ನವದೆಹಲಿ: ಮಕ್ಕಳಿಗೆ ಶಿಶು ಕಾಲದಲ್ಲೇ ದೇಶಭಕ್ತಿ, ಸಂಸ್ಕೃತಿ ಮತ್ತು ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಲು ‘ಗರ್ಭಸಂಸ್ಕಾರ’ (Garbha Sanskar) ಎಂಬ ಅಭಿಯಾನವನ್ನು ನಡೆಸಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮಹಿಳಾ ವಿಭಾಗವಾದ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.
ದೆಹಲಿಯ ಜೆಎನ್‌ಯೂ ವಿಶ್ವವಿದ್ಯಾಲಯದಲ್ಲಿ ನಡೆದ ಗರ್ಭ ಸಂಸ್ಕಾರ (ಗರ್ಭಧಾರಣೆ ಸಂಸ್ಕೃತಿ) ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಮುಂದಿನ ಪೀಳಿಗೆಗೆ ಹಿಂದೂ ಸಂಸ್ಕೃತಿ ಆಚರಣೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಗರ್ಭದಲ್ಲಿಯೇ ಶಿಶುಗಳಿಗೆ ಹಿಂದೂ ಸಂಸ್ಕೃತಿ ಪಾಠ ಕಲಿಸಲು ಮುಂದಾಗಿದೆ ಎಂದರು.
ಇದನ್ನೂ ಓದು: Hinduism: ಗೋಮಾಂಸ ತಿನ್ನುವವರು ಕೂಡಾ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಬಹುದು: ಆರೆಸ್ಸೆಸ್ ನಾಯಕ
ಗರ್ಭಾವಸ್ಥೆಯಲ್ಲಿ ಗೀತ ಪಠಣ
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೆಹಲಿಯ ಏಮ್ಸ್ ಸೇರಿದಂತೆ ದೇಶದ ವಿವಿಧ ಭಾಗದ ವೈದ್ಯರು, ಸ್ತ್ರೀರೋಗ ತಜ್ಞರು, ಯೋಗ ತರಬೇತುದಾರರು ಮತ್ತು ಆಯುರ್ವೇದ ವೈದ್ಯರು ಸೇರಿದಂತೆ 12 ರಾಜ್ಯಗಳಿಂದ 70 ರಿಂದ 80 ವೈದ್ಯರು ಅದರಲ್ಲಿಯೂ ಹೆಚ್ಚಾಗಿ ಸ್ತ್ರೀ ರೋಗ, ಆಯುರ್ವೇದ ತಜ್ಞರು ಭಾಗವಹಿಸಿದ್ದರು. ಗರ್ಭದಲ್ಲಿರುವ ಶಿಶುಗಳಿಗೆ ಹಿಂದೂ ಸಂಸ್ಕೃತಿಯ ಆಚರಣೆ, ಮೌಲ್ಯಗಳನ್ನು ತಿಳಿಸಲು ಗರ್ಭಾವಸ್ಥೆಯಲ್ಲಿಯೇ ಭಗವದ್ಗೀತೆ ಪಠಣ, ರಾಮಾಯಣ, ಯೋಗಾಭ್ಯಾಸ ಮುಂತಾದ ಸಂಸ್ಕೃತಿ ಪಾಠ ಕಲಿಸಲು ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್ ಮುಂದಾಗಿದೆ ಎಂದು ಮಾಧುರಿ ಮರಾಠೆ ಹೇಳಿದರು.
1000 ಮಹಿಳೆಯರನ್ನು ತಲುಪುವ ಗುರಿ
ಗರ್ಭಾವಸ್ಥೆಯಲ್ಲಿ ಪ್ರಾರಂಭವಾಗುವ ಈ ಕಾರ್ಯಕ್ರಮವು ಶಿಶುಗಳಿಗೆ ಎರಡು ವರ್ಷ ತಲುಪುವವರೆಗೆ ಮುಂದುವರಿಯುತ್ತದೆ. ಗರ್ಭದಲ್ಲಿರುವ ಮಗು 500 ಪದಗಳನ್ನು ಕಲಿಯಬಹುದು. ಈ ಅಭಿಯಾನದ ಗುರಿ ಮತ್ತು ಉದ್ದೇಶ ಮಗುವಿಗದೆ ಗರ್ಭದಲ್ಲಿಯೇ ಸಂಸ್ಕಾರ ಕಲಿಸುವುದು. ಈ ಅಭಿಯಾನಕ್ಕಾಗಿ ರಾಷ್ಟ್ರ ಸೇವಿಕಾ ಸಮಿತಿಯ ಸಂವರ್ಧಿನಿ ನ್ಯಾಸ್ ಕನಿಷ್ಠ ಆರಂಭಿಕ ಹಂತದಲ್ಲಿ ಕನಿಷ್ಠ 1000 ಮಹಿಳೆಯರನ್ನು ತಲುಪಲು ಯೋಜನೆ ರೂಪಿಸಿಕೊಂಡಿದೆ ಎಂದು ಮಾಧುರಿ ಮರಾಠೆ ಹೇಳಿದರು.
ಇದನ್ನೂ ಓದು: Hindu: ಹಿಂದೂವಾಗಲು ಧರ್ಮ ಬದಲಾಯಿಸಬೇಕೆಂದಿಲ್ಲ, ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ: ಮೋಹನ್ ಭಾಗವತ್
ಗರ್ಭಶುದ್ಧಿಗೆ ಸಂಸ್ಕೃತದ ಓದು
ಇನ್ನು, ಗರ್ಭಶುದ್ಧಿಯ ಭಾಗವಾಗಿ ಮಹಿಳೆಯು ಗರ್ಭಾವಸ್ಥೆಯಲ್ಲಿ ಸಂಸ್ಕೃತವನ್ನು ಓದ ಬೇಕು, ಗೀತಾ ಪಠಣೆ ಮಾಡಬೇಕು ಎಂದು ಹೇಳಿದ ಸಂಸ್ಥೆಯ ಸಹ ಸಂಚಾಲಕಿ ಡಾ ರಜನಿ ಮಿತ್ತಲ್, ಗರ್ಭ ಸಂಸ್ಕಾರವನ್ನು ಸರಿಯಾಗಿ ನಡೆಸಿದರೆ ಗರ್ಭದಲ್ಲಿ ಮಗುವಿನ ಡಿಎನ್ಎ ಕೂಡ ಬದಲಾಯಿಸಬಹುದು. ದೈಹಿಕ ಆರೋಗ್ಯದ ಜೊತೆಗೆ ಗರ್ಭಾಶಯದ ಶುದ್ಧೀಕರಣ ಮತ್ತು ಸಕಾರಾತ್ಮಕತೆಯೂ ಹೆಚ್ಚಿನ ಅಗತ್ಯವಿದೆ. ದೇಶದಲ್ಲಿ ಪ್ರತಿ ವರ್ಷ 1000 ಗರ್ಭ ಸಂಸ್ಕಾರದ ಮಕ್ಕಳನ್ನು ಒದಗಿಸುವುದು ನಮ್ಮ ಉದ್ದೇಶ. ಇದರಿಂದ ಭಾರತದ ಹಳೆಯ ಸಂಸ್ಕೃತಿಯನ್ನು ಮರು ಸ್ಥಾಪಿಸಲು ಸಹಕಾರಿಯಾಗುತ್ತದೆ ಎಂದು ಮಾಹಿತಿ ನೀಡಿದರು.
ಶ್ರೀರಾಮನಂತಹ ಮಕ್ಕಳಿಗೆ ಜನ್ಮ ನೀಡಿದರೆ ಸಂತೋಷ
ಬಾಲಾಪರಾಧಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳೇ ತಂದೆ ತಾಯಿಯನ್ನು ಕೊಲೆ ಮಾಡುವುದು, ಅತ್ಯಾಚಾರಿಗಳಾಗುವುದು ನೋಡಿದ್ದೇವೆ, ಆದರೆ ಗರ್ಭ ಸಂಸ್ಕೃತಿ ಅಳವಡಿಸಿಕೊಂಡು ತಾಯಂದಿರು ಶ್ರೀರಾಮನಂತಹ ಮಕ್ಕಳಿಗೆ ಜನ್ಮ ನೀಡಿದರೆ ಸಂತೋಷವಾಗುತ್ತದೆ. ಇಂತಹ ಮಕ್ಕಳು ಪೋಷಕರಿಗೆ ಬದ್ಧರಾಗಿ ಮತ್ತು ದೇಶ ಕಾಪಾಡುವ ಪ್ರಜೆಗಳಾಗುತ್ತಾರೆಂದು ಸಂಸ್ಥೆಯ ಸಹ ಸಂಚಾಲಕಿ ಡಾ ರಜನಿ ಮಿತ್ತಲ್ ಅಭಿಪ್ರಾಯ ಪಟ್ಟರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ