ನವಜಾತ ಗಂಡು ಶಿಶುವನ್ನು ಹೆತ್ತ ತಾಯಿಯೇ (Mother) ಮಾರಾಟ ಮಾಡಿದ ಪ್ರಕರಣವೊಂದು ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಈಗಾಗಲೇ ಪೊಲೀಸರು (Crime News) ಪತ್ತೆ ಹಚ್ಚಿ ಬಂಧಿಸಿದ್ದಾರೆ. ನವಜಾತ ಶಿಶುವಿನ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಗುವಿನ ತಾಯಿ ಆಶಾದೇವಿ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೊಕಾರೊ ಜಿಲ್ಲೆಯಲ್ಲಿ ನವಜಾತ ಶಿಶುವನ್ನು ಪತ್ತೆ ಹಚ್ಚಿದ ಖಾಕಿ ಪಡೆ
ಆಸ್ಪತ್ರೆಯಲ್ಲಿ ಮಗು ಇಲ್ಲ ಎಂಬ ಸುದ್ದಿ ಕೇಳುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬೊಕಾರೊ ಜಿಲ್ಲೆಯಲ್ಲಿ ನವಜಾತ ಶಿಶುವನ್ನು ಪತ್ತೆ ಹಚ್ಚಿ ರಕ್ಷಿಸಿದ್ದಾರೆ ಎಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ) ಅವಿನಾಶ್ ಕುಮಾರ್ ತಿಳಿಸಿದ್ದಾರೆ.
ಅವಿನಾಶ್ ಕುಮಾರ್ ಮಾತನಾಡಿ, ‘ಮಗುವಿನ ತಾಯಿ, ಮಗುವನ್ನು ಮಾರಾಟ ಮಾಡಲು ಸಹಕರಿಸಿದ ಸಾಹಿಯಾ ಹಾಗೂ ಶಿಶುವನ್ನು ಖರೀದಿಸಿದ ದಂಪತಿಗಳಾದ ರೀನಾದೇವಿ ಮತ್ತು ಉಪೇಂದ್ರ ಕುಮಾರ್ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದೇವೆ. ಮಗು ಕೂಡ ಪತ್ತೆಯಾಗಿದ್ದು, ಸುರಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಹಣಕ್ಕಾಗಿ ಹೆತ್ತ ಮಗುವನ್ನೇ ಮಾರಾಟ ಮಾಡಿದ ತಾಯಿ! ಸೇಲ್ ಆಗಿದ್ದ ಕಂದಮ್ಮ ವಾಪಸ್ ಸಿಕ್ಕಿದ್ದೇ ರೋಚಕ ಕಥೆ
1 ಲಕ್ಷ ರೂಗೆ ಹೆತ್ತ ಕೂಸನ್ನು ಮಾರಿದ ತಾಯಿ
ಆಶಾದೇವಿ ಅವರು ಶನಿವಾರ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಕುಟುಂಬದ ಯಾರಿಗೂ ಮಾಹಿತಿ ನೀಡದೇ ಶಿಶುವನ್ನು 1 ಲಕ್ಷ ರೂಪಾಯಿಗೆ ಮಾರಟ ಮಾಡಿ ಮನೆಗೆ ಬಂದಿದ್ದಾರೆ.
ನಂತರ ಸಂಬಂಧಿಕರೆಲ್ಲಾ ಆಶಾದೇವಿಯನ್ನು ವಿಚಾರಿಸಿದ್ದಾರೆ, ಆಸ್ಪತ್ರೆಗೂ ಈ ವಿಷಯವನ್ನು ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಅಬು ಇಮ್ರಾನ್ ಘಟನೆಯ ಬಗ್ಗೆ ತಿಳಿದ ನಂತರ, ಅವರು ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರಾಕೇಶ್ ರಂಜನ್ ಅವರಿಗೆ ತಿಳಿಸಿದರು. ಸುದ್ದಿ ಪೊಲೀಸರ ಕಿವಿಗೆ ಮುಟ್ಟುತ್ತಿದ್ದಂತೆ ಪ್ರಕರಣದಲ್ಲಿ ಶಾಮೀಲಾದ ಎಲ್ಲರನ್ನೂ ಪತ್ತೆ ಹಚ್ಚಿ ಸತ್ಯ ಬಾಯ್ಬಿಡಿಸಿದ್ದಾರೆ.
4.5 ಲಕ್ಷಕ್ಕೆ ದಂಪತಿಗೆ ಶಿಶು ಮಾರಾಟ ಮಾಡಿದ ದಲ್ಲಾಳಿಗಳು
ಮೊದಲಿಗೆ ತಾಯಿ ಆಶಾದೇವಿಯನ್ನು ವಶಕ್ಕೆ ಪಡೆದ ಪೊಲೀಸರು ಆಕೆಯ ಸಹಾಯದಿಂದ ಈ ಕೃತ್ಯದಲ್ಲಿ ಭಾಗಿಯಾದ ಡಿಂಪಲ್ ದೇವಿ ಎಂದು ಗುರುತಿಸಲಾದ 'ಸಾಹಿಯಾ ದೀದಿ' ಬಗ್ಗೆ ತಿಳಿದುಕೊಂಡಿದ್ದಾರೆ.
ನಂತರ ಆಕೆಯನ್ನು ಸಹ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಸಾಹಿಯಾ ಆಶಾದೇವಿಗೆ ಮಗು ಮಾರಾಟ ಮಾಡಲು ಒಂದು ಲಕ್ಷ ರೂಪಾಯಿಗಳನ್ನು ನೀಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಸಾಹಿಯಾ ದಲ್ಲಾಳಿಗಳಾದ ರೀನಾದೇವಿ ಮತ್ತು ಉಪೇಂದ್ರ ಕುಮಾರ್‌ಗೆ ಮಗುವನ್ನು ಮಾರಿದ್ದಾರೆ. ಈ ದಂಪತಿಗಳು ಹಜಾರಿಬಾಗ್ ಜಿಲ್ಲೆಯ ಬಡ್ಕಗಾಂವ್ ಗ್ರಾಮದ ದಂಪತಿಗೆ 4.5 ಲಕ್ಷ ರೂ.ಗೆ ನವಜಾತ ಶಿಶುವನ್ನು ನೀಡಿದ್ದಾರೆ.
ಇದನ್ನೂ ಓದಿ: Tower Sold: ತನ್ನ ಮನೆ ಮೇಲಿದ್ದ ಟವರ್ ಮಾರಾಟ ಮಾಡಿದ ಮಾಲೀಕ! ಕಾರಣ ಕೇಳಿ ಶಾಕ್ ಆದ ಟೆಲಿಕಾಂ ಕಂಪನಿ!
ಬಡ್ಕಗಾಂವ್ ಗ್ರಾಮದ ದಂಪತಿಗಳಿಂದ 4.5 ಲಕ್ಷ ಪಡೆದ ಉಪೇಂದ್ರ ಕುಮಾರ್ ದಂಪತಿ ಮಗುವಿನ ತಾಯಿ ಆಶಾಗೆ 1 ಲಕ್ಷ ರೂಪಾಯಿಗಳನ್ನು ಮಾತ್ರ ನೀಡಿದ್ದಾರೆ. ಮಗುವಿನ ತಾಯಿಗೆ 1 ಲಕ್ಷ ರೂಪಾಯಿ ನೀಡಿದರೆ, ಉಳಿದ 3. 5 ಲಕ್ಷ ರೂಪಾಯಿಯನ್ನು ದಲ್ಲಾಳಿಗಳಿಗೆ ಹಂಚಲಾಗಿದೆ ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
11 ಮಂದಿಯ ವಿರುದ್ಧ ಎಫ್‌ಐಆರ್
ಸದರ್ ಆಸ್ಪತ್ರೆಯ ಆಸ್ಪತ್ರೆಯ ಅಧೀಕ್ಷಕ ಮನೀಶ್ ಲಾಲ್ ಅವರ ದೂರಿನ ಮೇರೆಗೆ 11 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಂಧಿತರಲ್ಲಿ ಛತ್ರ ಜಿಲ್ಲೆಯ ಸದರ್ ಪೊಲೀಸ್ ಠಾಣೆಯ ನಿವಾಸಿಗಳಾದ ಡಿಂಪಲ್ ದೇವಿ, ಆಶಾದೇವಿ, ಮಾಲ್ತಿ ದೇವಿ, ರಮಾನಂದ್ ಕುಮಾರ್, ಆನಂದ್ ಪ್ರಕಾಶ್ ಜೈಸ್ವಾಲ್ ಅಲಿಯಾಸ್ ಮೋನು, ಸರೋಜ್ ಕುಮಾರ್, ಚಂದನ್ ಕುಮಾರ್, ಬೊಕಾರೊ ಜಿಲ್ಲೆಯ ರಜನಿಕಾಂತ್ ಸಾವೊ, ಹಜಾರಿಬಾಗ್ ಜಿಲ್ಲೆಯ ಉಪೇಂದ್ರ ಕುಮಾರ್ ಸೇರಿದ್ದಾರೆ. ನಾಪತ್ತೆಯಾಗಿರುವ ಮತ್ತಿಬ್ಬರು ಮಧ್ಯವರ್ತಿಗಳ ಪತ್ತೆಗೆ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ