ನವದೆಹಲಿ: ವಿಶ್ವಾದ್ಯಂತ ಮತ್ತೆ ಕೊರೊನಾ (Corona Virus) ತನ್ನ ರೌದ್ರಾವತವನ್ನು ಶುರು ಮಾಡಿದೆ. ಇನ್ನೂ ಇತರ ದೇಶದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಚೀನಾ (China), ಜಪಾನ್ (Japan), ದಕ್ಷಿಣ ಕೊರಿಯಾ (South Korea), ಹಾಂಗ್ ಕಾಂಗ್ (Hong Kong) ಮತ್ತು ಥೈಲ್ಯಾಂಡ್ನಿಂದ (Thailand) ಬರುವ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ (RTPCR) ಪರೀಕ್ಷೆ ಕಡ್ಡಾಯಗೊಳಿಸಲು ಸರ್ಕಾರ ಪ್ರಕಟಣೆ ಹೊರಡಿಸಿದೆ. ಪ್ರಸ್ತುತ ಭಾರತದಲ್ಲಿನ (India) ಕೋವಿಡ್ ಪರಿಸ್ಥಿತಿ ಕುರಿತಂತೆ ಒಂದು ದಿನದ ಹಿಂದೆಯಷ್ಟೇ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಅಲ್ಲದೇ ದೇಶದಲ್ಲಿ ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಸಿದ್ಧವಾಗಿದೆ ಎಂದು ತಿಳಿಸಿದ್ದರು. ಇದೀಗ ವಿದೇಶದಿಂದ ಭಾರತಕ್ಕೆ (India) ಬರುವವರನ್ನು ಕೊರೊನಾ ಟೆಸ್ಟ್ಗೆ (Corona Test) ಒಳಪಡಿಸುವಂತೆ ಸೂಚಿಸಲಾಗಿದೆ.
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೊರೊನಾ ಟೆಸ್ಟ್ ಕಡ್ಡಾಯ
ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ನಿಂದ ಬರುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯವಾಗಿ ಆರ್ಟಿ-ಪಿಸಿಆರ್ ಟೆಸ್ಟ್ ಮಾಡಬೇಕು. ಅವರಲ್ಲಿ ಯಾರಿಗಾದರೂ ರೋಗಲಕ್ಷಣ ಕಂಡುಬಂದರೆ ಅಥವಾ ಕೋವಿಡ್ 19 ಪಾಸಿಟಿವ್ ಬಂದರೆ, ಕೂಡಲೇ ಅವರನ್ನು ಕ್ವಾರಂಟೈನ್ಗೆ ಒಳಪಡಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.
ದೇಶದಲ್ಲಿ ಸೋಂಕು ಹರಡುವುದನ್ನು ನಿಯಂತ್ರಿಸಲು ಅಧಿಕಾರಿಗಳು ಹೆಚ್ಚಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ. ಅಲ್ಲದೇ ಇಂದಿನಿಂದ ವಿದೇಶದಿಂದ ಆಗಮಿಸುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಪರೀಕ್ಷೆ ನಡೆಸಲು ಪ್ರಾರಂಭಿಸಲಾಗಿದೆ. ವಿದೇಶದಿಂದ ಆಗಮಿಸುವ ಶೇಕಡಾ ಎರಡರಷ್ಟು ಪ್ರಯಾಣಿಕರು ಇಂದಿನಿಂದ ಕೊರೊನಾ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.
ಏರ್ ಸುವಿಧಾ ಫಾರ್ಮ್ ಭರ್ತಿ ಕಡ್ಡಾಯ
ಪ್ರಸ್ತುತ ದೇಶದಲ್ಲಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇತರ ದೇಶಗಳಿಂದ ಆಗಮಿಸುವ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಏರ್ ಸುವಿಧಾ ಫಾರ್ಮ್ ಅನ್ನು ಭರ್ತಿ ಮಾಡಲು ಕಡ್ಡಾಯಗೊಳಿಸಲಾಗಿದೆ. ಏರ್ ಸುವಿಧಾ ಸ್ವಯಂ ಘೋಷಣೆ ಫಾರ್ಮ್ ಆಗಿದ್ದು, ಇದನ್ನು ಕೋವಿಡ್ ತಡೆಗಟ್ಟುವ ಕ್ರಮವಾಗಿ ಪರಿಚಯಿಸಲಾಗಿದೆ ಮತ್ತು ಸಾಂಕ್ರಾಮಿಕ ರೋಗ ಹೊಂದಿರುವವರ ಜೊತೆಗೆ ಯಾರು ಸಂಪರ್ಕ ಹೊಂದಿದ್ದರು ಎಂದು ಪತ್ತೆಹಚ್ಚಲು ಇದನ್ನು ಬಳಸಲಾಗುತ್ತದೆ. ಭಾರತಕ್ಕೆ ಬರಲು ಬಯಸುವ ಎಲ್ಲಾ ಪ್ರಯಾಣಿಕರಿಗೂ ಪ್ರಸ್ತುತ ಇದು ಕಡ್ಡಾಯವಾಗಿದೆ.
ಏರ್ ಸುವಿಧಾ ಎಂದರೇನು?
ಏರ್ ಸುವಿಧಾ ಪೋರ್ಟಲ್ ಅನ್ನು ಆಗಸ್ಟ್ 2020 ರಲ್ಲಿ ಕಡ್ಡಾಯ ಸ್ವಯಂ-ವರದಿ ಪೋರ್ಟಲ್ ಆಗಿ ಪರಿಚಯಿಸಲಾಯಿತು. ಈ ಪೋರ್ಟಲ್ ಮೂಲಕ ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪುಯಾಣಿಕರು ತಮ್ಮ ಪುಯಾಣದ ವಿವರಗಳನ್ನು ಮತ್ತು ಅವರ ಕೋವಿಡ್ ಸ್ಥಿತಿಗತಿಗಳನ್ನು ಇದರಲ್ಲಿ ಕಡ್ಡಾಯವಾಗಿ ಭರ್ತಿ ಮಾಡಲೇಬೇಕು.
ಇದನ್ನೂ ಓದಿ:Coronavirus Cases: ಚೀನಾದಲ್ಲಿ ಕೊರೊನಾ ಹಾಹಾಕಾರ, ಅಮೆರಿಕಾದಲ್ಲೂ ಕೇಸ್ ಹೆಚ್ಚಳ, ಭಾರತದಲ್ಲೂ ಭಾರೀ ಅಲರ್ಟ್!
ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸುವಂತೆ ಸೂಚನೆ
ಶುಕ್ರವಾರ ವೀಡಿಯೋ ಕಾನ್ಫಿರೆನ್ಸ್ ಮೂಲಕ ದೇಶದ ಎಲ್ಲಾ ರಾಜ್ಯದ ಆರೋಗ್ಯ ಸಚಿವರೊಂದಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಭೆ ನಡೆಸಿದರು. ಈ ವೇಳೆ ಕೋವಿಡ್ನಲ್ಲಿ ಹೊಸ ರೂಪಾಂತರಿ ವೈರಸ್ಗಳು ಕಂಡುಬರುತ್ತಿರುವುದರಿಂದ ಎಲ್ಲಾ ರೋಗಿಗಳ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸುವಂತೆ ಎಲ್ಲ ಸಚಿವರಿಗೂ ಸೂಚಿಸಿದರು. ಅಲ್ಲದೇ ವಯಸ್ಸಾದ ಮತ್ತು ದುರ್ಬಲ ಜನಸಂಖ್ಯೆಯ ಗುಂಪಿನವರಿಗೆ ಲಸಿಕೆ ನೀಡುವಂತೆ ಸಲಹೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ