ಹೊಸದಿಲ್ಲಿ: ತನ್ನ ಗೆಳತಿಯನ್ನು ಕೊಂದು (Murder Case) ಆಕೆಯ ಶವವನ್ನು ಫ್ರಿಡ್ಜ್‌ನಲ್ಲಿಟ್ಟ ದಿನವೇ ಮತ್ತೊಬ್ಬಳನ್ನು ಮದುವೆಯಾದ ಪ್ರಕರಣವನ್ನು ಕೆದಕಿದಷ್ಟು ರಹಸ್ಯ ಬಯಲಾಗ್ತಿದೆ. ಆರೋಪಿ ಸಾಹಿಲ್ ಗೆಹ್ಲೋಟ್ (Sahil Gehlot) ತನ್ನ ಜೊತೆ ಲಿವಿಂಗ್ ಟುಗೆದರ್‌ನಲ್ಲಿ (Live in Together) ಇದ್ದ ಗೆಳತಿ ನಿಕ್ಕಿ ಯಾದವ್‌ಳನ್ನು (Nikki Yadav) ಕತ್ತು ಹಿಸುಕಿ ಸಾಯಿಸುವ ಮುನ್ನ ರಾತ್ರಿ ವೇಳೆ ಆತ ತನ್ನ ಸ್ನೇಹಿತರ ಜೊತೆ ಎಂಗೇಜ್‌ಮೆಂಟ್ ಪಾರ್ಟಿ (Engagement Party) ಮಾಡಿ ಆನಂದಿಸಿದ್ದ. ಬಳಿಕ ಆಕೆಯನ್ನು ಕೊಲೆ ಮಾಡಿದ್ದ. ನಂತರ ಶವವನ್ನು ನೈಋತ್ವ ದೆಹಲಿಯಲ್ಲಿರುವ ಡಾಬಾದ ರೆಫ್ರಿಜರೇಟರ್‌ನಲ್ಲಿ ಇಟ್ಟಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಫೆಬ್ರವರಿ 14ರಂದು ಆರೋಪಿ ಸಾಹಿಲ್ ಗೆಹ್ಲೋಟ್‌ನನ್ನು ವಿಚಾರಣೆಗೆ ಗುರಿಪಡಿಸಿದಾಗ ನಿಕ್ಕಿ ಯಾದವ್ ಶವವನ್ನು ಡಾಬಾದ ರೆಫ್ರಿಜರೇಟರ್‌ನಲ್ಲಿ ಇಟ್ಟಿರುವುದಾಗಿ ಬಾಯಿಬಿಟ್ಟಿದ್ದಾನೆ. ಆಕೆಯ ಶವವನ್ನು ವಶಪಡಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ ಸ್ನೇಹಿತರಿಗೆ ಎಂಗೇಜ್‌ಮೆಂಟ್ ಪಾರ್ಟಿ ನೀಡಿದ ಬಳಿಕ ಉತ್ತಮ್ ನಗರದಲ್ಲಿ ಇರುವ ನಿಕ್ಕಿ ಯಾದವ್‌ಳ ಬಾಡಿಗೆ ಮನೆಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ತನ್ನ ಮದುವೆಗೆ ಮೊದಲು ಫೆಬ್ರವರಿ ಹತ್ತರಂದು ಸಣ್ಣ ಪ್ರವಾಸಕ್ಕೆ ಹೋಗಿ ಬರೋಣ ಎಂದು ನಿಕ್ಕಿ ಯಾದವ್ ಸಾಹಿಲ್ ಗೆಹ್ಲೋಟ್‌ನ ಮನವೊಲಿಸಿದ್ದಳು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Crime News: ಅನೈತಿಕ ಸಂಬಂಧ ಪ್ರಶ್ನಿಸಿದ್ದೇ ತಪ್ಪಾಯ್ತಾ? ಪ್ರಿಯಕರನೊಂದಿಗೆ ಸೇರಿ ಪತಿಯ ಉಸಿರುಗಟ್ಟಿಸಿ ಕೊಲೆಗೈದ ಪತ್ನಿ
ಗೊಂದಲದಲ್ಲಿದ್ದ ಸಾಹಿಲ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಿರಿಯ ತನಿಖಾಧಿಕಾರಿ, ವಿಚಾರಣೆಯ ಸಂದರ್ಭದಲ್ಲಿ ಸಾಹಿಲ್ ಗೆಹ್ಲೋಟ್ ತಾನು ನಿಕ್ಕಿ ಯಾದವ್‌ಳೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್ ಮುಂದುವರಿಸಬೇಕೋ ಅಥವಾ ಪೋಷಕರು ಹೇಳಿದ ಹುಡುಗಿಯೊಂದಿಗೆ ವಿವಾಹವಾಗಬೇಕೇ ಎಂಬ ವಿಚಾರದಲ್ಲಿ ಗೊಂದಲದಲ್ಲಿದ್ದ. ಹೀಗಾಗಿ ಆತನಿಗೆ ಸೂಕ್ತವಾದ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಅಲ್ಲದೇ, ಕೊಲೆ ಮಾಡುವ 15 ದಿನಗಳ ಮುಂಚಿತವಾಗಿ ನಿಕ್ಕಿ ಯಾದವ್‌ಳ ಮನೆಯನ್ನು ತೊರೆದಿದ್ದೆ ಎಂದು ಸಾಹಿಲ್ ತಿಳಿಸಿದ್ದಾನೆ. ಆದರೆ ಫೆಬ್ರವರಿ 9ರಂದು ತನ್ನ ನಿಶ್ಚಿತಾರ್ಥದ ನಂತರ ನಿಕ್ಕಿ ಯಾದವ್ ಮನೆಗೆ ತೆರಳಿ ಅವಳನ್ನು ಭೇಟಿ ಮಾಡಿದ್ದ. ಅಂದು ರಾತ್ರಿ ಪೂರ್ತಿ ಅವನು ಆಕೆಯೊಂದಿಗೆ ಸಮಯ ಕಳೆದಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಾರ್‌ನಲ್ಲೇ ಸುತ್ತಾಟ.. ಮದುವೆ ವಿಷಯ ಪ್ರಸ್ತಾಪ
ಇನ್ನು ನಿಕ್ಕಿ ಯಾದವ್ ಸಾಹಿಲ್‌ನನ್ನು ಕರೆದುಕೊಂಡು ಗೋವಾಕ್ಕೆ ಟ್ರಿಪ್ ಹೋಗುವ ಪ್ಲಾನ್ ಮಾಡಿದ್ದಳು. ಅದಕ್ಕಾಗಿ ಮುಂಚಿತವಾಗಿಯೇ ಅವಳು ತನ್ನ ಟಿಕೆಟ್ ಬುಕ್ ಮಾಡಿದ್ದಳು. ಸಾಹಿಲ್‌ನನ್ನು ಮನವೊಲಿಸಿ ಆತನಿಗೂ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದಾಗ ಟಿಕೆಟ್ ಬುಕ್ ಆಗಿಲ್ಲ. ಹೀಗಾಗಿ ಅವರು ತಮ್ಮ ಪ್ಲಾನ್ ಚೇಂಜ್ ಮಾಡಿ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು. ನಂತರ ಇಬ್ಬರೂ ಕೂಡ ಸಾಹಿಲ್‌ನ ಕಾರ್‌ನಲ್ಲಿ ನಿಜಾಮುದ್ದೀನ್ ರೈಲ್ವೆ ಸ್ಟೇಷನ್‌ಗೆ ತೆರಳಿ ಅಲ್ಲಿಂದ ಆನಂದ್ ವಿಹಾರ್ ಬಸ್ ಟರ್ಮಿನಸ್‌ಗೆ ಹೋಗಲು ನಿರ್ಧರಿಸಿದರು. ಆದರೆ ಅಲ್ಲಿಗೆ ತಲುಪಿದಾಗ ಬಸ್ ಕಾಶ್ಮೀರ್ ಗೇಟ್ ಐಎಸ್‌ಬಿಟಿಯಿಂದ ಹೊರಡಲಿದೆ ಎಂದು ಸಿಬ್ಬಂದಿ ತಿಳಿಸಿದಾಗ ಪುನಃ ಕಾಶ್ಮೀರ ಗೇಟ್‌ಗೆ ತೆರಳಿದರು. ಆಗ ಸಾಹಿಲ್ ತನ್ನ ಕಾರನ್ನು ನಿಲ್ಲಿಸಿ ತನ್ನ ಮದುವೆಯ ಬಗ್ಗೆ ನಿಕ್ಕಿಯೊಂದಿಗೆ ಮಾತನಾಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಕ್ಕಿಯಿಂದ ತೀವ್ರ ವಿರೋಧ
ತಾನು ಮದುವೆಯ ಬಗ್ಗೆ ನಿಕ್ಕಿ ಯಾದವ್ ಜೊತೆ ಮಾತನಾಡಿದಾಗ ಆಕೆ ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನೀನು ಬೇರೆ ಮದುವೆ ಆಗೋದನ್ನು ನಾನು ಒಪ್ಪೋದಿಲ್ಲ. ಈಗ ನಾವು ಹಿಮಾಚಲ ಪ್ರದೇಶಕ್ಕೆ ಹೋಗಿ ಬರೋಣ ಎಂದು ಒತ್ತಾಯಿಸಿದ್ದಾಳೆ. ಅಲ್ಲದೇ, ಮತ್ತೊಬ್ಬ ಹುಡುಗಿಯನ್ನು ಮದುವೆಯಾಗುವಂತೆ ತನ್ನ ಪೋಷಕರು ನಿರ್ಧರಿಸಿದ್ದರಿಂದ ಆ ಒತ್ತಡಕ್ಕೆ ಒಳಗಾಗಿ ಸಾಹಿಲ್ ದ್ವಂದ್ವ ಮನಸ್ಥಿತಿಯಲ್ಲಿ ಇದ್ದ. ಅದೇ ಸಮಯದಲ್ಲಿ ನಿಕ್ಕಿ ಯಾದವ್ ಕೂಡ ನಿಶ್ಚಿತಾರ್ಥಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಒತ್ತಡಕ್ಕೆ ಒಳಗಾದ ಸಾಹಿಲ್, ಆಕೆಯನ್ನು ಕಾರ್‌ನಲ್ಲೇ ಕತ್ತು ಹಿಸುಕಿ ಕೊಂದು ಶವವನ್ನು ಹಳ್ಳಿಯಲ್ಲಿರುವ ಡಾಬಾಕ್ಕೆ ಕೊಂಡೊಯ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ನಿಕ್ಕಿಯೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ತೊರೆಯಲು ನಿರ್ಧರಿಸಿದ್ದು ಮಾತ್ರವಲ್ಲದೇ, ಪ್ರವಾಸಕ್ಕೆ ಬರುವುದಾಗಿ ಆಕೆಗೆ ಭರವಸೆ ನೀಡಿ ದಾರಿ ತಪ್ಪಿಸಲು ಯೋಜನೆ ಹಾಕಿಕೊಂಡಿದ್ದ. ಆದರೆ ಆತ ಆಕೆಯನ್ನು ಕೊಂದಿರುವ ನಿಖರ ಸಮಯವನ್ನು ಇನ್ನೂ ಬಾಯ್ಬಿಟ್ಟಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ