ಜೈಪುರ (ಜುಲೈ 21); ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಜಿ ರಾಜಸ್ಥಾನದ ಉಪ ಮುಖ್ಯಮಂತ್ರಿ ಹಣದ ಆಮಿಷ ಒಡ್ಡಿದ್ದರು ಎಂಬ ಕಾಂಗ್ರೆಸ್ ಶಾಸಕರ ಆರೋಪವನ್ನು ಸಚಿನ್ ಪೈಲಟ್ ಬಲವಾಗಿ ನಿರಾಕರಿಸಿದ್ದಾರೆ.
ಸಚಿನ್ ಪೈಲಟ್ ವಿರುದ್ಧ ಸೋಮವಾರ ಆರೋಪ ಹೊರಿಸಿದ್ದ ಕಾಂಗ್ರೆಸ್ ಶಾಸಕ ಗಿರಿರಾಜ್, “ಬಿಜೆಪಿ ಪಕ್ಷಕ್ಕೆ ಸೇರಲು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನನಗೆ 35 ಕೋಟಿ ರೂ. ನೀಡುವುದಾಗಿ ಹಣದ ಆಮಿಷವೊಡ್ಡಿದ್ದರು. ಆದರೆ, ನಾನು ಅದನ್ನು ತಿರಸ್ಕರಿಸಿದ್ದೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ. ಬಿಜೆಪಿ ಸೇರುವ ಮಾತೇ ಇಲ್ಲ ಎಂದು ಸಚಿನ್ ಪೈಲಟ್‌ಗೆ ಖಡಕ್ ಆಗಿ ಹೇಳಿದ್ದೆ” ಎಂದಿದ್ದರು.
ಶಾಸಕ ಗಿರಿರಾಜ್ ಆರೋಪದ ನಂತರ ಸಚಿನ್ ಪೈಲಟ್ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗಳು ಕೇಳಿಬಂದಿದ್ದವು. ಅಧಿಕಾರಕ್ಕಾಗಿ ಶಾಸಕರ ಕುದುರೆ ವ್ಯಾಪಾರದ ಬಗ್ಗೆ ಜನ ಸಾಮಾನ್ಯರು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಶಾಸಕ ಗಿರಿರಾಜ್ ಇಂತಹ ಆರೋಪ ಮಾಡಿದ ಕೆಲವೇ ಗಂಟೆಗಳಲ್ಲಿ ಸೋಮವಾರ ಸಂಜೆ ಪತ್ರಿಕಾ ಪ್ರಕಟಣೆ ಹೊರಡಿಸುವ ಮೂಲಕ ಸಚಿನ್ ಪೈಲಟ್ ತಮ್ಮ ಮೇಲಿನ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.
“ನನ್ನ ವಿರುದ್ಧ ಇಂತಹ ಆಧಾರರಹಿತ ಮತ್ತು ಅಸಹ್ಯಕರ ಆರೋಪಗಳನ್ನು ಮಾಡುತ್ತಿರುವ ಕುರಿತು ನನಗೆ ಬೇಸರವಿದೆ. ಆದರೆ, ಆಶ್ಚರ್ಯವಿಲ್ಲ. ಹೀಗಾಗಿ ನನ್ನ ವಿರುದ್ಧ ಲಂಚ ಆರೋಪ ಹೊರಿಸಿರುವ ಶಾಸಕ ಗಿರಿರಾಜ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ನನ್ನ ವಿರುದ್ಧ ಅಪಪ್ರಚಾರ ಮಾಡುವ, ವಿಶ್ವಾಸಾರ್ಹತೆ ಮೇಲೆ ಆಕ್ರಮಣ ಮಾಡುವ ಉದ್ದೇಶದಿಂದ ಮತ್ತು ರಾಜ್ಯದ ಪಕ್ಷದ ನಾಯಕತ್ವದ ವಿರುದ್ಧ ನಾನು ಎತ್ತಿರುವ ನ್ಯಾಯಸಮ್ಮತ ಕಾಳಜಿಯನ್ನು ನಿಗ್ರಹಿಸುವ ಸಲುವಾಗಿ ಇಂತಹ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ. ಮುಖ್ಯ ಸಮಸ್ಯೆಯನ್ನು ಪರಿಹರಿಸುವುದನ್ನು ತಪ್ಪಿಸಲು ಮರು ಆರೋಪಗಳನ್ನು ಮಾಡಲಾಗುತ್ತಿದೆ. ಇಂತಹ ಆರೋಪಗಳನ್ನು ಮಾಡಿದ ಶಾಸಕರ ವಿರುದ್ಧ ನಾನು ಸೂಕ್ತ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇನೆ” ಎಂದು ಸಚಿನ್ ಪೈಲಟ್ ಕಿಡಿಕಾರಿದ್ದಾರೆ.
ಇದನ್ನೂ ಓದಿ :‘ಬಿಜೆಪಿ ಸೇರಲು 35 ಕೋಟಿ ರೂ. ಆಫರ್ ನೀಡಿದ್ದ ಮಾಜಿ ಡಿಸಿಎಂ ಸಚಿನ್ ಪೈಲಟ್‘ - ಕಾಂಗ್ರೆಸ್ ಶಾಸಕ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ