ಮುಂಬೈ: ಶಿವಸೇನೆ (Shiv Sena Party) ಪಕ್ಷದ ಚಿಹ್ನೆ ಸಿಎಂ ಏಕನಾಥ್ ಶಿಂಧೆ (CM Eknath Shinde) ಬಣದ ಪಾಲಾದ ನಂತರ ಶಿವಸೇನೆಯ ಉದ್ಧವ್ ಠಾಕ್ರೆ (Uddhav Thackeray) ಬಣ ಗಾಯಗೊಂಡ ಹುಲಿಯಂತಾಗಿದ್ದು, ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇದೆ. ಇದೀಗ ಮತ್ತೊಮ್ಮೆ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್ (Sanjay Raut) ಅವರು ಶಿವಸೇನೆ ಪಕ್ಷದ ಚಿಹ್ನೆಯ ಕುರಿತು ಪ್ರತಿಕ್ರಿಯೆ ನೀಡಿದ್ದು, ಶಿವಸೇನೆಯ ಹೆಸರು ಮತ್ತು ಚಿಹ್ನೆ ಯಾರಿಗೆ ಸಿಗುತ್ತದೆ ಎಂಬ ನಿರ್ಧಾರವನ್ನು ಸುಪ್ರೀಂ ಕೋರ್ಟ್ (Supreme Court) ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಶಿವಸೇನೆ ವಿಭಜನೆಯ ಕುರಿತು ಸುಪ್ರೀಂ ಕೋರ್ಟ್‌ನ ಮಹತ್ವದ ವಿಚಾರಣೆಯ ಮುನ್ನಾದಿನ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಸಂಜರ್ ರಾವತ್, ಶಿವಸೇನೆಯ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ‘ಖರೀದಿಸಲು’ ₹2000 ಕೋಟಿಯ ಒಪ್ಪಂದವನ್ನು ಮಾಡಲಾಗಿದೆ. ಮುಂಬರುವ ಮುನ್ಸಿಪಲ್ ಚುನಾವಣೆಯಲ್ಲಿ ದೇಶದ ಶ್ರೀಮಂತ ನಾಗರಿಕ ಸಂಸ್ಥೆಯಾದ ಬೃಹತ್ ಮುಂಬೈ ಮಹಾನಗರ ಪಾಲಿಕೆಯನ್ನು ವಶಪಡಿಸಿಕೊಳ್ಳಲು ಸಂಪೂರ್ಣ ಯೋಜನೆಯನ್ನು ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಸುಪ್ರೀಂ ಕೋರ್ಟ್ ನಿರ್ಧಾರ ಮಾಡುತ್ತದೆ
ಶಿವಸೇನೆ ಪಕ್ಷದ ಬಿಲ್ಲು ಮತ್ತು ಬಾಣದ ಗುರುತಿನ ಚಿಹ್ನೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಪಾಲಾದ ನಂತರ ಚುನಾವಣಾ ಆಯೋಗದ ತೀರ್ಪಿನ ವಿರುದ್ಧ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಬಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಪಕ್ಷದ ಚಿಹ್ನೆಯ ಕುರಿತು ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ಶಿವಸೇನೆಯ ಹೆಸರು ಮತ್ತು ಚಿಹ್ನೆ ಯಾರಿಗೆ ಸಿಗುತ್ತದೆ ಎಂಬ ನಿರ್ಧಾರವನ್ನು ಸುಪ್ರೀಂ ಕೋರ್ಟ್ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಇದೆಲ್ಲವೂ ದೆಹಲಿ ಸ್ಕ್ರಿಪ್ಟ್‌ನ ಭಾಗ
ಈ ಕುರಿತು ನಿರ್ಧಾರವು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತದೆ ಎಂದಿರುವ ಸಂಜಯ್ ರಾವತ್, ಈ ವಿಚಾರ ಕಗ್ಗಂಟಾಗಿರುವ ಕಾರಣ ಚುನಾವಣಾ ಆಯೋಗವು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದರೆ ಚುನಾವಣಾ ಆಯೋಗ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಇದರ ಹಿಂದೆ ಯಾರಿದ್ದಾರೆ? ಮೊದಲೇ ನಿರ್ಧರಿಸಿದ ಪ್ಲಾನ್ ಅನ್ನು ಈಗಾಗಲೇ ಮಾಡಲಾಗಿದೆ. ಯಾವಾಗ ಏನು ಮಾಡಬೇಕು, ಯಾವಾಗ ನಿರ್ಧಾರ ತೆಗೆದುಕೊಳ್ಳಬೇಕು, ಯಾವ ದಿನ ರಾಜ್ಯಪಾಲರನ್ನು ಬದಲಾಯಿಸಬೇಕು, ಅಮಿತ್ ಶಾ ಯಾವಾಗ ಬರುತ್ತಾರೆ? ಇದೆಲ್ಲವೂ ದೆಹಲಿ ಸ್ಕ್ರಿಪ್ಟ್‌ನ ಭಾಗವಾಗಿದೆ. ದೆಹಲಿ ಜನರು ಸ್ಕ್ರಿಪ್ಟ್ ಬರೆದರೆ ಮಹಾರಾಷ್ಟ್ರದವರು ಅದಕ್ಕೆ ತಕ್ಕಂತೆ ಕುಣಿಯುತ್ತಾರೆ ಎಂದು ರಾವತ್ ಕುಹಕವಾಡಿದರು.
ಶಿವಸೇನೆ ಪಕ್ಷಕ್ಕೆ ಸಂಬಂಧಿಸಿದ ಚಿಹ್ನೆಯ ಕುರಿತ ಪ್ರಕರಣದ ವಿಚಾರಣೆಯನ್ನು ಐವರು ನ್ಯಾಯಮೂರ್ತಿಗಳನ್ನೊಳಗೊಂಡ ಸಾಂವಿಧಾನಿಕ ಪೀಠ ನಾಳೆ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: Uddhav Thackeray: ಕೇಂದ್ರ ಚುನಾವಣಾ ಆಯೋಗ ಪ್ರಧಾನಿ ನರೇಂದ್ರ ಮೋದಿಯ ಗುಲಾಮ: ಉದ್ಧವ್ ಠಾಕ್ರೆ ಆಕ್ರೋಶ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ