ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವೆ ಯುದ್ದ (War) ಈಗಾಗಲೇ ಶುರುವಾಗಿದ್ದು, ಒಂದು ದಿನ ಕಳೆದು ಹೋಗಿದೆ. ಕ್ಷಣದಿಂದ ಕ್ಷಣಕ್ಕೆ ಯುದ್ಧದ ತೀವ್ರತೆ ಹೆಚ್ಚಾಗುತ್ತಲೇ ಇದೆ. ಮೊದಲ ದಿನದ ಯುದ್ಧದ ಬಗ್ಗೆ ರಷ್ಯಾ ಅಧ್ಯಕ್ಷ (President) ವ್ಲಾಡಿಮಿರ್ ಪುಟಿನ್ (Vladimir Putin) ಅವರು ತಮ್ಮ ಅಧಿಕೃತ ಹೇಳಿಕೆ ನೀಡಿದ್ದಾರೆ. “ಉಕ್ರೇನ್ ಮೇಲಿನ ಮೊದಲ ದಿನದ ರಷ್ಯಾದ ಯುದ್ಧ ಯಶಸ್ವಿಯಾಗಿದೆ” ಅಂತ ಪುಟಿನ್ ಹೇಳಿದ್ದಾರೆ. ಮತ್ತೊಂದೆಡೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಮಧ್ಯರಾತ್ರಿ ತಮ್ಮ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. “ನಮ್ಮ ದೇಶವನ್ನು ರಕ್ಷಿಸಲು ನಾವು ಏಕಾಂಗಿಯಾಗಿ ಆದರೂ ಹೋರಾಡುತ್ತೇವೆ" ಅಂತ ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ. ಹಾಗಾದರೆ ನಿನ್ನೆ ಯುದ್ಧ ಶುರುವಾದಾಗಿನಿಂದ ಇಂದಿನವರೆಗೆ ಏನೇನಾಯ್ತು ಅಂತ ತಿಳಿದುಕೊಳ್ಳಲು ಮುಂದೆ ಓದಿ…
“ಮೊದಲ ದಿನದ ಯುದ್ಧ ಯಶಸ್ವಿಯಾಗಿದೆ” ಎಂದ ಪುಟಿನ್
ನಿನ್ನೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧ ಯಶಸ್ವಿಯಾಗಿದೆ ಅಂತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಜೊತೆಗೆ "ನಾನು ಉಕ್ರೇನ್ ವಿರುದ್ಧ ವಿಶೇಷ ಮಿಲಿಟರಿ ಕಾರ್ಯಾಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದೇನೆ" ಎಂದು ಪುಟಿನ್ ಹೇಳಿದ್ದಾರೆ.
ನಿನ್ನೆ ಮುಂಜಾನೆಯೇ ಆರಂಭವಾಗಿದ್ದ ಯುದ್ಧ
ನಿನ್ನೆ ಮುಂಜಾನೆಯೇ ರಷ್ಯಾ ಪಡೆಗಳು ಉಕ್ರೇನ್ನನ್ನು ಸುತ್ತುವರೆದು ಯುದ್ಧ ಆರಂಭಿಸಿದ್ದವು. ಉಕ್ರೇನ್ನ ಗಡಿಯಲ್ಲಿ ರಷ್ಯಾದ ಒಂದೂವರೆ ಲಕ್ಷಕ್ಕೂ ಅಧಿಕ ಸೈನಿಕರು ಜಮಾಯಿಸಿ, ಯುದ್ಧ ಆರಂಭಿಸಿದರು. ಉಕ್ರೇನ್ನ ರಾಜಧಾನಿ ಕೈವ್ನಲ್ಲಿ ಮೊದಲ ಬಾಂಬ್ ಸ್ಫೋಟಗೊಂಡರೆ, ಇತರೇ 11 ನಗರಗಳಲ್ಲಿ ಸರಣಿ ದಾಳಿ ನಡೆಸಲಾಯಿತು. ರಷ್ಯಾ ಪಡೆಗಳು ಉಕ್ರೇನ್ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮಾಡಿದವು.
ಇದನ್ನೂ ಓದಿ: Russia-Ukraine War: ಅಲ್ಲಿ ಉಕ್ರೇನ್ನಲ್ಲಿ ಯುದ್ಧ, ಇಲ್ಲಿ ಮಗಳಿಗಾಗಿ ಊಟ ಬಿಟ್ಟು ಕಾಯುತ್ತಿರುವ ಅಮ್ಮ!
74 ಮಿಲಿಟರಿ ನೆಲೆ ನಾಶಗೊಳಿಸಿದ ರಷ್ಯಾ
ಮೊದಲ ದಿನ ರಷ್ಯಾ ಸೇನೆಯು ಉಕ್ರೇನ್ನ ಬರೋಬ್ಬರಿ 11 ಏರೋಡ್ರೋಮ್ಗಳು ಸೇರಿದಂತೆ 74 ನೆಲದ ಮೇಲಿನ ಮಿಲಿಟರಿ ಮೂಲಸೌಕರ್ಯ ನೆಲೆಗಳನ್ನು ನಾಶಪಡಿಸಿವೆ. ನಿನ್ನೆಯಿಂದ ಇಂದಿನವರೆಗೆ ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ವಿವಿಧೆಡೆ ಒಟ್ಟು 203 ದಾಳಿಗಳನ್ನು ರಷ್ಯಾ ನಡೆಸಿದೆ.
“ನಾವು ಏಕಾಂಗಿಯಾಗಿದ್ದೇವೆ” ಎಂದ ಉಕ್ರೇನ್ ಅಧ್ಯಕ್ಷ
ರಷ್ಯಾದ ಭೀಕರ ದಾಳಿಯಿಂದ ಉಕ್ರೇನ್ ಅಕ್ಷರಶಃ ನಡುಗಿ ಹೋಗಿದೆ. ವಿಶ್ವದ ನಾಯಕರ ಎದುರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ನಮ್ಮ ದೇಶವನ್ನು ರಕ್ಷಿಸುವಲ್ಲಿ ನಾವು ಏಕಾಂಗಿಯಾಗಿದ್ದೇವೆ. ಆದರೆ ಏಕಾಂಗಿಯಾದರೂ ಸರಿ ದೇಶವನ್ನು ರಕ್ಷಿಸಿಕೊಳ್ಳುವುದಕ್ಕೆ ಹೋರಾಡುತ್ತೇವೆ ಎಂದಿದ್ದಾರೆ.
ಅಸಹಾಯಕತೆ ತೋಡಿಕೊಂಡ ಉಕ್ರೇನ್ ಅಧ್ಯಕ್ಷ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಿನ್ನೆ ಮಧ್ಯ ರಾತ್ರಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ನ್ಯಾಟೋ ಪಡೆಯಲ್ಲಿ ಸದಸ್ಯತ್ವ ಕೊಡಲು ಎಲ್ಲರೂ ಮುಂದೆ ಬಂದಿದ್ದರು. ಆದರೆ ಈಗ ನಮ್ಮ ದೇಶದ ಸಹಾಯಕ್ಕೆ ಯಾರೂ ಬರುತ್ತಿಲ್ಲ ಅಂತ ವಿಷಾದ ವ್ಯಕ್ತಪಡಿಸಿದರು. ರಷ್ಯಾವು ಉಕ್ರೇನ್ನ ಮುಖ್ಯಸ್ಥರನ್ನು ಕೆಳಗಿಳಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ಬಯಸುತ್ತಿದೆ" ಅಂತ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.
ಇದನ್ನೂ ಓದಿ: Students in Ukraine: ಕಾಂಗ್ರೆಸ್ ಮುಖಂಡನ ಪುತ್ರ ಸೇರಿ ಉಕ್ರೇನ್ನಲ್ಲಿ ಸಿಲುಕಿದ ಕೊಡಗಿನ ವಿದ್ಯಾರ್ಥಿಗಳು
ಉಕ್ರೇನ್ ಸೈನಿಕರು, ನಾಗರಿಕರು ಸೇರಿ 137 ಸಾವು
ನಿನ್ನೆ ರಷ್ಯಾ ನಡೆಸಿದ ದಾಳಿಯಲ್ಲಿ ಉಕ್ರೇನ್ನ ಸೈನಿಕರು, ನಾಗರಿಕರು ಸೇರಿದಂತೆ 137ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾಗಿ ಉಕ್ರೇನ್ ಸರ್ಕಾರ ಹೇಳಿದೆ. ರಾಜದಾನಿ ಕೈವ್ ಸೇರಿದಂತೆ ಪ್ರಮುಖ ನಗರಗಳನ್ನು ರಷ್ಯಾ ಭೀಕರವಾಗಿ ಹಾನಿಗೊಳಿಸಿದೆ.
ಇನ್ನು ಈ ಭೀಕರ ಯುದ್ಧದಲ್ಲಿ 316 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷರು ಮಧ್ಯ ರಾತ್ರಿಯ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ