Amazon| ಅಮೆಜಾನ್ ಅನ್ನು ಈಸ್ಟ್​ ಇಂಡಿಯಾ ಕಂಪೆನಿಗೆ ಹೋಲಿಕೆ ಮಾಡಿ ಟೀಕಿಸಿದ ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ

18 ನೇ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪನಿ ಏನು ಮಾಡುತ್ತಿತ್ತೋ? ಅಮೆಜಾನ್ ಚಟುವಟಿಕೆಗಳಲ್ಲಿ ಇಂದು ಅಂತಹದ್ದೇ ಕೆಲಸಗಳು ಗೋಚರಿಸುತ್ತಿದೆ. ಇದು ಈಸ್ಟ್ ಇಂಡಿಯಾ ಕಂಪನಿ 2.0 ಎಂದು ಪಾಂಚಜನ್ಯ ಪತ್ರಿಕೆಯಲ್ಲಿ ಟೀಕಿಸಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ನವ ದೆಹಲಿ (ಸೆಪ್ಟೆಂಬರ್​ 27); ಅಮೆಜಾನ್ (Amazon) ವಿಶ್ವದ ಅತಿದೊಡ್ಡ ಆನ್​ಲೈನ್ ಮಾರುಕಟ್ಟೆ. ಇ-ಕಾಮರ್ಸ್​ನ (E-Commerce) ಪ್ರಮುಖ ಕಂಪೆನಿಯೂ ಹೌದು. ಅಮೆಜಾನ್ ಭಾರತದಲ್ಲೂ ಸಹ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ. ಅಲ್ಲದೆ, ಆಗಿಂದಾಗ್ಗೆ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನೂ ನೀಡುತ್ತಿರುತ್ತದೆ. ಆದರೆ, ಆರ್​ಎಸ್​​ಎಸ್​ ಸಂಘಟನೆಯ ಮುಖವಾಣಿ ಪಾಂಚಜನ್ಯ (PanchaJanya) ಅಮೆಜಾನ್​ ಅನ್ನು "ಈಸ್ಟ್​ ಇಂಡಿಯಾ ಕಂಪೆನಿ 2.0"ಗೆ (East India 2.0) ಹೋಲಿಕೆ ಮಾಡಿದೆ. ಅಲ್ಲದೆ, ಈ ಕಂಪೆನಿ ಸರ್ಕಾರದಿಂದ ಅನುಕೂಲಕರ ನೀತಿಗಳನ್ನು ಪಡೆಯುವ ಸಲುವಾಗಿಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂದು ಆರೋಪಿಸಿದೆ. ಪತ್ರಿಕೆಯ ಇತ್ತೀಚಿನ ಆವೃತ್ತಿಯಲ್ಲಿ, ಅಮೆಜಾನ್ ಅನ್ನು ಟೀಕಿಸಿ ಕವರ್ ಸ್ಟೋರಿಯನ್ನು ಬರೆದಿದೆ ಎಂದು ಹೇಳಲಾಗುತ್ತಿದೆ.

    ಪತ್ರಿಕೆಯಲ್ಲಿ ಪ್ರಕಟವಾಗಿರುವ ಬರಹದಲ್ಲಿ, "18 ನೇ ಶತಮಾನದಲ್ಲಿ ಭಾರತವನ್ನು ವಶಪಡಿಸಿಕೊಳ್ಳಲು ಈಸ್ಟ್ ಇಂಡಿಯಾ ಕಂಪನಿ ಏನು ಮಾಡುತ್ತಿತ್ತೋ? ಅಮೆಜಾನ್ ಚಟುವಟಿಕೆಗಳಲ್ಲಿ ಇಂದು ಅಂತಹದ್ದೇ ಕೆಲಸಗಳು ಗೋಚರಿಸುತ್ತಿದೆ. ಇದು "ಈಸ್ಟ್ ಇಂಡಿಯಾ ಕಂಪನಿ 2.0" ಎಂದು ಟೀಕಿಸಿದೆ. ಅಲ್ಲದೆ "ಈಸ್ಟ್​ ಇಂಡಿಯಾ 2.0" ಎಂಬ ಶೀರ್ಷಿಕೆಯ ಅಡಿಯಲ್ಲೇ ಈ ಲೇಖನವನ್ನೂ ಬರೆಯಲಾಗಿದೆ.

    ಅಮೆಜಾನ್ ತನ್ನ ಏಕಸ್ವಾಮ್ಯವನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಬಯಸುತ್ತದೆ ಎಂದು ಹೇಳುತ್ತಾ, "ಹಾಗೆ ಮಾಡುವುದಕ್ಕಾಗಿ, ಇದು ಭಾರತೀಯ ನಾಗರಿಕರ ಆರ್ಥಿಕ, ರಾಜಕೀಯ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ವಶಪಡಿಸಿಕೊಳ್ಳಲು ಉಪಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ.

    ಅಮೆಜಾನ್‌ನ ವಿಡಿಯೋ ಪ್ಲಾಟ್‌ಫಾರ್ಮ್, ಪ್ರೈಮ್ ವೀಡಿಯೋವನ್ನು ದೊಡ್ಡ ಮಾರುಕಟ್ಟೆಯಾಗಿ ಸೃಷ್ಟಿಸಲಾಗಿದೆ. ಅಲ್ಲದೆ, ಇದರ ಮೂಲಕ ಭಾರತೀಯ ಸಂಸ್ಕೃತಿಗೆ ವಿರುದ್ಧವಾದ ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಅಲ್ಲದೆ, ಇಂದು ಅಮೆಜಾನ್ ಅನೇಕ ಪ್ರಾಕ್ಸಿ ಘಟಕಗಳನ್ನು ಸ್ಥಾಪಿಸಿದೆ. ಮತ್ತು ತನ್ನ ಪರವಾಗಿರುವ ಪಾಲಿಸಿಗಳಿಗಾಗಿ ಕೋಟಿಗಟ್ಟಲೆ ಲಂಚವನ್ನು ನೀಡಿದ ವರದಿಗಳೂ ಇವೆ" ಎಂದು ಪಾಂಚಜನ್ಯ ಪತ್ರಿಕೆಯಲ್ಲಿ ಆರೋಪಿಸಲಾಗಿದೆ.

    ಫ್ಯೂಚರ್ ಗ್ರೂಪ್ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಮೆಜಾನ್ ಕಾನೂನು ಸಮರದಲ್ಲಿ ಸಿಲುಕಿಕೊಂಡಿದೆ ಮತ್ತು ಭಾರತದ ಸ್ಪರ್ಧಾ ಆಯೋಗದ (ಸಿಸಿಐ) ತನಿಖೆಯನ್ನು ಎದುರಿಸುತ್ತಿದೆ. ಯುಎಸ್ ಇ-ಕಾಮರ್ಸ್ ದೈತ್ಯ ಭಾರತದಲ್ಲಿ ತನ್ನ ಕಾನೂನು ಪ್ರತಿನಿಧಿಗಳು ನೀಡಿದ ಆಪಾದಿತ ಲಂಚದ ಬಗ್ಗೆ ತನಿಖೆ ನಡೆಸುತ್ತಿದೆ ಮತ್ತು 2018-20ರ ಅವಧಿಯಲ್ಲಿ ದೇಶದಲ್ಲಿ ಅಸ್ತಿತ್ವವನ್ನು ಕಾಯ್ದುಕೊಳ್ಳಲು ಇದು ₹ 8,546 ಕೋಟಿ ಅಥವಾ 1.2 ಬಿಲಿಯನ್ ಕಾನೂನು ವೆಚ್ಚಗಳನ್ನು ಖರ್ಚು ಮಾಡಿದೆ ಎಂದು ವರದಿಗಳು ಬಂದಿವೆ.

    ಇದನ್ನೂ ಓದಿ: Crime News| ಮಹಾರಾಷ್ಟ್ರದಲ್ಲಿ ನಿಧಿಗಾಗಿ ಹೆಂಡತಿಯನ್ನೇ ನರಬಲಿ ನೀಡಲು ಮುಂದಾಗಿದ್ದ ಆಸಾಮಿ ಇದೀಗ ಪೊಲೀಸರ ಅತಿಥಿ!

    ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಅಮೆಜಾನ್ ಒಳಗೊಂಡ ಆಪಾದಿತ ಲಂಚ ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ತನಿಖೆಗೆ ಒತ್ತಾಯಿಸಿದೆ. ಈ ಹಿಂದೆ, ಆರ್‌ಎಸ್‌ಎಸ್-ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್, ಅಮೆಜಾನ್‌ನಂತಹ ಇ-ಕಾಮರ್ಸ್ ಮಾರುಕಟ್ಟೆ ವಿರುದ್ಧ ವರ್ತಕರ ಹಿತಾಸಕ್ತಿಗೆ ಹಾನಿಕಾರಕ ಕಾನೂನುಗಳನ್ನು ತಪ್ಪಿಸಿದ್ದಕ್ಕಾಗಿ ಮತ್ತು ಅನೈತಿಕ ವ್ಯಾಪಾರ ಪದ್ಧತಿಗಳಲ್ಲಿ ತೊಡಗಿದ್ದರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿತ್ತು ಎಂಬುದು ಉಲ್ಲೇಖಾರ್ಹ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿ ಯುತವಾಗಿ ನಡೆದುಕೊಳ್ಳಬೇಕು.
    Published by:MAshok Kumar
    First published: