ಪಂಜಾಬ್ ಕಾಂಗ್ರೆಸ್​ನಲ್ಲಿ ಹೈಡ್ರಾಮ; ಮಾಜಿ ಕ್ರಿಕೆಟಿಗನಿಗೆ ರಾಜ್ಯಾಧ್ಯಕ್ಷ ಸ್ಥಾನ? ಸಿಡಿಮಿಡಿಗೊಂಡ ಸಿಎಂ

ಪಂಜಾಬ್ ಕಾಂಗ್ರೆಸ್​ನಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನ ಶಮನಗೊಳಿಸಲು ಕಾಂಗ್ರೆಸ್ ವರಿಷ್ಠರು ಶಾಂತಿ ಸೂತ್ರ ಮಾಡಿದ್ದು, ಅದರಂತೆ ಸಿಧುಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಪ್ರಸ್ತಾಪ ಇದೆ ಎನ್ನಲಾಗಿದೆ. ಇದು ಸಿಎಂ ನಿಷ್ಠರನ್ನು ಕೆರಳಿಸಿದೆ.

ಪಂಜಾಬ್ ಸಿಎಂ ಅಮರೀಂದರ್ ಸಿಂಗ್

ಪಂಜಾಬ್ ಸಿಎಂ ಅಮರೀಂದರ್ ಸಿಂಗ್

 • News18
 • Last Updated :
 • Share this:
  ಅಮೃತಸರ್: ಪಂಜಾಬ್ ಕಾಂಗ್ರೆಸ್​ನಲ್ಲಿ ಸ್ಫೋಟಗೊಂಡಿರುವ ಅಸಮಾಧಾನದ ಹೊಗೆ ವಿಪರೀತ ಹಂತಕ್ಕೆ ಹೋಗುವ ಸಾಧ್ಯತೆ ಇನ್ನೂ ಹೆಚ್ಚು ದಟ್ಟವಾಗುತ್ತಿದೆ. ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಪಂಜಾಬ್ ಕಾಂಗ್ರೆಸ್​ನ ಅಧ್ಯಕ್ಷರಾಗುತ್ತಾರೆ ಎಂಬ ವದಂತಿ ಹಬ್ಬಿದೆ. ಅದರ ಬೆನ್ನಲ್ಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆಂಬ ವದಂತಿಯೂ ಹಬ್ಬುತ್ತಿದೆ. ಈ ದಿಢೀರ್ ಊಹಾಪೋಹದ ಸುದ್ದಿಗೆ ಕಾರಣವಾಗಿದ್ದು ಪಂಜಾಬ್​ನ ಕಾಂಗ್ರೆಸ್ ಮುಖಂಡ ಹರೀಶ್ ರಾವತ್ ಅವರ ಹೇಳಿಕೆ. ಪಂಜಾಬ್ ಕಾಂಗ್ರೆಸ್​ನಲ್ಲಿ ಉಂಟಾಗಿರುವ ಬಿರುಕನ್ನ ಶಮನಗೊಳಿಸಲು ಕಾಂಪ್ರೊಮೈಸ್ ಫಾರ್ಮುಲಾ ಮಾಡಿದ್ದು, ಅದರಂತೆ ಸಿಧು ಅವರು ಪಿಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಹರೀಶ್ ರಾವತ್ ನಿನ್ನೆ ಹೇಳಿದ್ದರೆಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕೆಲ ಟಿವಿ ವಾಹಿನಿಗಳಲ್ಲೂ ರಾವತ್ ಈ ವಿಚಾರವನ್ನ ತಿಳಿಸಿದ್ದರು. ಇದು ಸಿಎಂ ಅಮರೀಂದರ್ ಸಿಂಗ್ ಅವರನ್ನ ಸಿಡಿಮಿಡಿಗೊಳಿಸಿದೆ. ದೆಹಲಿಯಲ್ಲಿರುವ ಪಕ್ಷದ ವರಿಷ್ಠರಿಗೆ ಅವರು ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಈ ವಿಚಾರದ ಬಗ್ಗೆ ಸ್ಪಷ್ಟನೆ ಕೇಳಿದರೆನ್ನಲಾಗಿದೆ.

  ಇದೇ ವೇಳೆ, ಪಿಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಿಧು ಅವರನ್ನ ಕೂರಿಸುವ ಸುದ್ದಿಯನ್ನು ಹರೀಶ್ ರಾವತ್ ತಳ್ಳಿಹಾಕಿದ್ದಾರೆ. ಕೇಂದ್ರ ಕಾಂಗ್ರೆಸ್ ವರಿಷ್ಠರು ಪಂಜಾಬ್ ಕಾಂಗ್ರೆಸ್​ನ ಭಿನ್ನಮತ ಶಮನಗೊಳಿಸಲು ಶಾಂತಿ ಸೂತ್ರದ ಮಾಡಿದ್ದು, ಅದರಂತೆ ಸಿಧುಗೆ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಕೊಡುವ ಪ್ರಸ್ತಾಪ ಇದೆ. ಇದು ಇನ್ನೂ ಅಂತಿಮಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿರುವ ವರಿಷ್ಠರೂ ಕೂಡ ಇದನ್ನೇ ಹೇಳಿದ್ದಾರೆ. ಆದರೆ ಸಿಧುಗೆ ಉನ್ನತ ಹುದ್ದೆ ಕೊಡುವ ಪ್ರಸ್ತಾಪವೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರಿಗೆ ಇರಿಸುಮುರುಸು ತಂದಿರುವುದು ತಿಳಿದುಬಂದಿದೆ.

  ಇನ್ನು, ನಿನ್ನೆ ರಾತ್ರಿ ಪಂಜಾಬ್ ಕಾಂಗ್ರೆಸ್ ವಲಯದಲ್ಲಿ ಕೆಲ ದಿಢೀರ್ ಬೆಳವಣಿಗೆಗಳು ಹಲವರನ್ನ ಅಚ್ಚರಿಗೊಳಿಸಿದ್ದವು. ಪಂಜಾಬ್ ಸಂಪುಟದಲ್ಲಿರುವ ಭಿನ್ನಮತೀಯ ಸಚಿವ ಸುಖ್​ಜಿಂದರ್ ಸಿಂಗ್ ರಂಧಾವ ಅವರ ಮನೆಗೆ ನಿನ್ನೆ ಸಂಜೆ ಸಿಧು ಭೇಟಿ ನೀಡಿದರು. ಅದಾಗಿ ಕೆಲವೇ ಹೊತ್ತಿನಲ್ಲಿ ಐದಕ್ಕೂ ಹೆಚ್ಚು ಪಂಜಾಬ್ ಕಾಂಗ್ರೆಸ್ ಮುಖಂಡರು ಅಲ್ಲಿ ಸೇರಿಕೊಂಡರು. ಇವರಲ್ಲಿ ಪರ್ಗತ್ ಸಿಂಗ್, ತೃಪ್ತಿ ಬಾಜವಾ, ಚರಂಜೀತ್ ಸಿಂಗ್ ಚನ್ನಿ ಅವರೂ ಇದ್ದರೆನ್ನಲಾಗಿದೆ. ಆದರೆ, ಮಾಧ್ಯಮಗಳಿಗೆ ಈ ನಾಯಕರು ಯಾವುದೇ ಪ್ರತಿಕ್ರಿಯೆ ಕೊಡದೇ ಹೋದರು.

  ಇದನ್ನೂ ಓದಿ: ರಾಹುಲ್ ಅಲ್ಲ, ಪ್ರಿಯಾಂಕ ಅಲ್ಲ.. ಕಮಲ್​​ನಾಥ್​ಗೆ ಕಾಂಗ್ರೆಸ್ ಅಧ್ಯಕ್ಷ ಪಟ್ಟ? ಪ್ರಶಾಂತ್ ಕಿಶೋರ್ ಪ್ಲಾನ್!?

  ಇಲ್ಲಿ ಭಿನ್ನಮತೀಯರ ಸಭೆ ನಡೆದರೆ, ಅದೇ ಸಂದರ್ಭದಲ್ಲಿ ಸಿಎಂ ನಿಷ್ಠರ ಸಭೆ ಕೂಡ ನಡೆಯಿತು. ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಸೇರಿದಂತೆ ಕೆಲ ನಾಯಕರು ಸಿಎಂ ಅಮರೀಂದರ್ ಸಿಂಗ್ ನಿವಾಸದಲ್ಲಿ ಸಭೆ ಸೇರಿ ಚರ್ಚಿಸಿದರು. ಆದರೆ, ನಿಷ್ಠರ ಈ ಸಭೆಯ ಉದ್ದೇಶ ಸ್ಪಷ್ಟವಾಗಿಲ್ಲವಾದರೂ ಸಿಧುವನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏರಿಸುವ ಪ್ರಸ್ತಾಪದ ಬಗ್ಗೆ ಹಾಗೂ ಅದು ನಿಜವಾದರೆ ಮುಂದಿನ ನಡೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂಬ ಮಾತು ಕೇಳಿಬರುತ್ತಿದೆ. ಅದರ ಬೆನ್ನಲ್ಲೇ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಿದಾಡಿತು.

  ಆದರೆ, ಸಿಎಂ ರಾಜೀನಾಮೆ ಸುದ್ದಿಯನ್ನು ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಅವರು ನಿನ್ನೆ ರಾತ್ರಿಯೇ ತಳ್ಳಿಹಾಕಿದ್ದಾರೆ. ರಾಜೀನಾಮೆ ಸುದ್ದಿ ಬರೀ ವದಂತಿ ಅಷ್ಟೇ. 2022ರ ಚುನಾವಣೆಯನ್ನ ಅಮರೀಂದರ್ ಸಿಂಗ್ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಎದುರಿಸಲಿದೆ ಎಂದು ತುಕ್ರಾಲ್ ಟ್ವೀಟ್ ಮಾಡಿದ್ದಾರೆ.

  - Swati Bhan, CNN-News19
  Published by:Vijayasarthy SN
  First published: