ಶಬರಿಮಲೆ (ನ. 16): ಕೇರಳದ ಪ್ರಸಿದ್ಧ ದೇವಾಲಯವಾದ ಶಬರಿಮಲೆಯಲ್ಲಿ ಇಂದಿನಿಂದ 2 ತಿಂಗಳ ಕಾಲ ವಾರ್ಷಿಕ ಪೂಜೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೂ ಅವಕಾಶ ಕಲ್ಪಿಸಲಾಗುತ್ತಿದ್ದು, ನಿನ್ನೆ ಸಂಜೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೆ. ಇಂದಿನಿಂದ ಜನವರಿ 15ರವರೆಗೆ ಶಬರಿಮಲೆಯಲ್ಲಿ ಮಂಡಲೋತ್ಸವ ಮತ್ತು ಮಕರವಿಳಕ್ಕು ಉತ್ಸವ ನಡೆಯಲಿದೆ. ಹೀಗಾಗಿ, ಕಟ್ಟುನಿಟ್ಟಿನ ಕೊರೋನಾ ನಿಯಮವನ್ನು ಅಳವಡಿಸಲಾಗಿದ್ದು, ಕೊರೋನಾ ನೆಗೆಟಿವ್ ಇರುವ ಭಕ್ತರಿಗೆ ಮಾತ್ರ ದೇಗುಲದೊಳಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ.
ಇಂದಿನಿಂದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪೂಜೆಗಳು ನಡೆಯಲಿದ್ದು, ಕೋವಿಡ್ ನಡುವೆಯೂ ಈ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಭಕ್ತರಿಗೆ ಅನುಮತಿ ನೀಡಲಾಗಿದೆ. ಆದರೆ, ಅದಕ್ಕೆ ಕೆಲವು ನಿರ್ಬಂಧನೆಗಳನ್ನು ಕೂಡ ಹಾಕಲಾಗಿದೆ. ಈ ಬಾರಿ ಭಕ್ತರು ಪಂಬ ನದಿಯಲ್ಲಿ ಸ್ನಾನ ಮಾಡುವಂತಿಲ್ಲ. ಅದರ ಬದಲಾಗಿ ಪಂಬ ಮತ್ತು ಏರುಮಲೈನಲ್ಲಿ ಶವರ್ ಏರ್ಪಾಡು ಮಾಡಲಾಗುತ್ತದೆ. ಅದರ ಕೆಳಗೆ ನಿಂತು ಸ್ನಾನ ಮಾಡಿದ ಬಳಿಕ ಭಕ್ತರು ಬೆಟ್ಟ ಹತ್ತಬಹುದು. ಅಭಿಷೇಕದಿಂದ ಅನ್ನದಾನದವರೆಗೆ ಈ ಬಾರಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದ್ದು, ಕೊರೋನಾ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Hasanamba Temple: ಹಾಸನಾಂಬೆ ದರ್ಶನಕ್ಕೆ ಇಂದು ಕೊನೆಯ ದಿನ; ಬೆಳ್ಳಂಬೆಳಗ್ಗೆ ದೇವಿಗೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್
ನಿನ್ನೆ ಸಂಜೆ 5 ಗಂಟೆಗೆ ಶಬರಿಮಲೆ ದೇವಸ್ಥಾನದ ಮುಖ್ಯ ಅರ್ಚಕ ಸುಧೀರ್ ನಂಬೂದಿರಿ ಅವರ ಸಮ್ಮುಖದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನದ ಗರ್ಭಗುಡಿಯನ್ನು ತೆರೆಯಲಾಗಿದೆ. ಇಂದಿನಿಂದ ಮಂಡಲೋತ್ಸವದ ಪೂಜಾ ಕೈಂಕರ್ಯಗಳು ಶುರುವಾಗಲಿವೆ. ಪ್ರತಿವರ್ಷ ನವೆಂಬರ್ ತಿಂಗಳಿನಿಂದ 2 ತಿಂಗಳು ಶಬರಿಮಲೆಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಾಲೆ ಹಾಕಿದ ಭಕ್ತರು ಶಬರಿಮಲೆಗೆ ಯಾತ್ರೆ ಕೈಗೊಂಡು, ದರ್ಶನ ಪಡೆಯುತ್ತಾರೆ. ಇರುಮುಡಿ ಹೊತ್ತು ಈ ದೇವಸ್ಥಾನಕ್ಕೆ ತೆರಳುವುದು ಅಷ್ಟು ಸುಲಭವಲ್ಲ. ಮಾನಸಿಕ ಸಿದ್ಧತೆಯ ಜೊತೆಗೆ ಇದಕ್ಕೆ ದೈಹಿಕ ದೃಢತೆಯೂ ಬೇಕಾಗುತ್ತದೆ.
ಇಂದಿನಿಂದ ಶಬರಿಮಲೆಯ ವಾರ್ಷಿಕ ಪೂಜಾ ಕಾರ್ಯಕ್ರಮಗಳು ಆರಂಭವಾಗಲಿವೆ. ಈ ವೇಳೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ, ಕಳೆದ ವರ್ಷಗಳಿಗಿಂತ ಈ ವರ್ಷ ಭಕ್ತರ ಸಂಖ್ಯೆಗೆ ಮಿತಿ ಹೇರಲಾಗಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಕೊರೋನಾ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಕೇರಳ ಸರ್ಕಾರ ತಿಳಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಈ ಬಾರಿ 10 ವರ್ಷದೊಳಗಿನ ಮತ್ತು 60 ವರ್ಷ ಮೇಲ್ಪಟ್ಟವರಿಗೆ ದೇಗುಲದಲ್ಲಿ ನಡೆಯುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ