ಮೋಹನ್ ಲಾಲ್​ಗೆ ಬಿಜೆಪಿ ಟಿಕೆಟ್? ಬಿಜೆಪಿಗೆ ಗೊತ್ತಾಗದಂತೆಯೇ ಆರೆಸ್ಸೆಸ್ ಮಾಡುತ್ತಿದೆಯಾ ಮಾಸ್ಟರ್​ಪ್ಲಾನ್?


Updated:September 4, 2018, 7:03 PM IST
ಮೋಹನ್ ಲಾಲ್​ಗೆ ಬಿಜೆಪಿ ಟಿಕೆಟ್? ಬಿಜೆಪಿಗೆ ಗೊತ್ತಾಗದಂತೆಯೇ ಆರೆಸ್ಸೆಸ್ ಮಾಡುತ್ತಿದೆಯಾ ಮಾಸ್ಟರ್​ಪ್ಲಾನ್?

Updated: September 4, 2018, 7:03 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಸೆ. 04): ನಿನ್ನೆ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಗ್ಗೆ ಫೋಟೋ ಸಮೇತ ಟ್ವೀಟ್ ಮಾಡಿದಾಗಿನಿಂದ ಸೋಷಿಯಲ್ ಮೀಡಿಯಾ ಹಾಗೂ ಕೆಲ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೂಪರ್​ಸ್ಟಾರ್ ಮೋಹನ್ ಲಾಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ. ಅವರು ಶಶಿ ತರೂರ್ ಎದುರಾಗಿ ತಿರುವನಂತಪುರಂನಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಇನ್ನಷ್ಟು ಗಟ್ಟಿಯಾಗಿ ಕೇಳಿಬರತೊಡಗಿದೆ. ಆದರೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ಮೋಹನ್ ಲಾಲ್ ಅವರನ್ನ ಬಿಜೆಪಿಗೆ ಕರೆತರುವುದು ಆರೆಸ್ಸೆಸ್​ನ ಮಾಸ್ಟರ್ ಪ್ಲಾನ್ ಆಗಿದೆ. ಕುತೂಹಲದ ವಿಚಾರವೆಂದರೆ ಬಿಜೆಪಿಯ ಕೇರಳ ಘಟಕದ ಯಾವ ಮುಖಂಡರಿಗೂ ಗೊತ್ತಾಗದ ರೀತಿಯಲ್ಲಿ ಮೋಹನ್ ಲಾಲ್ ಅವರೊಂದಿಗೆ ಆರೆಸ್ಸೆಸ್ ಸಂಪರ್ಕ ಸಾಧಿಸುತ್ತಿದೆ ಎನ್ನಲಾಗಿದೆ.

ಮೋಹನ್ ಲಾಲ್ ಅವರಿಗೂ ಆರೆಸ್ಸೆಸ್​ಗೂ ಪರೋಕ್ಷ ನಂಟಂತೂ ಇದೆ. ಹಾಗೆ ನೋಡಿದರೆ ಮೋಹನ್ ಲಾಲ್ ಅವರು ಹೊರಗಿನ ನೋಟಕ್ಕೆ ಆರೆಸ್ಸೆಸ್ ಬೆಂಬಲಿಗರೇನಲ್ಲ. ಆದರೆ, ಅವರು ತಮ್ಮ ತಂದೆ ವಿಶ್ವನಾಥನ್ ನಾಯರ್ ಅವರ ಸ್ಮರಣಾರ್ಥ ಸ್ಥಾಪಿಸಿದ ವಿಶ್ವಶಾಂತಿ ಫೌಂಡೇಶನ್​ ಜೊತೆ ಆರೆಸ್ಸೆಸ್​ನ ಸೇವಾ ಭಾರತಿ ನಿಕಟವಾಗಿ ಕೆಲಸ ಮಾಡುತ್ತಿದೆ. ಕೇರಳದ ಪ್ರವಾಹ ಸ್ಥಿತಿಯಲ್ಲಿ ನಟನ ಫೌಂಡೇಶನ್​ ಜೊತೆ ಸೇವಾಭಾರತಿಯೂ ಕೈಜೋಡಿಸಿದೆ. ವಿಶ್ವಶಾಂತಿ ಫೌಂಡೇಶನ್​ನ ಆಡಳಿತದಲ್ಲಿ ಆರೆಸ್ಸೆಸ್​ನವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಜೊತೆ ಆರೆಸ್ಸೆಸ್ ಸುಲಭ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ.

ದೆಹಲಿಯಲ್ಲಿ ವಿಶ್ವಶಾಂತಿ ಫೌಂಡೇಶನ್ ವತಿಯಿಂದ ಆಯೋಜಿಸಲು ಉದ್ದೇಶಿಸಿರುವ ಗ್ಲೋಬಲ್ ಮಲಯಾಳಿ ರೌಂಡ್ ಟೇಬಲ್ ಸಮ್ಮೇಳನದಲ್ಲಿ ನರೇಂದ್ರ ಮೋದಿ ಅವರಿಗೆ ಆಹ್ವಾನ ಕೊಡಲಾಗಿದೆ. ಇದೇ ವಿಚಾರವಾಗಿ ಮೋಹನ್ ಲಾಲ್ ಅವರು ಪ್ರಧಾನಿಯನ್ನು ಭೇಟಿಯಾಗಿದ್ದು. ಆದರೆ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವರದಿ ಪ್ರಕಾರ, ಈ ಭೇಟಿಯು ಆರೆಸ್ಸೆಸ್​ನ ಮಾಸ್ಟರ್​ಪ್ಲಾನ್​ನಲ್ಲಿ ಒಂದು ಭಾಗವಾಗಿದೆ. ಮೋಹನ್ ಲಾಲ್ ಅವರಿಗೆ ರಾಜಕೀಯ ಎಂಟ್ರಿಗೆ ಒಂದು ದಾರಿ ಕಲ್ಪಿಸುವ ಸಲುವಾಗಿ ಇಂಥ ಅನೇಕ ಕಾರ್ಯಕ್ರಮಗಳನ್ನ ಆರೆಸ್ಸೆಸ್ ಹಮ್ಮಿಕೊಂಡಿದೆ ಎನ್ನಲಾಗಿದೆ.

ಮೋಹನ್ ಲಾಲ್ ಅವರಿಗೆ ತಿರುವನಂತಪುರಂ ಕ್ಷೇತ್ರದಲ್ಲಿ ಟಿಕೆಟ್ ಕೊಡಲು ಕಾರಣವೂ ಇದೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಬಿಜೆಪಿಗೆ ಸಾಕಷ್ಟು ಬೆಂಬಲವಿದೆ. ಕೆ. ರಾಜಶೇಖರನ್ ಅವರು ಇಲ್ಲಿ ಗೆಲುವು ಕಂಡಿರುವುದುಂಟು. ಆದರೆ ರಾಜಶೇಖರನ್ ಅವರನ್ನು ರಾಜ್ಯಪಾಲರನ್ನಾಗಿ ಕಳುಹಿಸಲಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದ ಶ್ರೀಶಾಂತ್​ ಸೋಲಪ್ಪಿದ್ದರು.

ಕೇರಳದಲ್ಲಿ ಚುನಾವಣೆ ಗೆಲ್ಲಲು ಸಿನಿಮಾ ಜನಪ್ರಿಯತೆ ಮಾತ್ರ ಸಾಕಾಗಲ್ಲ ಎಂಬುದು ಆರೆಸ್ಸೆಸ್​ಗೆ ಗೊತ್ತಿದೆ. ಹೀಗಾಗಿಯೇ, ಮೋಹನ್ ಲಾಲ್ ಅವರ ಪಬ್ಲಿಕ್ ಇಮೇಜನ್ನ ಸರಿ ಮಾಡುವ ನಿಟ್ಟಿನಲ್ಲಿ ಆರೆಸ್ಸೆಸ್ ಪ್ರಯತ್ನ ಮಾಡುತ್ತಿದೆ. ಲೋಕಸಭೆ ಚುನಾವಣೆಯಷ್ಟರಲ್ಲಿ ಮೋಹನ್ ಲಾಲ್ ಅವರ ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಆದರೆ, ಮೋಹನ್ ಲಾಲ್ ಅವರಾಗಲೀ ಅವರ ಆಪ್ತರಾಗಲೀ ಯಾವತ್ತೂ ಕೂಡ ಬಿಜೆಪಿಗೆ ಸೇರುತ್ತಿರುವ ಅಥವಾ ತಿರುವನಂತಪುರಂನಲ್ಲಿ ಸ್ಪರ್ಧಿಸುವ ಸುದ್ದಿಯನ್ನು ಒಪ್ಪಿಕೊಂಡಿಲ್ಲ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ