1996ರ ರೀತಿಯಲ್ಲೇ ಆಫ್ಘಾನಿಸ್ತಾನದಲ್ಲಿ ತಾಲಿಬಾನ್​ನ ಆಡಳಿತ ಮಂಡಳಿಯಿಂದ ಅಧಿಕಾರ ಸಾಧ್ಯತೆ

ಆಫ್ಘಾನಿಸ್ತಾನದಲ್ಲಿ ಆಡಳಿತ ನಡೆಸಲು ಮಂಡಳಿಯ ರಚನೆಯಾಗಲಿದೆ. ತಾಲಿಬಾನ್ ಮುಖ್ಯಸ್ಥ ಹೈಬತುಲ್ಲಾ ಅಖುನ್ಜಾದ ಅವರ ಕೈಯಲ್ಲಿ ಆಡಳಿತದ ಚುಕ್ಕಾಣಿ ಇರಲಿದೆ. ತಾಲಿಬಾನ್ ಉಪನಾಯಕರೊಬ್ಬರು ಅಧ್ಯಕ್ಷರಾಗಲಿದ್ದಾರೆ.

ತಾಲಿಬಾನ್

ತಾಲಿಬಾನ್

 • News18
 • Last Updated :
 • Share this:
  ನವದೆಹಲಿ, ಆ. 19: ಆಫ್ಘಾನಿಸ್ತಾನವನ್ನು ತಾಲಿಬಾನ್ ಕ್ಷಿಪ್ರಗತಿಯಲ್ಲಿ ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿ ಪ್ರಜಾತಂತ್ರ ವ್ಯವಸ್ಥೆ ನಿಂತು ಹೋಗುವುದು ನಿಶ್ಚಿತವಾಗಿದೆ. 1996ರಿಂದ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದ ತಾಲಿಬಾನ್ ಈಗ ಅದೇ ಮಾದರಿಯಲ್ಲಿ ಮತ್ತೊಮ್ಮೆ ಆಫ್ಘಾನಿಸ್ತಾನವನ್ನು ಆಳಲು ಹೊರಟಿದೆ. ಆಫ್ಘಾನಿಸ್ತಾನದಲ್ಲಿ ಆಡಳಿತ ಮಂಡಳಿ (Ruling Council) ರಚಿಸುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ ತಾಲಿಬಾನ್​ನ ಮುಖಂಡ ಹೈಬತುಲ್ಲಾ ಅಖುಂದ್​ಜಾದ ಅವರು ಒಟ್ಟಾರೆ ಮಂಡಳಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ಧಾರೆ ಎಂದು ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಎರಡು ದಶಕಗಳ ಹಿಂದೆಯೂ ತಾಲಿಬಾನ್ ಆಡಳಿತ ಮಂಡಳಿ ಮೂಲಕ ಆಡಳಿತ ನಡೆಸಿತ್ತು. ಆಗ ಮುಲ್ಲಾ ಒಮರ್ ಅವರು ಆಡಳಿತದ ಚುಕ್ಕಾಣಿ ಹಿಡಿದು ಕಣ್ಮರೆಯಲ್ಲಿದ್ದುಕೊಂಡೇ ಆಡಳಿತ ನಡೆಸಿದ್ದರು. ಈಗ ಹೈಬತುಲ್ಲಾ ಕೂಡ ಅದೇ ಪಾತ್ರ ವಹಿಸಲಿದ್ದಾರೆನ್ನಲಾಗಿದೆ. ಮೂಲಗಳ ಪ್ರಕಾರ ಹೈಬತುಲ್ಲ ಅಖುನ್​ಜಾದ ಅವರ ಉಪನಾಯಕರಾಗಿ ಮವಲಾವಿ ಯಾಕೂಬ್, ಸಿರಾಜುದ್ದೀನ್ ಹಖ್ಖಾನಿ ಮತ್ತು ಅಬ್ದುಲ್ ಘನಿ ಬರಾದರ್ ಅವರಿದ್ದಾರೆ. ಈ ಮೂವರಲ್ಲಿ ಒಬ್ಬರು ಆಫ್ಘಾನಿಸ್ತಾನದ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ನಿರ್ವಹಿಸಲಿದ್ದಾರೆ. ಹೆಸರಿಗೆ ಇವರು ಆಡಳಿತ ನಡೆಸಿದರೂ ನೆರಳಿನಂತಿದ್ದು ಆಡಳಿತದ ಚುಕ್ಕಾಣಿ ಹಿಡಿಯುವುದು ಹೈಬತುಲ್ಲಾ ಅವರೇ ಎನ್ನಲಾಗಿದೆ.

  ಹೈಬತುಲ್ಲಾ ಅಖುನ್​ಜಾದ ಅವರ ಸಹಾಯಕ ನಾಯಕರಾಗಿರುವ ಮವಲಾವಿ ಯಾಕೂಬ್ ಅವರು ಮುಲ್ಲಾ ಒಮರ್​ನ ಮಗ. ಹಾಗೆಯೇ, ಸಿರಾಜುದ್ದೀನ್ ಹಕ್ಕಾನಿ ಅವರು ಪ್ರಬಲ ಉಗ್ರ ಸಂಘಟನೆಯಾದ ಹಖ್ಖಾನಿ ಜಾಲದ ನಾಯಕರಾಗಿದ್ದಾರೆ. ಇನ್ನು, ಅಬ್ದುಲ್ ಘನಿ ಬರಾದರ್ ಅವರು ದೋಹಾದಲ್ಲಿರುವ ತಾಲಿಬಾನ್​​ನ ರಾಜಕೀಯ ಕಚೇರಿಯ ಮುಖ್ಯಸ್ಥರಾಗಿದ್ದಾರೆ. ಆದರೆ, ತಾಲಿಬಾನ್ ಆಡಳಿತದ ರೂಪುರೇಖೆ ಇನ್ನೂ ಸ್ಪಷ್ಟಗೊಂಡಿಲ್ಲವಾದರೂ ಆಫ್ಘಾನಿಸ್ತಾನದಲ್ಲಿ ಪ್ರಜಾತಂತ್ರ ವ್ಯವಸ್ಥೆ ಇರುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.

  ಇದನ್ನೂ ಓದಿ: World U20 Athletics- ಕಿರಿಯರ ವಿಶ್ವ ಅಥ್ಲೆಟಿಕ್ಸ್ 4x400 ಮೀ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕ

  “ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಯಾವುದೇ ನೆಲೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ ಅ ವ್ಯವಸ್ಥೆಯನ್ನ ಜಾರಿಗೆ ತರಲು ಆಗುವುದಿಲ್ಲ. ಯಾವ ರೀತಿಯ ರಾಜಕೀಯ ವ್ಯವಸ್ಥೆ ಇರಬೇಕೆಂಬುದನ್ನ ಚರ್ಚಿಸುವ ಅಗತ್ಯವೇ ಇಲ್ಲ. ಯಾಕೆಂದರೆ ಷರಿಯಾ ಕಾನೂನಿನ ಆಡಳಿತ ಇರಬೇಕೆಂಬುದು ಸ್ಪಷ್ಟವಾಗಿರುವ ಸಂಗತಿ” ಎಂದು ತಾಲಿಬಾನ್​ನ ಉನ್ನತ ಮುಖಂಡರೊಂದಿಗೆ ಸಂಪರ್ಕ ಇರುವ ವಹೀದುಲ್ಲಾ ಹಶಿಮಿ ಎಂಬುವರು ಹೇಳುತ್ತಾರೆ.

  ಇದೇ ವೇಳೆ, ತಾಲಿಬಾನ್ ಹೊಸ ರಾಷ್ಟ್ರೀಯ ಸೇನಾಪಡೆಯನ್ನ ರಚಿಸಲು ಹೊರಟಿದೆ. ತನ್ನ ಈ ಪಡೆಗೆ ಸೇರಿಕೊಳ್ಳುವಂತೆ ಆಫ್ಘಾನಿಸ್ತಾನದ ಸೈನಿಕರು ಮತ್ತು ಮಾಜಿ ಪೈಲಟ್​ಗಳನ್ನೂ ಆಹ್ವಾನಿಸಿದೆ. ಈ ಬಹುತೇಕ ಸೈನಿಕರು ಟರ್ಕಿ, ಜರ್ಮನಿ, ಇಂಗ್ಲೆಂಡ್ ದೇಶಗಳಲ್ಲಿ ತರಬೇತಿ ಪಡೆದವರಾಗಿದ್ದಾರೆ. ತಾಲಿಬಾನ್​ಗೆ ಈಗ ಪೈಲಟ್​ಗಳ ಅಗತ್ಯ ಬಹಳ ಇದೆ. ಆಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿ ತಾಲಿಬಾನ್ ಅನೇಕ ಕಡೆ ಹೆಲಿಕಾಪ್ಟರ್ ಹಾಗೂ ಇತರ ಯುದ್ಧವಿಮಾನಗಳನ್ನ ವಶಕ್ಕೆ ಪಡೆದಿದ್ದರು. ಇವುಗಳನ್ನ ಚಲಾಯಿಸಲು ತಾಲಿಬಾನ್​ನ ಈಗಿನ ಪಡೆಯಲ್ಲಿ ಯಾರೂ ಪೈಲಟ್​ಗಳಿಲ್ಲ. ಹಾಗೆಯೇ, ಅಕ್ಕಪಕ್ಕದ ದೇಶಗಳಿಗೆ ಹೋಗಿರುವ ವಿಮಾನಗಳನ್ನ ಹಿಂದಿರುಗಿಸಬೇಕೆಂದೂ ತಾಲಿಬಾನ್ ತಿಳಿಸಿದೆ. ಕೆಲ ದಿನಗಳ ಹಿಂದೆ ಆಫ್ಘಾನಿಸ್ತಾನದಿಂದ 22 ಮಿಲಿಟರಿ ವಿಮಾನ, 24 ಹೆಲಿಕಾಪ್ಟರ್ ಹಾಗೂ ನೂರಾರು ಆಫ್ಘನ್ ಸೈನಿಕರು ಉಜ್ಬೆಕಿಸ್ತಾನಕ್ಕೆ ಹೊರಟುಹೋಗಿದ್ದರು. ಈ ಹಿನ್ನೆಲೆಯಲ್ಲಿ ತಾಲಿಬಾನ್ ಈ ಹೆಲಿಕಾಪ್ಟರ್, ಮಿಲಿಟರಿ ವಿಮಾನಗಳನ್ನ ಮರಳಿ ಪಡೆಯಲು ಪ್ರಯತ್ನಿಸುತ್ತಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: