Sasikanth Senthil: ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ನಾಳೆ ಕಾಂಗ್ರೆಸ್ಗೆ ಸೇರ್ಪಡೆ
ಸಸಿಕಾಂತ್ ಸೆಂಥಿಲ್ ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ದಿಢೀರನೆ ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಸಾಮಾಜಿಕ ಹೋರಾಟಗಳಿಗೆ ಧುಮುಕಿದ್ದರು. ಅವರು ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.
ನವದೆಹಲಿ (ನ. 8): ರಾಜಕೀಯ ಪಕ್ಷಗಳನ್ನು ಸೇರುತ್ತಿರುವ ಅಧಿಕಾರಿಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇತ್ತೀಚೆಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರಿದ್ದರು. ಈಗ ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಕಾಂಗ್ರೆಸ್ ಸೇರುತ್ತಿದ್ದಾರೆ. ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ನವೆಂಬರ್ 9ರಂದು ತಮಿಳುನಾಡಿನ ಚೆನ್ನೈನಲ್ಲಿ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಬಗ್ಗೆ ಸೆಂಥಿಲ್ ಅವರೇ ಟ್ವಿಟರ್ ಮೂಲಕ ಘೋಷಿಸಿದ್ದಾರೆ.
ವಿಶೇಷ ಎಂದರೆ ಅಣ್ಣಾಮಲೈ ಅವರ ರೀತಿ ಸಸಿಕಾಂತ್ ಸೆಂಥಿಲ್ ಕೂಡ ರಾಷ್ಟ್ರೀಯ ಪಕ್ಷಗಳಿಗೆ ಮಾನ್ಯತೆ ಇಲ್ಲದ ತಮಿಳುನಾಡಿನ ರಾಜಕಾರಣದ ಮೇಲೆ ಆಸಕ್ತಿ ಹೊಂದಿದ್ದಾರೆ. ತಮಿಳುನಾಡಿನಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಸಿಕಾಂತ್ ಸೆಂಥಿಲ್ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯುವ ಸಾಧ್ಯತೆಗಳು ಕೂಡ ಇವೆ.
I would like to inform all that I have decided to join the Congress party in my effort to continue the fight. I have been an activist trying to be a voice for the less privileged all through my life, wherever I was and would continue the same until my last breath. pic.twitter.com/na3fMn4ueM
ದಕ್ಷ ಅಧಿಕಾರಿ, ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಅಧಿಕಾರಿ ಎಂಬ ಕಾರಣಕ್ಕಾಗಿ ಸಸಿಕಾಂತ್ ಸೆಂಥಿಲ್ ಜಿಲ್ಲಾಧಿಕಾರಿಯಾಗಿ ಬಹಳ ಹೆಸರುವಾಸಿಯಾಗಿದ್ದರು. ಕಳೆದ ವರ್ಷ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದಾಗ ದಿಢೀರನೆ ತಮ್ಮ ಉದ್ಯೋಗಕ್ಕೆ ರಾಜೀನಾಮೆ ಕೊಟ್ಟು ಸಾಮಾಜಿಕ ಹೋರಾಟಗಳಿಗೆ ಧುಮುಕಿದ್ದರು. ಎನ್ ಆರ್ ಸಿ ಮತ್ತು ಸಿಎಎಗಳನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ನಡೆದ ಪ್ರತಿಭಟನೆ, ವಿಚಾರ ಸಂಕಿರಣ, ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಐಎಎಸ್ ಅಧಿಕಾರಿಯಾಗಿದ್ದುಕೊಂಡು ಸರ್ಕಾರದ ನಡೆಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದ ಸಸಿಕಾಂತ್ ಸೆಂಥಿಲ್ ಈಗ ’ಹೋರಾಟವನ್ನು ಮುಂದುವರೆಸುವ ದೃಷ್ಟಿಯಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ' ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ರಾಜಕಾರಣ ಪ್ರವೇಶಿಸುವ ಸಂದರ್ಭದಲ್ಲಿ ಟ್ವೀಟ್ ಮೂಲಕ ಹಲವು ಸಂಗತಿಗಳನ್ನು ಹಂಚಿಕೊಂಡಿರುವ ಸಸಿಕಾಂತ್ ಸೆಂಥಿಲ್, 'ಎಲ್ಲಿದ್ದರೂ ನನ್ನ ಜೀವನದುದ್ದಕ್ಕೂ ನಿರ್ಲಕ್ಷ್ಯಕ್ಕೆ ಒಳಗಾದವರಿಗೆ ಧ್ವನಿಯಾಗಲು ಪ್ರಯತ್ನಿಸುತ್ತಿರುವ ಕಾರ್ಯಕರ್ತನಾಗಿದ್ದೇನೆ ಮತ್ತು ನನ್ನ ಕೊನೆಯ ಉಸಿರಿರುವವರೆಗೂ ಅದೇ ರೀತಿ ಮುಂದುವರಿಯುತ್ತೇನೆ’ ಎಂಬ ವಾಗ್ದಾನ ನೀಡಿದ್ದಾರೆ.
41 ವರ್ಷದ 2009ರ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಕಳೆದ ವರ್ಷದ ಸೆಪ್ಟೆಂಬರ್ 6 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ಎಐಸಿಸಿ ಉಸ್ತುವಾರಿ ಮತ್ತು ಕರ್ನಾಟಕ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ 41 ವರ್ಷದ ಕರ್ನಾಟಕ-ಕೇಡರ್ ಐಎಎಸ್ ಅಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಲಾಗಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ