ಬದಲಾದ ಚಾನೆಲ್​ ನಿಯಮ: ರಿಚಾರ್ಜ್ ಕುರಿತಾದ ಗೊಂದಲಕ್ಕೆ ಇಲ್ಲಿದೆ ಉತ್ತರ

DTH ಕಂಪೆನಿಯ ವೆಬ್​ಸೈಟ್​ ಅಥವಾ ಆ್ಯಪ್​ಗೆ ಭೇಟಿ ನೀಡುವ ಮೂಲಕ ಪತ್ಯೇಕ ಮತ್ತು ಪ್ಯಾಕ್​ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದು. ಅದೇ ರೀತಿ 342 ಚಾನೆಲ್​ಗಳ ದರ ಪಟ್ಟಿಯನ್ನು ಟ್ರಾಯ್​ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

zahir | news18
Updated:February 1, 2019, 4:23 PM IST
ಬದಲಾದ ಚಾನೆಲ್​ ನಿಯಮ: ರಿಚಾರ್ಜ್ ಕುರಿತಾದ ಗೊಂದಲಕ್ಕೆ ಇಲ್ಲಿದೆ ಉತ್ತರ
@Amar Ujala
zahir | news18
Updated: February 1, 2019, 4:23 PM IST
ಫೆಬ್ರವರಿ 1 ರಿಂದ ದೇಶದಲ್ಲಿ ಟಿವಿ ಚಾನೆಲ್​ಗಳ ಆಯ್ಕೆಯ ನಿಯಮದಲ್ಲಿ ಬದಲಾವಣೆ ಆಗಲಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊರಡಿಸಿರುವ ಹೊಸ ನಿಯಮದ ಪ್ರಕಾರ ಇನ್ನು ಮುಂದೆ ಗ್ರಾಹಕರಿಗೆ ಬೇಕಾದ ಚಾನೆಲ್​ಗಳ ಆಯ್ಕೆ ಸ್ವಾತಂತ್ರ್ಯ ಸಿಗಲಿದೆ. ಈ ಬಗ್ಗೆ ಈಗಾಗಲೇ ಎಲ್ಲ ಚಾನೆಲ್​ಗಳಿಗೂ ಟ್ರಾಯ್​ ಸೂಚನೆ ನೀಡಿದ್ದು, ವೀಕ್ಷಕರಿಗೆ ಜನವರಿ 31, 2019 ರೊಳಗೆ ಚಾನೆಲ್​ ದರಗಳ ಮಾಹಿತಿ ನೀಡುವಂತೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಇನ್ನು ಮುಂದೆ ತಮ್ಮಿಷ್ಟದ ಚಾನೆಲ್​ಗಳನ್ನು ಆರಿಸಿ ಅದಕ್ಕೆ​ ಪಾವತಿ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಿಮಗೆ ಚಾನೆಲ್​ ಒದಗಿಸುವ ಕಂಪೆನಿಯು ಮೂಲ ಪ್ಯಾಕ್​ ಅನ್ನು ಆಕ್ಟಿವೇಟ್​ ಮಾಡಿಕೊಳ್ಳಲಿದೆ.

ಮೂಲ ಪ್ಯಾಕ್​ಗೆ 130 ರೂ ನಿಗದಿ ಮಾಡಲಾಗಿದ್ದು, ಜಿಎಸ್​ಟಿ ಸೇರಿದರೆ  150 ರೂ. ಗ್ರಾಹಕರು  ಪಾವತಿಸಬೇಕು. ಇಲ್ಲಿ ನಿಮಗೆ 100 ಚಾನೆಲ್​ಗಳನ್ನು ವೀಕ್ಷಿಸುವ ಅವಕಾಶವಿರಲಿದೆ. ದಿಢೀರನೆ ಬದಲಾದ ನಿಯಮದಿಂದ ಗ್ರಾಹಕರು ಗೊಂದಲಕ್ಕೀಡಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಟ್ರಾಯ್​  ಅಪ್ಲಿಕೇಶನ್​ವೊಂದನ್ನು ಹೊರತಂದಿದೆ. ಈ ಮೂಲಕ ಟಿವಿ ವೀಕ್ಷಕರ ಕೆಲ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಿದೆ. ಅಂತಹ ಸಂಶಯಗಳಿಗೆ ಸಂಬಂಧಿಸಿದ ಕೆಲ ಮಾಹಿತಿಗಳು ಇಲ್ಲಿವೆ.

(1) ಪ್ರಶ್ನೆ: ಏನಿದು ಹೊಸ ನಿಯಮ?
ಉತ್ತರ: ಟ್ರಾಯ್​ ಹೊರಡಿಸಿರುವ ಹೊಸ ನಿಯಮದಲ್ಲಿ ನೀವು ನೋಡುವ ಚಾನೆಲ್​ಗಳಿಗೆ ಮಾತ್ರ ಹಣ ಪಾವತಿಸಿದರೆ ಸಾಕು. ಕೆಲ ವರ್ಷಗಳ ಹಿಂದೆಯೇ ಪ್ರೇಕ್ಷಕರಿಗೆ ಡೈರೆಕ್ಟ್​ ಟು ಹೋಮ್​(DTH) ಮೂಲಕ ಸರ್ಕಾರ ಹಲವು ಚಾನೆಲ್​ಗಳನ್ನು ವೀಕ್ಷಿಸುವ ಅವಕಾಶ ಒದಗಿಸಿತ್ತು. ಆದರೆ ಮನರಂಜನೆ, ಕ್ರೀಡೆ ಮತ್ತು ಮಕ್ಕಳಿಗೆ ಸಂಬಂಧಿಸಿದ ಚಾನೆಲ್​ಗಳನ್ನು ಪಡೆಯಲು ದುಬಾರಿ ಹೆಚ್ಚುವರಿ ಪ್ಯಾಕ್​ಗಳನ್ನು ಸಕ್ರಿಯಗೊಳಿಸಬೇಕಿತ್ತು. ಇದರಿಂದ ಚಾನೆಲ್​ ವೀಕ್ಷಣೆಯು ದುಬಾರಿಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ನಿಟ್ಟಿನಲ್ಲಿ ಟ್ರಾಯ್​ ಹೊಸ ನಿಯಮವನ್ನು ಜಾರಿಗೊಳಿಸಿದ್ದು, ಎಲ್ಲಾ ಮಲ್ಟಿ ಸರ್ವೀಸ್ ಆಪರೇಟರ್ಸ್​ (MSOs)ಮತ್ತು ಲೋಕಲ್ ಕೇಬಲ್ ಆಪರೇಟರ್ಸ್​ಗಳು ಈ ನಿಯಮ ಪಾಲಿಸುವಂತೆ ಸೂಚಿಸಿತ್ತು. ಅದರಂತೆ ಡಿಸೆಂಬರ್​ 29 ರಿಂದ ತಮ್ಮ ನೆಟ್​ವರ್ಕ್​ನಲ್ಲಿ ಚಾನೆಲ್​ಗಳ ಹೊಸ ದರಗಳನ್ನು ಪ್ರದರ್ಶಿಸಬೇಕೆಂದು ಹೇಳಲಾಗಿದೆ.

ಸ್ಕ್ರೀನ್ ಮೇಲೆ ಚಾನೆಲ್ ದರ: ಹೊಸ ನಿಯಮಾವಳಿಯಂತೆ ಎಲ್ಲಾ ನೆಟ್​ವರ್ಕ್​ಗಳು ತಮ್ಮಲ್ಲಿನ ಚಾನೆಲ್​ಗಳ ದರಗಳನ್ನು ಪರದೆಯಲ್ಲಿ ಪ್ರದರ್ಶಿಸಬೇಕಿದೆ. ಇಲ್ಲಿ ಗ್ರಾಹಕರಿಗೆ ಬೇಕಾದ ಚಾನೆಲ್​ಗಳನ್ನು ಆರಿಸಿಕೊಳ್ಳುವ ಅವಕಾಶವಿರಲಿದೆ. ಹೊಸ ನಿಯಮದ ಅನ್ವಯ ಪತ್ಯೇಕವಾಗಿ ಅಥವಾ ಪ್ಯಾಕ್​ ರೀತಿಯಲ್ಲಿ ಚಾನೆಲ್​ಗಳಿಗೆ ದರ ನಿಗದಿ ಪಡಿಸಲಾಗಿರುತ್ತದೆ . ಎಲೆಕ್ಟ್ರಾನಿಕ್ ಪ್ರೊಗ್ರಾಮ್ ಗೈಡ್ (EPG) ಮೂಲಕ, ಟಿವಿ ಪರದೆಯಲ್ಲಿ ಪ್ರತಿ ಚಾನೆಲ್​ಗಳ MRP ಅನ್ನು ತಿಳಿಸಲಾಗುತ್ತದೆ. ಈ ದರಕ್ಕಿಂತ ಹೆಚ್ಚಿನ ದರವನ್ನು ಕೇಬಲ್​ ಆಪರೇಟರ್​ ಅಥವಾ ವಿತರಕರು ವೀಕ್ಷಕರಿಗೆ ವಿಧಿಸುವಂತಿಲ್ಲ ಎಂದು ಟ್ರಾಯ್​ ತಿಳಿಸಿದೆ.

(2) ಪ್ರಶ್ನೆ: ಪ್ರತಿ ತಿಂಗಳ ರಿಚಾರ್ಜ್​ ಎಷ್ಟು?
ಉತ್ತರ: ಗ್ರಾಹಕರು ಹೊಸ ನಿಯಮದ ಅನುಸಾರ ಪ್ರತಿ ತಿಂಗಳು 100 ಚಾನೆಲ್​ಗಳಿಗೆ 150 ರೂ. ಪಾವತಿಸಬೇಕಾಗುತ್ತದೆ. ನೀವು 100 ಚಾನೆಲ್​ಗಳನ್ನು ಆರಿಸಿಕೊಂಡು, ಬಳಿಕ ಹೆಚ್ಚುವರಿ 25 ಚಾನೆಲ್​ಗಳಿಗಾಗಿ 20 ರೂ. ಪಾವತಿಸಬೇಕು. ಇನ್ನು ಪೇ-ಚಾನೆಲ್​ಗಳಿಗೆ ಸ್ಥಿರ ಬೆಲೆಯನ್ನು ನಿಗದಿ ಮಾಡಲಾಗಿದ್ದು, ಅದರಂತೆ ಹಣ ನೀಡಬೇಕು. ಟ್ರಾಯ್​ ನೀಡಿರುವ ಹೊಸ ನಿಯಮದಂತೆ ಈ ದರಗಳು 1 ರೂ. ನಿಂದ 19 ರೂ. ಒಳಗಿರಲಿದೆ.
Loading...

(3) ಪ್ರಶ್ನೆ: ಈ ಹೊಸ ನಿಯಮದಿಂದ ತಿಂಗಳ ದರದಲ್ಲಿ ಹೆಚ್ಚಳ? 
ಉತ್ತರ: ಇದು ನೀವು ಯಾವ ಚಾನೆಲ್​ಗಳನ್ನು ವೀಕ್ಷಿಸುತ್ತೀರಾ ಎಂಬುದರ ಮೇಲೆ ನಿರ್ಧಾರವಾಗಲಿದೆ. ಟ್ರಾಯ್​ ಹೇಳಿರುವಂತೆ BARC ನೀಡಿದ ವೀಕ್ಷಕರ ವಿವರಣೆ ಪ್ರಕಾರ, ದೇಶದ ಶೇಕಡ 80ರಷ್ಟು ವೀಕ್ಷಕರು 40 ಅಥವಾ ಅದಕ್ಕಿಂತ ಕಡಿಮೆ ಚಾನೆಲ್​ಗಳನ್ನು ವೀಕ್ಷಿಸುತ್ತಿದ್ದಾರೆ. ಈ ಆಧಾರದ ಮೇಲೆ ಗ್ರಾಹಕರು ಚಾನೆಲ್​ಗಳ ಆಯ್ಕೆ ವೇಳೆ ಸ್ವಲ್ಪ ಎಚ್ಚರವಹಿಸಿದರೆ ಪ್ರಸ್ತುತ ಪಾವತಿಸುವ ಬಿಲ್​ಗಿಂತ ಕಡಿಮೆ ದರದಲ್ಲಿ ಹೆಚ್ಚು ಚಾನೆಲ್​ಗಳನ್ನು ವೀಕ್ಷಿಸಬಹುದು ಎಂದು ತಿಳಿಸಿದೆ.

(4) ಪ್ರಶ್ನೆ: ಆಪರೇಟರುಗಳು ಹೊಸ ಪ್ಯಾಕೇಜ್​ ಆಫರ್ ನೀಡಲಿದೆಯೇ?
ಉತ್ತರ: ವೀಕ್ಷಕರಿಗೆ ಚಾನೆಲ್​ಗಳ ಆಯ್ಕೆಯ ಸ್ವಾತಂತ್ರ್ಯವನ್ನು ಟ್ರಾಯ್​ ಒದಗಿಸಿಕೊಟ್ಟಿದೆ. ಇದರ ಹೊರತಾಗಿಯು ಕೇಬಲ್ ಆಪರೇಟರ್​​ಗಳು ಮತ್ತು ವಿತರಕರು ಚಾನೆಲ್​ ಪ್ಯಾಕ್​ ಆಫರ್​ಗಳನ್ನು ನೀಡಬಹುದು. ಇಂತಹ ಆಫರ್​ಗಳನ್ನು ಗ್ರಾಹಕರು ಬಳಸಿಕೊಳ್ಳಬಹುದಾಗಿದೆ.

(5) ಪ್ರಶ್ನೆ: ಉಚಿತ ಚಾನೆಲ್​ಗಳು ಯಾವುವು?
ಉತ್ತರ: ಗ್ರಾಹಕರಿಗೆ ಫ್ರಿ ಟು ಏರ್​ (FTA)ಚಾನೆಲ್​ಗಳನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಟ್ರಾಯ್​ ತನ್ನ ಹೊಸ ನಿಯಮದಲ್ಲಿ ತಿಳಿಸಿದೆ. ಈ ಚಾನೆಲ್​ಗಳಿಗೆ ಯಾವುದೇ ರೀತಿ ಚಾರ್ಜ್​ ವಿಧಿಸಲಾಗುವುದಿಲ್ಲ. ಅದಾಗ್ಯೂ ಎಲ್ಲಾ ಎಫ್​ಟಿಎ ಚಾನೆಲ್​ಗಳ ಪಡೆಯುವುದು ಕೂಡ ಕಡ್ಡಾಯವಲ್ಲ. ಆದರೆ ದೂರದರ್ಶನದ ಎಲ್ಲ ಚಾನೆಲ್​ಗಳನ್ನು ನೀಡುವುದು ಕಡ್ಡಾಯ ಮಾಡಲಾಗಿದೆ.

(6) ಪ್ರಶ್ನೆ: 150 ರೂ.ನಲ್ಲಿ ಯಾವ ಚಾನೆಲ್​ಗಳು ಸಿಗಲಿದೆ?
ಉತ್ತರ: 150 ರೂ.ನಲ್ಲಿ ನಿಮ್ಮ ಇಷ್ಟದ ಎಫ್​ಟಿಎ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಪೇ ಚಾನೆಲ್​ಗಳಿಗೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಂದರೆ ನೀವು 100 ಫ್ರೀ-ಟು-ಏರ್ ಚಾನೆಲ್​ಗಳನ್ನು (130 + 20) 150 ರೂಪಾಯಿಗಳಲ್ಲಿ ಆಯ್ಕೆ ಮಾಡಿಕೊಂಡಿರಿ ಅಂದುಕೊಳ್ಳಿ. ಬಳಿಕ ನಿಮಗೆ ಚಾನೆಲ್​ ಬೇಕಿದ್ದರೆ (100 ಕ್ಕಿಂತ ಹೆಚ್ಚು) 25 ಚಾನೆಲ್​ಗಳಿಗೆ 20 ರೂ. ಹೆಚ್ಚುವರಿ ಪಾವತಿಸಬೇಕಾಗುತ್ತದೆ. ದೇಶದಲ್ಲಿ 534 ಫ್ರೀ-ಟು ಏರ್​ ಚಾನೆಲ್​ಗಳು ಲಭ್ಯವಿದ್ದು, ಇವುಗಳಲ್ಲಿ ನಿಮಗೆ ಬೇಕಾದ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ  ಕೇಬಲ್​ ನೆಟ್​ವರ್ಕ್​ನ #999 ಚಾನೆಲ್​ ವೀಕ್ಷಿಸಬಹುದು.

(7) ಪ್ರಶ್ನೆ: ಚಾನೆಲ್​ಗಳ ಲೀಸ್ಟ್​ ಪಡೆಯುವುದೆಲ್ಲಿ?
ಉತ್ತರ: ಟ್ರಾಯ್​ ಮಾರ್ಗಸೂಚಿ ಪ್ರಕಾರ ಎಲ್ಲಾ DTH ಕಂಪೆನಿಗಳು ಗ್ರಾಹಕರಿಗೆ ತಮ್ಮ ವೆಬ್​ಸೈಟ್​ನಲ್ಲಿ ಚಾನೆಲ್​ ದರಗಳ ಪಟ್ಟಿ ಹಾಕುವಂತೆ ತಿಳಿಸಿದೆ. ನಿಮ್ಮ DTH ಕಂಪೆನಿಯ ವೆಬ್​ಸೈಟ್​ ಅಥವಾ ಆ್ಯಪ್​ಗೆ ಭೇಟಿ ನೀಡುವ ಮೂಲಕ ಪತ್ಯೇಕ ಮತ್ತು ಪ್ಯಾಕ್​ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದು. ಅದೇ ರೀತಿ 342 ಚಾನೆಲ್​ಗಳ ದರ ಪಟ್ಟಿಯನ್ನು ಟ್ರಾಯ್​ ತನ್ನ ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ.

(8) ಪ್ರಶ್ನೆ: ಚಾನೆಲ್​ಗಳ ಆಯ್ಕೆ ಹೇಗೆ?
ಉತ್ತರ: ಎಲ್ಲಾ ಕೇಬಲ್​ ಮತ್ತು ಡಿಟಿಹೆಚ್​ ಕಂಪೆನಿಗಳು ತಮ್ಮ ವೆಬ್​ಸೈಟ್​ನಲ್ಲಿ ಗ್ರಾಹಕರಿಗೆ ಬೇಕಾದ ಚಾನೆಲ್​ಗಳ ಪಟ್ಟಿಯನ್ನು ಪ್ರಕಟಿಸಿರುತ್ತದೆ. ಇಲ್ಲಿ ಚಾನೆಲ್​ಗಳನ್ನು ಆಯ್ಕೆ ಮಾಡಿ, ಆನ್​ಲೈನ್​ ಮೂಲಕವೇ ಪಾವತಿ ಮಾಡಿಕೊಳ್ಳಬಹುದು. ಇದರ ಹೊರತಾಗಿ ಗ್ರಾಹಕರು ಕಸ್ಟಮರ್ ಕೇರ್​ ನಂಬರ್​ಗೆ ಕರೆ ಮಾಡಿ ಚಾನೆಲ್​ಗಳನ್ನು ಆರಿಸಿಕೊಳ್ಳಬಹುದಾಗಿದೆ.

(9) ಪ್ರಶ್ನೆ: ನೆಟ್​ವರ್ಕ್​ ಕಂಪೆನಿಗಳ ದರದಲ್ಲಿ ವ್ಯತ್ಯಾಸ ಇರಲಿದೆಯೇ?
ಉತ್ತರ: ಇಲ್ಲ. ಎಲ್ಲಾ ಪ್ರಸಾರಕ ಚಾನೆಲ್​ಗಳ ಡಿಕ್ಲೇರ್ಡ್​ ಎಂಆರ್​ಪಿ ದರವು ಒಂದೇ ರೀತಿ ಇರಲಿದೆ. ಅಂದರೆ ನೀವು ಎರಡು ಕಂಪೆನಿಯ DTH ನೆಟ್​​ವರ್ಕ್​ನಲ್ಲಿ ಚಾನೆಲ್​ಗಳನ್ನು ಆಯ್ಕೆ ಮಾಡಿಕೊಂಡರೂ, ಇಲ್ಲಿ ಚಾನೆಲ್​ ದರಗಳು ಒಂದೇ ರೀತಿಯಾಗಿರುತ್ತದೆ.

First published:February 1, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ