ಶಬರಿಮಲೆ ಅಯ್ಯಪ್ಪ ದೇಗುಲದ ಗರ್ಭಗುಡಿಯ ಚಿನ್ನ ಲೇಪಿತ ಛಾವಣಿ ಸೋರುತ್ತಿರುವುದು ಕಂಡು ಬಂದಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ ( Travancore Devaswom Board) ಕೂಡಲೇ ದುರಸ್ತಿ ಕಾಮಗಾರಿ ನಡೆಸಲು ನಿರ್ಧರಿಸಿದೆ. ಇದಿಷ್ಟೇ ಆಗಿದ್ದರೆ ಕರ್ನಾಟಕದ ಪಾಲಿಗೆ ಅಷ್ಟೇನೂ ಸುದ್ದಿಯಾಗುತ್ತಿರಲಿಲ್ಲ. ಆದರೆ ಸದ್ಯ ಸೋರುತ್ತಿರುವ ಚಿನ್ನ ಲೇಪಿತ ಛಾವಣಿಯನ್ನು ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ದೇಣಿಗೆ ನೀಡಿದ್ದು ವಿಜಯ್ ಮಲ್ಯ! (Vijay Mallya) ಇದೇ ಕಾರಣಕ್ಕೆ ಶಬರಿಮಲೆ ಅಯ್ಯಪ್ಪ ದೇಗುಲದ (Sabarimala Ayyappa Temple) ಗರ್ಭಗುಡಿಯ ಚಿನ್ನ ಲೇಪಿತ ಛಾವಣಿ ಸೋರಿಕೆ ಆಗುತ್ತಿರುವುದು ಕರ್ನಾಟಕದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.
ಮದ್ಯದ ದೊರೆ ವಿಜಯ್ ಮಲ್ಯ ಅವರು 1998 ರಲ್ಲಿ ಶಬರಿಮಲೆ ದೇವಸ್ಥಾನದ ಗರ್ಭಗುಡಿಯ ಮೇಲ್ಛಾವಣಿಯ ಚಿನ್ನದ ಲೇಪನ ಮಾಡಿಸಿದ್ದರು.
18 ಕೋಟಿ ವೆಚ್ಚ ಮಾಡಿದ್ದ ವಿಜಯ್ ಮಲ್ಯ
ವಿಜಯ್ ಮಲ್ಯ ಈ ಉದ್ದೇಶಕ್ಕಾಗಿ 31 ಕೆಜಿ ಚಿನ್ನ ಮತ್ತು 1,900 ಕೆಜಿ ತಾಮ್ರವನ್ನು ದಾನ ಮಾಡಿದ್ದರು. ಚಿನ್ನವನ್ನು ಛಾವಣಿಗೆ ಲೇಪಿಸಲು 18 ಕೋಟಿ ರೂಪಾಯಿ ವೆಚ್ಚವಾಗಿತ್ತು ಎಂದು ವರದಿಯಾಗಿತ್ತು.
ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿತ್ತು
ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿರುವ ಪ್ರವೇಶ ದ್ವಾರದ ಎಡಭಾಗದಲ್ಲಿರುವ ಗರ್ಭಗುಡಿಯ ಹೊರ ಗೋಡೆಯ ಮೂಲಕ ನೀರು ಒಸರುತ್ತಿರುವುದು ಕಂಡು ಬಂದಿದೆ. ಜುಲೈ 16 ರಂದು ದೇವಸ್ಥಾನವು ತಿಂಗಳ ಪೂಜೆಗಾಗಿ ತೆರೆದಾಗ ದ್ವಾರಪಾಲಕನ ವಿಗ್ರಹದ ಮೇಲೆ ನೀರು ಜಿನುಗುತ್ತಿರುವುದು ಕಂಡುಬಂದಿದೆ.
ಪರಿಣಿತರ ಸಲಹೆ ಪಡೆದು ದುರಸ್ತಿ ಕಾರ್ಯ
ದೇವಸ್ವಂ ಬೋರ್ಡ್ ಅಧಿಕಾರಿಗಳು ತಂತ್ರಿ ಕಂಡರಾರು ರಾಜೀವರನ್ನು ಭೇಟಿ ಮಾಡಿ ದುರಸ್ತಿ ಕಾರ್ಯ ನಡೆಸಲು ಅನುಮತಿ ನೀಡಿದ್ದಾರೆ. ಆಗಸ್ಟ್ 3 ರಂದು ದೇವಾಲಯದ ವಾಸ್ತುಶಾಸ್ತ್ರದ ತಜ್ಞರ ತಂಡವು ಮೇಲ್ಛಾವಣಿಯನ್ನು ಪರಿಶೀಲಿಸುತ್ತಿದೆ. ಅವರ ಸಲಹೆಯ ಮೇರೆಗೆ ದುರಸ್ತಿ ಕಾರ್ಯಗಳನ್ನು ನಡೆಸಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಹಿತಿ ನೀಡಿದೆ.
ಭಕ್ತರು ದೇಣಿಗೆ ನೀಡಿದರೂ ಸ್ವೀಕಾರ
ಗರ್ಭಗುಡಿಯ ಮುಂಭಾಗದ ಎಡ ಮೂಲೆಯಲ್ಲಿ ಸೋರಿಕೆಯಾಗಿರುವುದು ಪತ್ತೆಯಾಗಿದೆ. ಕೂಡಲೇ ದುರಸ್ತಿ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದೇನೆ. ದುರಸ್ತಿ ಕಾರ್ಯದ ವೆಚ್ಚವನ್ನು ಟಿಡಿಬಿ ಭರಿಸಲಿದ್ದು, ಕೆಲವು ಭಕ್ತರು ಚಿನ್ನವನ್ನು ದುರಸ್ತಿಗೆ ನೀಡಲು ಮುಂದೆ ಬಂದರೆ ನಾವು ಸ್ವೀಕರಿಸುತ್ತೇವೆ ಎಂದು ಟಿಡಿಬಿ ಅಧ್ಯಕ್ಷ ಕೆ.ಅನಂತಗೋಪನ್ ತಿಳಿಸಿದ್ದಾರೆ.
ಇದನ್ನೂ ಓದಿ: Explained: ಉಚಿತ ವಿದ್ಯುತ್, ಮಿನಿ ಹೆಲಿಕಾಪ್ಟರ್, ಮಂಗಳ ಗ್ರಹಕ್ಕೆ ಪ್ರವಾಸ! ಚುನಾವಣೆಗೂ ಮುನ್ನ ಉಚಿತ ಕೊಡುಗೆಗಳ ಆಮಿಷ
ಚಿನ್ನ ಲೇಪಿತ ಮೇಲ್ಛಾವಣಿಯ ಒಂದು ಭಾಗವನ್ನು ಆಗಸ್ಟ್ 3 ರಂದು ತೆರೆಯಲಾಗುತ್ತದೆ. ಸೋರಿಕೆಯನ್ನು ಪರಿಶೀಲಿಸಿ ದುರಸ್ತಿ ಕಾಮಗಾರಿಗೆ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ. ತಂತ್ರಿ ಮತ್ತು ಟಿಡಿಬಿ ಮತ್ತು ವಿಜಿಲೆನ್ಸ್ ವಿಭಾಗದ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮೇಲ್ಛಾವಣಿಯನ್ನು ತೆರೆಯಲಾಗುವುದು.
ಇದನ್ನೂ ಓದಿ: Justice UU Lalit: ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ ಯಾರು? ಹೊರಬಿತ್ತು ಮಹತ್ವದ ಅಪ್ಡೇಟ್
ದೇವಸ್ಥಾನವನ್ನು ಮುಚ್ಚಿದಾಗ ಮಾತ್ರ ನಾವು ದುರಸ್ತಿ ಕಾರ್ಯಗಳನ್ನು ನಡೆಸಬಹುದು. ಆದರೆ, 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಕಾಮಗಾರಿ ನಡೆಸಲು ತಂತ್ರಿಗಳಿಂದ ಅನುಮತಿ ಪಡೆದಿದ್ದೇವೆ’ ಎಂದು ಅನಂತಗೋಪನ್ ತಿಳಿಸಿದರು.
ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ದೇವರಿಗೂ ದೇಣಿಗೆ
ಕಿಂಗ್‌ಫಿಶರ್ ಏರ್‌ಲೈನ್ಸ್ ಹಣದ ಕೊರತೆ ಮತ್ತು ಅಪಾರ ನಷ್ಟದಲ್ಲಿ ನಡೆಯುತ್ತಿರುವಾಗಲೂ ವಿಜಯ್ ಮಲ್ಯ ವಿವಿಧ ದೇಗುಲಗಳಿಗೆ ದೇಣಿಗೆ ನೀಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆಯಲ್ಲಿರುವ ಸುಬ್ರಹ್ಮಣ್ಯ ದೇವರಿಗೆ 80 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಲೇಪಿತ ಬಾಗಿಲುಗಳನ್ನು ಸಹ ದೇಣಿಗೆ ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ