ನವದೆಹಲಿ, ಸೆ. 08: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ (Taliban coming to power in Afghanistan) ಬರುತ್ತಿರುವಂತೆಯೇ ಅನೇಕ ದೇಶಗಳು ಪರಿಸ್ಥಿತಿಯ ಲಾಭ ಪಡೆದುಕೊಳ್ಳಲೋ ಅಥವಾ ತನ್ನ ಹಿತಾಸಕ್ತಿಗೆ ಧಕ್ಕೆಯಾಗದಂತೆ ಖಚಿತಪಡಿಸಿಕೊಳ್ಳಲೂ ಪ್ರಯತ್ನಿಸುತ್ತಿವೆ. ತಾಲಿಬಾನ್ ಹಿಂದೆ ಪಾಕಿಸ್ತಾನ ಬಹಳ ಸಕ್ರಿಯವಾಗಿದೆ. ರಷ್ಯಾ, ಚೀನಾ, ತಜಿಕಿಸ್ತಾನ, ಇರಾನ್, ಕತಾರ್ ಮೊದಲಾದ ದೇಶಗಳು ತಮ್ಮದೇ ಪಾತ್ರ ವಹಿಸುತ್ತಿವೆ. ತಾಲಿಬಾನ್ನ ಎರಡನೇ ಅಲೆ ಆಗಮನಕ್ಕೆ ಮುನ್ನ ಅಫ್ಘಾನಿಸ್ತಾನದ ಪುನರ್ನಿರ್ಮಾಣದಲ್ಲಿ (Afghan development) ಮಹತ್ವದ ಪಾತ್ರ ವಹಿಸುತ್ತಿದ್ದ ಭಾರತ ಸದ್ಯ ಅಲ್ಲಿಯ ವಿದ್ಯಮಾನಗಳನ್ನ ಅವಲೋಕಿಸುವುದಕ್ಕೆ ಸೀಮಿತವಾಗಿದ್ದಂತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಭಾರತಕ್ಕೆ ಆಗಮಿಸಿದ್ದ ರಷ್ಯಾದ ಭದ್ರತಾ ಸಲಹೆಗಾರ (ರಷ್ಯಾದ ಭದ್ರತಾ ಮಂಡಳಿ ಕಾರ್ಯದರ್ಶಿ) ನಿಕೋಲೇ ಪಟ್ರುಶೆವ್ (Nikolay Patrushev) ಅವರು ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi), ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ (NSA Ajit Doval) ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ (S Jaishankar) ಅವರನ್ನ ಭೇಟಿಯಾಗಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಅವರು ಮೊದಲು ಅಜಿತ್ ದೋವಲ್ ಅವರನ್ನ ಭೇಟಿ ಮಾಡಲಿದ್ದಾರೆ. ಅಫ್ಘಾನಿಸ್ತಾನದ ಬೆಳವಣಿಗೆಗಳ ಬಗ್ಗೆ ಅವರು ಚರ್ಚಿಸುವ ನಿರೀಕ್ಷೆ ಇದೆ.
ಇನ್ನು, ಅಮೆರಿಕ ಕೂಡ ಅಫ್ಘನ್ ವಿದ್ಯಮಾನಗಳ ವಿಚಾರದಲ್ಲಿ ಭಾರತದೊಂದಿಗೆ ಸಂಪರ್ಕದಲ್ಲಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಮುಖ್ಯಸ್ಥ ವಿಲಿಯಮ್ ಬರ್ನ್ಸ್ ನೇತೃತ್ವದ ಅಮೆರಿಕದ ನಿಯೋಗವೊಂದು ಪಾಕಿಸ್ತಾನಕ್ಕೆ ಆಗಮಿಸುತ್ತಿದೆ. ಹಾಗೆಯೇ ಭಾರತಕ್ಕೂ ಬಂದು ಇಲ್ಲಿ ದೋವಲ್ ಅವರನ್ನ ಭೇಟಿ ಮಾಡಿ ಹೋಗುವ ಸಾಧ್ಯತೆ ಇದೆ ಎಂದು ದ ಹಿಂದೂ ಪತ್ರಿಕೆಯಲ್ಲಿ ವರದಿಯಾಗಿದೆ.
ತಾಲಿಬಾನ್ ಸಂಘಟನೆಯು ನಿನ್ನೆ ತನ್ನ ಹೊಸ ಸರ್ಕಾರವನ್ನು ಘೋಷಿಸಿದೆ. ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅವರು ಹಂಗಾಮಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಅವರ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಂದಿಯ ಸಚಿವ ಸಂಪುಟದ ರಚನೆಯಾಗಿದೆ. ಈ ಪ್ರತಿಯೊಬ್ಬರೂ ಕೂಡ ತಾಲಿಬಾನ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದವರೇ ಆಗಿದ್ದಾರೆ. ತೀವ್ರಮಟ್ಟದ ಹಿಂಸಾಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಹಕ್ಕಾನಿ ನೆಟ್ವರ್ಕ್ನ ನಾಯಕರೂ ಸಚಿವ ಸಂಪುಟದಲ್ಲಿದ್ದಾರೆ. ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಸ್ಪಷ್ಟನೆ ನೀಡಿದ್ದು, ಇದು ಕೇವಲ ಹಂಗಾಮಿ ಸರ್ಕಾರವಾಗಿದೆ. ದೇಶದ ಇತರ ಭಾಗಗಳಿಂದ ಜನರನ್ನು ಸರ್ಕಾರಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ಸಾರ್ವಜನಿಕವಾಗಿ ಎಂದೂ ಕಾಣಿಸಿಕೊಳ್ಳದ ತಾಲಿಬಾನ್ ಮುಖ್ಯಸ್ಥ ಹಿಬತುಲ್ಲಾ ಅಖುಂದ್ಜಾದ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ಹೊಸ ಸರ್ಕಾರವು ಇಸ್ಲಾಮೀ ಧರ್ಮದ ನಿಯಮಗಳು ಮತ್ತು ಷರಿಯಾ ಕಾನೂನುಗಳನ್ನ ಎತ್ತಿಹಿಡಿಯಲು ಶ್ರಮಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Morning Digest Sep 8th: ಅಫ್ಘನ್ ಬಿಕ್ಕಟ್ಟು, ಪೆಟ್ರೋಲ್ ಬೆಲೆ ಇಳಿಕೆ, ರಜಿನಿ ಸಿನಿಮಾ ಇತ್ಯಾದಿ ಬೆಳಗಿನ ಟಾಪ್ ಸುದ್ದಿಗಳು
ಉಗ್ರರೂಪಿ ತಾಲಿಬಾನ್ ಅಧಿಕಾರದಲ್ಲಿದ್ದರೂ ರಾಜಧಾನಿ ಕಾಬೂಲ್ ನಗರದಲ್ಲಿ ಕೆಲ ಮಹಿಳೆಯರು ಬೀದಿಯಲ್ಲೇ ಪ್ರತಿಭಟನೆ ನಡೆಸಿದ್ದಾರೆ. ತಾಲಿಬಾನಿಗಳು ಮುಸ್ಲಿಮರಲ್ಲ, ಅವರು ಧರ್ಮದ್ರೋಹಿಗಳು. ಜನರಿಗೆ ಪ್ರತಿಭಟನೆ ನಡೆಸಲೂ ಅವಕಾಶ ಕೊಡದಷ್ಟು ಸ್ವಾತಂತ್ರ್ಯ ಕಿತ್ತುಹಾಕಿದ್ದಾರೆ ಎಂದು ಸಾರ್ವಜನಿಕವಾಗಿಯೇ ನೂರಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಪಂಜಶೀರ್ ಪ್ರಾಂತ್ಯದ ಮೇಲೆ ಪಾಕಿಸ್ತಾನದ ಯುದ್ಧವಿಮಾನಗಳು ದಾಳಿ ನಡೆಸಿದ್ದನ್ನು ಖಂಡಿಸಿರುವ ಅಫ್ಘಾನ್ ಪ್ರಜೆಗಳು, ಪಾಕಿಸ್ತಾನ ಸಾಯಲಿ (Death for Pakistan) ಎಂದು ಶಾಪ ಹಾಕಿದ್ದಾರೆ.
ಈ ಎಲ್ಲಾ ಬೆಳವಣಿಗೆ ಬಗ್ಗೆ ಅಮೆರಿಕದ ಲಾಂಗ್ ವಾರ್ ಜರ್ನಲ್ ಎಂಬ ಪತ್ರಿಕೆಯ ಸಂಪಾದಕರು ಸಂಕ್ಷಿಪ್ತಗೊಳಿಸಿ ಕಾಮೆಂಟ್ ಮಾಡಿದ್ದಾರೆ: “ಹೊಸ ತಾಲಿಬಾನ್ ಹಳೆ ತಾಲಿಬಾನ್ನಂತೇ ಇದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. 1996ರಿಂದ 2001ರವರೆಗೆ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಿತ್ತು. 2001ರಲ್ಲಿ ಅಮೆರಿಕದ ಅವಳಿ ಕಟ್ಟಡಗಳ ಮೇಲೆ ಅಲ್-ಖೈದಾ ದಾಳಿ ನಡೆಸಿದ ನೆಲಕ್ಕುರುಳಿಸಿದ ಬೆನ್ನಲ್ಲೇ ಉಗ್ರರಿಗೆ ಆಶ್ರಯ ನೀಡಿದ ಕಾರಣಕ್ಕೆ ಅಮೆರಿಕ ಅಫ್ಘನ್ ಮೇಲೆ ಎರಗಿ ಬಂದು ತಾಲಿಬಾನ್ ಸರ್ಕಾರವನ್ನು ಬಳಿಸಿ ಬೇರೆ ಸರ್ಕಾರ ಸ್ಥಾಪಿಸಿತು. ಇದೀಗ 20 ವರ್ಷಗಳ ಬಳಿಕ ಅಫ್ಘಾನ್ ನೆಲದಿಂದ ಅಮೆರಿಕ ಸೇನೆ ಕಾಲ್ತೆಗೆದ ಬೆನ್ನಲ್ಲೇ ತಾಲಿಬಾನ್ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ