ಪಾಕಿಸ್ತಾನಕ್ಕೆ ತೈಲ ಪೂರೈಕೆ ಸ್ಥಗಿತಗೊಳಿಸಿದ ಸೌದಿ; ಕಾಶ್ಮೀರ ವಿಚಾರದಲ್ಲಿ ಪಾಕ್​ಗೆ ಮತ್ತೆ ಮುಖಭಂಗ

ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ನಿಲುವು ತೆಗೆದುಕೊಳ್ಳಲು ಓಐಸಿ ಸಭೆ ಕರೆಯಬೇಕೆಂದು ಪಾಕಿಸ್ತಾನ ನಿರಂತರವಾಗಿ ಒತ್ತಡ ಹೇರುತ್ತಾ ಬಂದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ತನ್ನ ಸಂಬಂಧವನ್ನೇ ಕಡಿದುಕೊಂಡಿದೆ.

ಸೌದಿ ಅರೇಬಿಯಾ ದೊರೆ ಸಲ್ಮಾನ್

ಸೌದಿ ಅರೇಬಿಯಾ ದೊರೆ ಸಲ್ಮಾನ್

  • Share this:
ನವದೆಹಲಿ(ಆ. 12): ಕಾಶ್ಮೀರ ವಿಚಾರದಲ್ಲಿ ಭಾರತದ ವಿರುದ್ಧ ಎತ್ತಿಕಟ್ಟಲು ಹೋಗಿ ಪಾಕಿಸ್ತಾನ ತನ್ನ ಸಾಂಪ್ರದಾಯಿಕ ಸ್ನೇಹಿ ರಾಷ್ಟ್ರದ ಸಖ್ಯವನ್ನು ಕಳೆದುಕೊಂಡಿದೆ. ತನ್ನ ಕಾಲೆಳೆಯುತ್ತಿದ್ದ ಪಾಕಿಸ್ತಾನದೊಂದಿಗೆ ಸೌದಿ ಅರೇಬಿಯಾ ಸ್ನೇಹ ಕಡಿದುಕೊಂಡಿದೆ. ಪಾಕಿಸ್ತಾನಕ್ಕೆ ತನ್ನ ತೈಲ ಪೂರೈಕೆಯನ್ನು ಸೌದಿ ಸ್ಥಗಿತಗೊಳಿಸಿದೆ. ಹಾಗೆಯೇ, ತಾನು ನೀಡಿದ್ದ ಕೋಟ್ಯಂತರ ಮೊತ್ತದ ಸಾಲವನ್ನೂ ವಾಪಸ್ ವಸೂಲಿ ಮಾಡಿದೆ. ಇದರೊಂದಿಗೆ ಸೌದಿ ಅರೇಬಿಯಾ ಮತ್ತು ಪಾಕಿಸ್ತಾನದ ನಡುವಿನ 10 ವರ್ಷದ ಬಾಂಧವ್ಯ ಅಂತ್ಯಗೊಂಡಂತಾಗಿದೆ.

ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಅವರು ಪಾಕಸ್ತಾನಕ್ಕೆ ಭೇಟಿ ನೀಡಿದ್ದಾಗ 6.2 ಬಿಲಿಯನ್ ಡಾಲರ್ (46 ಸಾವಿರ ಕೋಟಿ ರೂಪಾಯಿ) ಮೊತ್ತದ ಪ್ಯಾಕೇಜ್​ಗೆ ಸಹಿ ಹಾಕಿದ್ದರು. ಇದರಲ್ಲಿ ತೈಲ ಪೂರೈಕೆ ಒಪ್ಪಂದ ಹಾಗೂ ಸಾಲ ಸೌಲಭ್ಯ ಸೇರಿತ್ತು. ಅದರಂತೆ ಸೌದಿ ಅರೇಬಿಯಾ 1 ಬಿಲಿಯನ್ ಡಾಲರ್ (7,400 ಕೋಟಿ ರೂ) ಸಾಲವನ್ನೂ ನೀಡಿತ್ತು. ಇದೀಗ ಆ ಹಣವನ್ನು ಸೌದಿ ವಾಪಸ್ ಪಡೆದಿದೆ.

ಈ ದಿಢೀರ್ ಬೆಳವಣಿಗೆಗೆ ಕಾರಣವಾಗಿದ್ದು ಪಾಕಿಸ್ತಾನ ಈಚೆಗೆ ಏರುತ್ತಿದ್ದ ಒತ್ತಡ ಎನ್ನಲಾಗಿದೆ. ಕಾಶ್ಮೀರದಲ್ಲಿ ಭಾರತ ದೌರ್ಜನ್ಯ ಎಸಗುತ್ತಿದೆ. ಅದರ ವಿರುದ್ಧ ನಿಲುವು ತೆಗೆದುಕೊಳ್ಳಬೇಕು ಎಂದು ಸೌದಿ ಅರೇಬಿಯಾ ನೇತೃತ್ವದ ಇಸ್ಲಾಮಿಕ್ ಸಹಕಾರ ಸಂಘಟನೆ (ಓಐಸಿ) ಮೇಲೆ ಪಾಕಿಸ್ತಾನ ನಿರಂತರವಾಗಿ ಒತ್ತಡ ಹೇರುತ್ತಿದೆ. ಆದರೆ, ಇದಕ್ಕೆ ಸೌದಿ ಅರೇಬಿಯಾ ಸ್ಪಂದಿಸದೇ ಇರುವುದಕ್ಕೆ ಹತಾಶೆಗೊಂಡ ಪಾಕಿಸ್ತಾನ ತಾನೇ ಮುಂದಾಗಿ ಓಐಸಿ ಸಭೆ ಕರೆಯುವುದಾಗಿ ಹೇಳಿತ್ತು. ಇದು ಸೌದಿಗೆ ಇರಿಸುಮುರುಸು ತಂದಿದೆ ಎನ್ನಲಾಗಿದೆ.

“ನಿಮಗೆ ಸಭೆ ಕರೆಯಲು ಆಗುವುದಿಲ್ಲವಾದರೆ ತಿಳಿಸಿ. ಕಾಶ್ಮೀರ ವಿಚಾರದಲ್ಲಿ ನಮ್ಮನ್ನು ಬೆಂಬಲಿಸುವ ಮತ್ತು ಕಾಶ್ಮೀರಿಗಳನ್ನ ಬೆಂಬಲಿಸುವ ಇಸ್ಲಾಮೀ ರಾಷ್ಟ್ರಗಳ ಸಭೆಯನ್ನು ತಾವೇ ಖುದ್ದಾಗಿ ಕರೆಯುವಂತೆ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನಾನು ಹೇಳುವುದು ಅನಿವಾರ್ಯವಾಗುತ್ತದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಷಿ ಅವರು ಹೇಳಿದ್ದರು.

ಇದನ್ನೂ ಓದಿ: Naxal Encounter: ಛತ್ತೀಸ್​ಘಡದಲ್ಲಿ ನಾಲ್ವರು ನಕ್ಸಲರ ಎನ್​ಕೌಂಟರ್

“ವಿದೇಶಾಂಗ ಸಚಿವರ ಮಂಡಳಿಯ ಸಭೆ ನಡೆಸುವುದು ನಮ್ಮ ನಿರೀಕ್ಷೆ ಎಂದು ಓಐಸಿಗೆ ನಾವು ಗೌರವಯುತವಾಗಿ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇವೆ” ಎಂದೂ ಖುರೇಷಿ ಹೇಳಿಕೆ ನೀಡಿದ್ದರು.

ಕಳೆದ ವರ್ಷ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಪಾಕಿಸ್ತಾನ ಈ ವಿಚಾರವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತಾಪ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಚೀನಾ ಬಿಟ್ಟರೆ ಪಾಕಿಸ್ತಾನಕ್ಕೆ ಪ್ರಮುಖ ಬೆಂಬಲ ಸಿಕ್ಕಿಲ್ಲ. ಇಸ್ಲಾಮಿಕ್ ರಾಷ್ಟ್ರಗಳ ಓಐಸಿ ಸಂಘಟನೆಯ ಬೆಂಬಲ ಗಿಟ್ಟಿಸಲೂ ಪಾಕಿಸ್ತಾನ ಬಹಳಷ್ಟು ವಿಫಲಪ್ರಯತ್ನ ನಡೆಸಿದೆ. “ನಮ್ಮ ಧ್ವನಿಯೇ ಕ್ಷೀಣಗೊಂಡಿದೆ. ನಮ್ಮಲ್ಲೇ ಒಡಕುಗಳಿವೆ. ಕಾಶ್ಮೀರ ವಿಚಾರದ ಮೇಲೆ ಓಐಸಿ ಸಭೆ ನಡೆಸುವ ಒಗ್ಗಟ್ಟೂ ಇಲ್ಲವಾಗಿದೆ” ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇದೇ ಮೇ 22ರಂದು ಅಲವತ್ತುಕೊಂಡಿದ್ದರು.

ಕಾಶ್ಮೀರ ವಿಚಾರವಷ್ಟೇ ಅಲ್ಲ, ಭಾರತದಲ್ಲಿ ಇಸ್ಲಾಮೋಫೋಬಿಯಾ (ಇಸ್ಲಾಮ್ ಬಗೆಗಿನ ಪೂರ್ವಗ್ರಹ ಅಭಿಪ್ರಾಯ) ಇದೆ ಎಂದು ಆರೋಪಿಸಿ ಭಾರತದ ವಿರುದ್ಧ ಅಭಿಪ್ರಾಯ ರೂಪಿಸಲೂ ಪಾಕಿಸ್ತಾನ ಪ್ರಯತ್ನ ಮಾಡುತ್ತಿದೆ. ಆದರೆ, ಮುಸ್ಲಿಮ್ ರಾಷ್ಟ್ರವಾದರೂ ಭಾರತದ ಸ್ನೇಹ ರಾಷ್ಟ್ರವಾಗಿರುವ ಮಾಲ್ಡೀವ್ಸ್ ಈ ವಿಚಾರದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಲು ನಕಾರ ತೋರಿದೆ.

ಇದನ್ನೂ ಓದಿ: Covid 19 Vaccine: ರಷ್ಯಾ ಬಳಿಕ‌ ಕೊರೋನಾಗೆ ಲಸಿಕೆ ಕಂಡುಹಿಡಿಯಲು ಭಾರತದಲ್ಲೂ ಚುರುಕುಗೊಂಡ ಕಾರ್ಯಾಚರಣೆ

“ಕುಪ್ರೇರೇಪಿತ ಜನರು ನೀಡುವ ಹೇಳಿಕೆ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹರಡುತ್ತಿರುವ ತಪ್ಪು ಮಾಹಿತಿಯನ್ನೇ 130 ಕೋಟಿ ಜನರ ಭಾವನೆ ಎಂದು ಭಾವಿಸಲು ಸಾಧ್ಯವಿಲ್ಲ” ಎಂದು ಮಾಲ್ಡೀವ್ಸ್ ಹೇಳಿದೆ.ಇನ್ನು, ಭಾರತದಲ್ಲಿ ಇಸ್ಲಾಮೊಫೋಬಿಯಾ ಇದೆ ಎಂಬ ಆರೋಪದಲ್ಳೂ ಹುರುಳಿಲ್ಲ. ಇಂಥ ಆರೋಪಗಳು ದಕ್ಷಿಣ ಏಷ್ಯಾದ ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುತ್ತದೆ. ಭಾರತದಲ್ಲಿ ಇಸ್ಲಾಮ್ ಶತಮಾನಗಳಿಂದಲೂ ಅಸ್ತಿತ್ವದಲ್ಲಿದೆ. ಇಲ್ಲಿ ಶೇ 14.2ರಷ್ಟು ಇರುವ ಇಸ್ಲಾಮ್ ಇಲ್ಲಿನ ಎರಡನೇ ಅತಿದೊಡ್ಡ ಧರ್ಮವಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಮಾಲ್ಡೀವ್ಸ್​ನ ಖಾಯಂ ಪ್ರತಿನಿಧಿಯಾಗಿರುವ ತಿಲಮೀಳ ಹುಸೇನ್ ಅಭಿಪ್ರಾಯಪಟ್ಟಿದ್ದಾರೆ.
Published by:Vijayasarthy SN
First published: