ಪಂಜಾಬ್‍ನ ಲುಧಿಯಾನದಲ್ಲಿ ನಡೆದಿರುವ ಮದುವೆಯೊಂದು ಭಾರೀ ಸುದ್ದಿಯಾಗಿದೆ. ಅದರಲ್ಲೇನಿದೆ, ಇತ್ತೀಚೆಗೆ ಮದುವೆಗೆ ಸಂಬಂಧಪಟ್ಟ ಹಲವಾರು ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಲೇ ಇರುತ್ತವೆ ಅಂತೀರಾ..? ಆದರೆ ಇದು ಆ ರೀತಿಯ ಸುದ್ದಿಯಂತೂ ಅಲ್ಲವೇ ಅಲ್ಲ! ಮತ್ತೆ..? ಮದುವೆಗಳು ಹೆಚ್ಚಾಗಿ ಸುದ್ದಿಯಾಗುವುದು, ವರನೋ, ವಧುವೋ ಏನಾದರೂ ಅವಾಂತರ ಅಥವಾ ಫಜೀತಿ ಸೃಷ್ಟಿಸಿದಾಗ. ಆದರೆ ಈಗ ಹೇಳ ಹೊರಟಿರುವ ಮದುವೆ ಸುದ್ದಿಯಲ್ಲಿ ಅಸಲಿಗೆ ವರನೇ ಇಲ್ಲ! ಇಲ್ಲಿರುವುದು ಕೇವಲ ವಧುಗಳು..! ವರನಿಲ್ಲದ ಮದುವೆಯೇ? ಹೌದು, ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸಿ, ಮದುವೆ ಆಗಿದ್ದಾರೆ. ಅಷ್ಟೇನಾ, ಇದೆಲ್ಲ ಹೊರ ದೇಶಗಳಲ್ಲಿ ಈಗ ಮಾಮೂಲಿ ಬಿಡಿ ಅಂತೀರಾ? ಇರಬಹುದು. ಆದರೆ ಈ ಮದುವೆ ನಡೆದಿದ್ದು ಭಾರತದಲ್ಲಿ, ಪಂಜಾಬ್ ರಾಜ್ಯದ ಲುಧಿಯಾನ ಜಿಲ್ಲೆಯ ರಹಸ್ಯ ಸ್ಥಳವೊಂದರಲ್ಲಿ. ಆ ಹುಡುಗಿಯರಿಬ್ಬರು ಸಂಬಂಧಿಕರಾಗಿದ್ದು, ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಆ ಹುಡುಗಿಯರಲ್ಲಿ ಒಬ್ಬಾಕೆಯ ಸೋದರ ಕನ್ಯಾದಾನ ಮಾಡಿದ್ದಾನೆ.
ಮಂಗಳವಾರ, ಹುಡುಗಿಯರಿಬ್ಬರು ದೇವಸ್ಥಾನವೊಂದರ ಒಳಗೆ ಮಾಲೆ ಬದಲಾಯಿಸಿಕೊಳ್ಳುವ ವಿಡಿಯೋ ಹೊರ ಬಂದಿದ್ದೇ ತಡ, ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಈ ವಿಡಿಯೋದಲ್ಲಿ, ಲುಧಿಯಾನದ ಬೇರೆ ಬೇರೆ ಹಳ್ಳಿಗಳಿಗೆ ಸೇರಿದ ಇಬ್ಬರು ಸಂಬಂಧಿ ಹುಡುಗಿಯರು ಹಿಂದೂ ಸಂಪ್ರದಾಯದ ಪ್ರಕಾರ ಮಾಲೆ ಬದಲಾಯಿಸಿಕೊಳ್ಳುವುದನ್ನು ನೋಡಬಹುದು. ಬಳಿಕ ಇಬ್ಬರಲ್ಲಿ ಒಬ್ಬಳು ಮತ್ತೊಬ್ಬಳ ಕತ್ತಿಗೆ ತಾಳಿ ಕಟ್ಟುತ್ತಾಳೆ ಹಾಗೂ ಹಣೆಗೆ ಸಿಂಧೂರವಿಡುತ್ತಾಳೆ. ದೇವಸ್ಥಾನದ ಆವರಣದಲ್ಲಿ ನಡೆಯುವ ಈ ಮದುವೆಯಲ್ಲಿ ಹುಡುಗಿಯ ಸೋದರ ಕನ್ಯಾದಾನ ಮಾಡುವುದನ್ನು ಕೂಡ ಕಾಣಬಹುದು.
ಆ ಹುಡುಗಿಯರಲ್ಲಿ ಒಬ್ಬಳು ಸ್ವಡ್ಡಿ ಕಲನ್ ಗ್ರಾಮದವಳು. ಅವಳ ಮನೆಯವರು ಅವಳ ಜೊತೆಗಿನ ಎಲ್ಲ ಸಂಬಂಧಗಳನ್ನು ಮುರಿಯಲು ನಿರ್ಧರಿಸಿದರು. ಆದರೆ ಸ್ವಡ್ಡಿ ಪಶ್ಚಿಮ್ ಗ್ರಾಮದ ಇನ್ನೊಬ್ಬ ಹುಡುಗಿಯ ಮನೆಯವರು ಈ ಮದುವೆಯನ್ನು ಒಪ್ಪಿಕೊಂಡರು.
ಇದನ್ನೂ ಓದಿ: Bigg Boss Kannada Season 8: ಅರವಿಂದ್-ದಿವ್ಯಾ ಉರುಡುಗ ಸ್ನೇಹದಲ್ಲಿ ಬಿರುಕು: ಕಾರಣವಾಯ್ತಾ ಆ ಒಂದು ಮಾತು..!
ಈ ಹುಡುಗಿ - ಹುಡುಗಿ ಮದುವೆಯಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ ಎಂದು ಸ್ವಡ್ಡಿ ಕಲನ್ ಗ್ರಾಮದ ಮುಖ್ಯಸ್ಥ ಲಾಲ್ ಸಿಂಗ್ ಹೇಳಿದ್ದಾರೆ. ಹುಡುಗಿಯರು ಮದುವೆ ಆಗಿಬಿಟ್ಟಿರುವುದರಿಂದ ಮತ್ತು ಅದಕ್ಕೆ ಒಂದು ಹುಡುಗಿಯ ಕುಟುಂಬ ಒಪ್ಪಿಗೆ ಕೂಡ ನೀಡಿರುವುದರಿಂದ ನಾವೇನು ಮಾಡುವಂತಿಲ್ಲ ಎಂದು ಸಿಂಗ್ ಹೇಳಿದ್ದಾರೆ.
ಈ ಹುಡುಗಿಯರು ಎರಡು ವರ್ಷದ ಹಿಂದೆಯೇ ಮದುವೆಗೆ ಪ್ರಯತ್ನಸಿದ್ದರು. ಆದರೆ, ಜನರು ಇದನ್ನು ವಿರೋಧಿಸಿದ್ದರು, ಪಂಚಾಯತ್ ಕೂಡ ಮಧ್ಯ ಪ್ರವೇಶ ಮಾಡಿತ್ತು ಎಂದು ಗ್ರಾಮ ಮುಖ್ಯಸ್ಥ ಹೇಳಿದ್ದಾರೆ. ಹುಡುಗಿಯರು ಅಪ್ರಾಪ್ತ ವಯಸ್ಕರಲ್ಲದ ಕಾರಣ ಇಲ್ಲಿ ಪೊಲೀಸರ ಪಾತ್ರ ಏನಿಲ್ಲ ಎಂದು ಲುಧಿಯಾನದ ಪೊಲೀಸರು (ಗ್ರಾಮೀಣ) ಹೇಳಿದ್ದಾರೆ.
ಇದನ್ನೂ ಓದಿ: Kotigobba 3 Release Date: ಕೋಟಿಗೊಬ್ಬ 3 ಚಿತ್ರದ ರಿಲೀಸ್ ಬಗ್ಗೆ ಖುಷಿಯಿಂದ ಹಂಚಿಕೊಂಡ ಕಿಚ್ಚ ಸುದೀಪ್
ಸುಪ್ರೀಂ ಕೋರ್ಟ್‍ನ ಪಂಚ ನ್ಯಾಯಾಧೀಶರ ಪೀಠವು 2018ರ ಸೆಪ್ಟೆಂಬರ್ 6 ರಂದು ಸಲಿಂಗಕಾಮವನ್ನು ಅಪರಾಧವೆಂದು ಪರಿಗಣಿಸಿದ್ದ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿದೆ. ಆದರೂ ಸಲಿಂಗಿಗಳ ಮದುವೆಗಳಿಗೆ ಭಾರತದಲ್ಲಿ ಇನ್ನೂ ಮಾನ್ಯತೆ ಸಿಕ್ಕಿಲ್ಲ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ