆಚ್ಚಿನ ಮತ್ತು 75 ಲಕ್ಷ ರೂ.ವರೆಗಿನ ಗೃಹ ಸಾಲಗಳಿಗೆ ಬಡ್ಡಿದರವನ್ನು 6.95% ಎಂದು ನಿಗದಿಪಡಿಸಲಾಗಿದೆ. ಹಾಗೂ, 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಬಡ್ಡಿದರವನ್ನು 7.05% ಎಂದು ನಿಗದಿಪಡಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ