ಭಾರತ ಸೇರಿ ಏಷ್ಯನ್ ಮಾರುಕಟ್ಟೆಗಳಿಗೆ ಕಚ್ಛಾ ತೈಲ ಬೆಲೆ ಏರಿಸಿದ ಸೌದಿ; ಪರ್ಯಾಯ ಮಾರ್ಗಕ್ಕೆ ಭಾರತ ಯತ್ನ

ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಗೆ ತೈಲ ಬೆಲೆ ಇಳಿಕೆ ಮಾಡಿರುವ ಸೌದಿ ಅರಾಮ್ಕೋ ತೈಲೋತ್ಪಾದಕ ಸಂಸ್ಥೆ, ಭಾರತ ಸೇರಿ ಏಷ್ಯನ್ ಮಾರುಕಟ್ಟೆಗಳಿಗೆ 0.4 ಡಾಲರ್, ಅಂದರೆ ಪ್ರತಿ ಬ್ಯಾರಲ್ ಕಚ್ಛಾ ತೈಲದ ಬೆಲೆಯನ್ನು ಸುಮಾರು 30 ರೂಪಾಯಿಯಷ್ಟು ಏರಿಕೆ ಮಾಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ನವದೆಹಲಿ(ಏ. 05): ಕಚ್ಛಾ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೈಲ ಉತ್ಪಾದನೆ ಹೆಚ್ಚಿಸುವಂತೆ ಭಾರತ ಪದೇ ಪದೇ ಮನವಿ ಮಾಡಿಕೊಂಡರೂ ಓಪೆಕ್ ರಾಷ್ಟ್ರಗಳು ಕಿವಿಗೊಡುತ್ತಿಲ್ಲ. ಈ ಮಧ್ಯೆ ಸೌದಿ ಅರೇಬಿಯಾ ರಾಷ್ಟ್ರವು ಏಷ್ಯನ್ ಮಾರುಕಟ್ಟೆಗೆ ಶಾಕ್ ಕೊಟ್ಟಿದೆ. ಸೌದಿ ಅರಾಮ್ಕೋ ಸಂಸ್ಥೆ ಮೇ ತಿಂಗಳಿಗೆ ಏಷ್ಯನ್ ಮಾರುಕಟ್ಟೆಗೆ ನೀಡುವ ಕಚ್ಛಾ ತೈಲದ ಬೆಲೆಯನ್ನು ಒಂದು ಬ್ಯಾರಲ್​ಗೆ 0.4 ಡಾಲರ್​ನಷ್ಟು ಬೆಲೆ ಏರಿಕೆ ಮಾಡಿದೆ. ಅಂದರೆ ಒಂದು ಬ್ಯಾರೆಲ್​ಗೆ 30 ರೂಪಾಯಿಯಷ್ಟು ಬೆಲೆ ಹೆಚ್ಚಳವಾಗಿದೆ. ಕುತೂಹಲದ ವಿಚಾರವೆಂದರೆ ಇದೇ ಅವಧಿಗೆ ಅಮೆರಿಕದ ಮಾರುಕಟ್ಟೆಗೆ 0.1 ಡಾಲರ್ ಹಾಗೂ ಐರೋಪ್ಯ ಮಾರುಕಟ್ಟೆಗಳಿಗೆ 0.2 ಡಾಲರ್ ಬೆಲೆ ಇಳಿಕೆ ಮಾಡಲಾಗಿದೆ. ಭಾರತ ಇದೀಗ ಒಂದು ಬ್ಯಾರೆಲ್ ಕಚ್ಛಾ ತೈಲಕ್ಕೆ 130 ರೂಪಾಯಿಗೂ ಹೆಚ್ಚು ಹಣ ತೆತ್ತು ಕೊಳ್ಳಬೇಕಾಗಬಹುದು. ಈ ಪರಿಸ್ಥಿತಿಯಲ್ಲಿ ಬದಲಾವಣೆ ಆಗದೇ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್​ಗೆ 120 ರೂ ದಾಟಿದರೂ ಅಚ್ಚರಿ ಇಲ್ಲ.

ಬೇರೆ ಬೇರೆ ಕಾರಣಗಳಿಗಾಗಿ ಭಾರತ ಸೇರಿ ಏಷ್ಯಾದ ಬಹುತೇಕ ದೇಶಗಳು ಅರಬ್ ರಾಷ್ಟ್ರಗಳ ತೈಲದ ಮೇಲೆ ಅವಲಂಬಿತವಾಗಿವೆ. ಅರಬ್​ನ ತೈಲ ದೇಶಗಳ ಗುಂಪಾಗಿರುವ OPEC ಕಳೆದ ಕೆಲ ತಿಂಗಳುಗಳಿಂದ ತೈಲೋತ್ಪಾದನೆ ನಿಲ್ಲಿಸಿವೆ. ಇದರಿಂದಾಗಿ ಕಚ್ಛಾ ತೈಲ ಬೆಲೆ ಬಹುತೇಕ ದ್ವಿಗುಣಗೊಂಡಿವೆ. ತೈಲ ಉತ್ಪಾದನೆ ಪುನಾರಂಭಿಸುವಂತೆ ಭಾರತ ಪದೇ ಪದೇ ಮನವಿ ಮಾಡುತ್ತಲೇ ಬಂದಿದೆ. ಇದು ಒಪೆಕ್ ರಾಷ್ಟ್ರಗಳು ಹಾಗೂ ಭಾರತದ ಮಧ್ಯೆ ಇರಿಸುಮುರುಸಿನ ಸ್ಥಿತಿಗೂ ಕಾರಣವಾಗಿದೆ. ಸೌದಿ ಅರೇಬಿಯಾ ವಿರುದ್ಧ ಭಾರತ ಕಠಿಣ ಭಾಷೆಯಲ್ಲೇ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ತೈಲ ಉತ್ಪಾದನೆ ಸ್ಥಗಿತಗೊಳಿಸುವ ತಮ್ಮ ನಿಲುವನ್ನು ಒಪೆಕ್ ದೇಶಗಳು ಮುಂದುವರಿಸಿವೆ. ಇದರಿಂದಾಗಿ, ಭಾರತ ಬೇರೆ ಬೇರೆ ಪರ್ಯಾಯ ತೈಲ ಮಾರುಕಟ್ಟೆಗಳನ್ನ ಶೋಧಿಸುವ ಕಾರ್ಯಕ್ಕೆ ಗಮನ ಕೊಡುತ್ತಿದೆ. ತಿಂಗಳ ಹಿಂದೆಯೇ ಕೇಂದ್ರ ಸರಕಾರ ಭಾರತೀಯ ಕಂಪನಿಗಳಿಗೆ ಈ ಬಗ್ಗೆ ಗಂಭೀರವಾಗಿ ಸೂಚನೆ ಕೂಡು ಕೊಟ್ಟಿದೆ.

ಇದನ್ನೂ ಓದಿ: ಒಂದು ರೂಪಾಯಿಗೆ ಒಂದು ಇಡ್ಲಿ ಮಾರುತ್ತಿದ್ದ ಮಹಿಳೆಗೆ ಮನೆ ನಿರ್ಮಿಸಿಕೊಡುತ್ತಿರುವ ಆನಂದ್ ಮಹಿಂದ್ರಾ

“OPEC+ ನಿರ್ಧಾರ ನಮಗೆ ಬೇಸರ ತಂದಿದೆ. ಭಾರತ, ಚೀನಾ, ಜಪಾನ್, ಕೊರಿಯಾ ಮತ್ತಿತರ ಹೆಚ್ಚು ತೈಲ ಅನುಭೋಗಿಸುವ ದೇಶಗಳಿಗೆ ಇದು ಒಳ್ಳೆಯ ಸುದ್ದಿಯಲ್ಲ. ಬೇರೆ ಬೇರೆ ಕಡೆ ತೈಲಾನ್ವೇಷಣೆ ನಡೆಸುವಂತೆ ನಾವು ಕಂಪನಿಗಳಿಗೆ ಹೇಳಿದ್ದೇವೆ. ಮಧ್ಯಪ್ರಾಚ್ಯ ತೈಲೋತ್ಪಾದಕರು ಕೈಗೊಳ್ಳುವ ನಿರ್ಧಾರಗಳ ಮೇಲೆ ನಾವು ಅವಲಂಬಿತವಾಗಬಾರದು” ಎಂದು ಮಾರ್ಚ್ ತಿಂಗಳಲ್ಲಿ ಕೇಂದ್ರ ಪೆಟ್ರೋಲಿಯಮ್ ಸಚಿವರು ಹೇಳಿದ್ದರು.

ಭಾರತದ ಈ ವಾದವನ್ನು ಒಪ್ಪಲು ಸೌದಿ ಅರೇಬಿಯಾ ಸುತಾರಾಂ ಸಿದ್ಧವಿಲ್ಲ. 2020ರಲ್ಲಿ ತೈಲ ಬೆಲೆ ಪಾತಾಳಕ್ಕೆ ಕುಸಿದ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಕೊಂಡು ಸಂಗ್ರಹಿಸಲಾದ ಕಚ್ಛಾ ತೈಲವನ್ನು ಭಾರತ ಮೊದಲು ಬಳಕೆ ಮಾಡಿ ಮುಗಿಸಲಿ ಎಂದು ಸೌದಿ ಅರೇಬಿಯಾದ ಇಂಧನ ಸಚಿವರು ತಿರುಗೇಟು ನೀಡಿದ್ದಾರೆ.

ಭಾರತಕ್ಕೆ ಸರಬರಾಜಾಗುವ ತೈಲದಲ್ಲಿ ಶೇ. 60 ಪ್ರಮಾಣವನ್ನು ಪಶ್ಚಿಮ ಏಷ್ಯಾ ರಾಷ್ಟ್ರಗಳೇ ಪೂರೈಸುತ್ತವೆ. ಇದಕ್ಕೆ ಕಾರಣಗಳು ಹಲವಿವೆ. ಪಶ್ಚಿಮ ಏಷ್ಯನ್ ದೇಶಗಳು ಸಮೀಪದಲ್ಲೇ ಇರುವುದರಿಂದ ತೈಲ ಸಾಗಣೆಯ ವೆಚ್ಚ ಕಡಿಮೆ ಇರುತ್ತದೆ. ಹಾಗೂ ಬೇಡಿಕೆ ಇದ್ದಷ್ಟು ತೈಲವನ್ನು ಪೂರೈಸುವಷ್ಟು ಸಾಮರ್ಥ್ಯ ಈ ರಾಷ್ಟ್ರಗಳಿಗೆ ಇವೆ. ಇವಕ್ಕೆ ಪರ್ಯಾಯ ಎಂದರೆ ಅಮೆರಿಕ ಮತ್ತು ಆಫ್ರಿಕಾ. ಆದರೆ, ಅಮೆರಿಕದಿಂದ ಆಮದು ಮಾಡಿಕೊಳ್ಳಬೇಕೆಂದರೆ ಸಾಗಣೆ ವೆಚ್ಚ ದುಬಾರಿಯಾಗುತ್ತದೆ. ಆಫ್ರಿಕಾದ ತೈಲ ಮಾರುಕಟ್ಟೆಯಲ್ಲಿ ಏಷ್ಯಾ ದೇಶಗಳ ಪೆಟ್ರೋಲ್ ಬೇಡಿಕೆಗೆ ಅನುಗುಣವಾಗಿ ಪೂರೈಸುವಷ್ಟು ತೈಲ ಸಂಗ್ರಹ ಇಲ್ಲ. ಹೀಗಾಗಿ ಓಪೆಕ್ ದೇಶಗಳ ಗುಂಪಿನ ಮೇಲೆ ಏಷ್ಯಾದ ಇತರ ದೇಶಗಳು ಬಹಳ ಅವಲಂಬಿತವಾಗಿವೆ.
Published by:Vijayasarthy SN
First published: