ರಷ್ಯಾ: ರಷ್ಯಾದಲ್ಲಿ ಕೊರೊನಾ ಸಾಂಕ್ರಾಮಿಕ ಕಾಯಿಲೆಯನ್ನು (Corona Virus) ಗುಣಪಡಿಸುವ ನಿಟ್ಟಿನಲ್ಲಿ ಕೋವಿಡ್-19 (Covid 19) ಲಸಿಕೆ ಸ್ಪುಟ್ನಿಕ್ ವಿ (Covid Vaccination) ಅಭಿವೃದ್ಧಿಪಡಿಸಿಲು ಸಹಾಯ ಮಾಡಿದ ವಿಜ್ಞಾನಿಗಳಲ್ಲಿ ಒಬ್ಬರಾದ ಆಂಡ್ರೆ ಬೊಟಿಕೋವ್ ಅವರನ್ನು ಹತ್ಯೆ ಮಾಡಲಾಗಿದೆ. ಆಂಡ್ರೆ ಬೊಟಿಕೋವ್ (Andrey Botikov) ಅವರ ಶವ ಅಪಾರ್ಟ್‌ಮೆಂಟ್‌ನಲ್ಲಿ ಬೆಲ್ಟ್‌ನಿಂದ ಕತ್ತು ಬಿಗಿದ ರೀತಿಯಲ್ಲಿ ಪತ್ತೆಯಾಗಿದ್ದು, ಕೊಲೆಗೆ ಸಂಬಂಧಪಟ್ಟಂತೆ ಶಂಕಿತ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿವೆ.
ಪ್ರತಿಭಾನ್ವಿತ ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರಿಗೆ 47 ವರ್ಷ ವಯಸ್ಸಾಗಿತ್ತು. ಆಂಡ್ರೆ ಬೋಟಿಕೋವ್ ಅವರು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಕಾಲಜಿ ಅಂಡ್ ಮ್ಯಾಥಮ್ಯಾಟಿಕ್ಸ್‌ನಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು. ಆದರೆ ಗುರುವಾರ ಸಂಜೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ರಷ್ಯಾದ ನ್ಯೂಸ್ ಏಜೆನ್ಸಿ ಟಾಸ್ ರಷ್ಯಾದ ಒಕ್ಕೂಟದ ತನಿಖಾ ಸಮಿತಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.
ಇದನ್ನೂ ಓದಿ: Marburg Virus: ಕೊರೊನಾ ಅಬ್ಬರ ತಗ್ಗಿತು, ಮತ್ತೊಂದು ವೈರಸ್ ಪತ್ತೆಯಾಯ್ತು! ಆಫ್ರಿಕಾದಲ್ಲಿ ಈಗ ಮಹಾಮಾರಿಯದ್ದೇ ರುದ್ರತಾಂಡವ!
ಬೆಲ್ಟ್‌ನಿಂದ ಕತ್ತನ್ನು ಬಿಗಿದು ಕೊಲೆಗೈದು ಪರಾರಿಯಾದ ಆರೋಪಿ
ವಿಜ್ಞಾನಿ ಆಂಡ್ರೆ ಬೊಟಿಕೋವ್ ಅವರ ಸಾವನ್ನು ಕೊಲೆ ಎಂದು ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ರಷ್ಯಾದಲ್ಲಿ ತನಿಖಾ ಪ್ರಾಧಿಕಾರವಾಗಿರುವ ಸಮಿತಿಯು ಟೆಲಿಗ್ರಾಮ್‌ನಲ್ಲಿ ಹೇಳಿಕೆಯನ್ನು ಪ್ರಕಟಿಸಿದ್ದು, 29 ವರ್ಷದ ಯುವಕನು ಜಗಳದ ಸಂದರ್ಭದಲ್ಲಿ ಆಂಡ್ರೆ ಬೋಟಿಕೋವ್ ಅವರ ಕತ್ತನ್ನು ಬೆಲ್ಟ್‌ನಿಂದ ಬಿಗಿದು ಕೊಲೆಗೈದು ಓಡಿ ಹೋಗಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಕೌಟುಂಬಿಕ ಅಪರಾಧ ಮತ್ತು ಸಂಘರ್ಷದ ಪರಿಣಾಮವಾಗಿ ಈ ಕೊಲೆ ನಡೆದಿರಬಹುದು ಎಂದು ಕಾನೂನು ಜಾರಿ ಸಂಸ್ಥೆಗಳು ಹೇಳಿದ್ದು, ಆಂಡ್ರೆ ಬೋಟಿಕೋವ್ ಅವರ ದೇಹ ಪತ್ತೆಯಾದ ಸ್ವಲ್ಪ ಸಮಯದ ನಂತರ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Covid-19: ಈ ಮೂರು ಲಕ್ಷಣಗಳು ಕಂಡು ಬಂದರೆ ಎಚ್ಚರ, ಕೊರೊನಾ ಸೋಂಕಿನ ಹೊಸ ಲಕ್ಷಣಗಳಿವು, ಕೂಡಲೇ ಎಚ್ಚೆತ್ತುಕೊಳ್ಳಿ!
ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಆರೋಪಿ
ಕೃತ್ಯ ನಡೆದ ಕೆಲವೇ ಸಮಯದಲ್ಲಿ ಆರೋಪಿ ಇದ್ದ ಸ್ಥಳವನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧನ ಮಾಡಿದ್ದಾರೆ. ವಿಚಾರಣೆಯ ಸಮಯದಲ್ಲಿ ತಾನು ಮಾಡಿದ ಅಪರಾಧವನ್ನು ಆರೋಪಿಯು ಒಪ್ಪಿಕೊಂಡಿದ್ದಾನೆ. ಆರೋಪಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಇದಕ್ಕೂ ಮೊದಲು ಅನೇಕ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ, ಆತನ ವಿಚಾರಣೆ ಮುಂದುವರೆಸಲಾಗಿದೆ ಎಂದು ತನಿಖಾ ಸಮಿತಿ ತಿಳಿಸಿದೆ.
ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್‌ಲ್ಯಾಂಡ್ ಪ್ರಶಸ್ತಿ ಪಡೆದಿದ್ದ ವಿಜ್ಞಾನಿ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2021 ರಲ್ಲಿ COVID ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾಕ್ಕಾಗಿ, ಈ ವೈರಾಲಜಿಸ್ಟ್‌ಗೆ ಆರ್ಡರ್ ಆಫ್ ಮೆರಿಟ್ ಫಾರ್ ದಿ ಫಾದರ್‌ಲ್ಯಾಂಡ್ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದರು. 2020 ರಲ್ಲಿ ಸ್ಪುಟ್ನಿಕ್ V ಲಸಿಕೆಯನ್ನು ಅಭಿವೃದ್ಧಿಪಡಿಸಿದ 18 ವಿಜ್ಞಾನಿಗಳಲ್ಲಿ ಬೊಟಿಕೋವ್ ಒಬ್ಬರು ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: Corona Virus: ಕೋವಿಡ್ ವಿಚಾರದಲ್ಲಿ ನಮ್ಮನ್ನು ದೂಷಿಸುವ ಮೂಲಕ ಅಮೆರಿಕಾ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ; ಚೀನಾ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ