ನವದೆಹಲಿ: ಗೋಮಾಂಸ ತಿನ್ನುವವರು (Beef Eaters) ಕೂಡ ಹಿಂದೂ ಧರ್ಮಕ್ಕೆ (Hindu Dharma) ಮರು ಮತಾಂತರಗೊಳ್ಳಬಹುದು, ಅದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಹೇಳಿದ್ದಾರೆ. ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಿಂದೂ’ ಎಂಬ ಪದವು ಈಗಾಗಲೇ ನಮ್ಮ ಸಂವಿಧಾನ ಮತ್ತು ದೇಶವನ್ನು ಪ್ರವೇಶಿಸಿದೆ. ಇದು ಇತಿಹಾಸದ ಸತ್ಯ, ಹಿಂದೂ ಎಂಬುವುದು ಒಂದು ಗುರುತು ಮತ್ತು ಜನರು ಸೇರಿರುವ ಸಂಸ್ಕೃತಿ ಎಂದು ಅವರು ಹೇಳಿದ್ದಾರೆ.
‘ಸಂಘ’ವನ್ನು ಅರ್ಥ ಮಾಡಿಕೊಳ್ಳಲು ಒಬ್ಬರು ತಮ್ಮ ಮನಸ್ಸನ್ನು ಮಾತ್ರ ತೆರೆದುಕೊಳ್ಳುವುದಲ್ಲದೇ, ಹೃದಯವನ್ನೂ ತೆರೆದುಕೊಳ್ಳಬೇಕು ಎಂದ ದತ್ತಾತ್ರೇಯ ಹೊಸಬಾಳೆ ಅವರು, ಎಂಎಸ್ ಗೋಳ್ವಾಲ್ಕರ್ ಅವರು ಹಿಂದೂ ಸಂಸ್ಕೃತಿಯ ಕುರಿತು ನಿಖರವಾದ ವ್ಯಾಖ್ಯಾನವನ್ನು ಪಡೆಯದಿದ್ದರೂ, ವೀರ್ ಸಾವರ್ಕರ್ ಅವರು ತಮ್ಮ ಬರಹಗಳಲ್ಲಿ ಸಿಂಧೂ ನದಿಯವರೆಗಿನ ಭೂಮಿಯನ್ನು ತಮ್ಮ ಭೂಮಿ ಎಂದು ಪರಿಗಣಿಸುವವರು ಹಿಂದೂಗಳು ಎಂದು ಹೇಳಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ: Rahul Gandhi: ‘ನಾನು ವರುಣ್ ಗಾಂಧಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳಬಲ್ಲೆ, ಆದರೆ..’ ಸೋದರನ ಬಗ್ಗೆ ರಾಹುಲ್ ಹೇಳಿದ್ದೇನು?
ಎಂಎಸ್ ಗೋಳ್ವಾಲ್ಕರ್ ಅವರ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದ ಹೊಸಬಾಳೆ, ಗೋಲ್ವಾಲ್ಕರ್ ಅವರು ಇತರ ಧರ್ಮಗಳಿಗೆ ಮತಾಂತರಗೊಂಡವರನ್ನು ಮತ್ತೆ ಹಿಂದೂ ಧರ್ಮಕ್ಕೆ ಪರಿವರ್ತಿಸಬಹುದು ಎಂದು ಹೇಳಿದ್ದಾರೆ. ಕೆಲವೊಮ್ಮೆ ಮತಾಂತರಗೊಂಡವರು ತಿನ್ನಲೇಬೇಕಾದ ಅನಿವಾರ್ಯತೆ ಅಥವಾ ಒತ್ತಡಕ್ಕೆ ಸಿಲುಕಿ ಗೋಮಾಂಸ ತಿನ್ನುವ ಸಾಧ್ಯತೆ ಇರುತ್ತದೆ. ಹಾಗಂತ ನಾವು ಅವರಿಗೆ ನಮ್ಮ ಬಾಗಿಲು ಮುಚ್ಚಲು ಸಾಧ್ಯವಿಲ್ಲ. ಮತಾಂತರಗೊಂಡವರನ್ನು ಪುನಃ ಹಿಂದೂ ಧರ್ಮಕ್ಕೆ ಮರಳಿ ತರಬಹುದು ಎಂದು ಹೇಳಿದರು.
ಸಂಘ ಎಂದರೇನು?
ಒಂದು ಸಲ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಜೊತೆ ಸಂಘ (ಆರೆಸ್ಸೆಸ್) ಎಂದರೇನು? ಎಂದು ಕೇಳಿದ್ದೆ. ಆಗ ಅವರು, ಸಂಘ ಎಂದರೇನು ಎಂಬುದು ಸಂಘದ ಸಂಸ್ಥಾಪಕರಿಗೆ ಮಾತ್ರ ಗೊತ್ತಿದೆ. ನಾವೆಲ್ಲರೂ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಸಂಘವನ್ನು ಅರ್ಥಮಾಡಿಕೊಳ್ಳಲು ಒಬ್ಬರಿಗೆ ಹೃದಯ ಬೇಕು ಮತ್ತು ಮೆದುಳಲ್ಲ ಎಂದು ಹೇಳಿದ್ದರು. ಹೀಗಾಗಿ ಸಂಘವು ಇಡೀ ಹಿಂದೂ ಸಮಾಜವನ್ನು ತನ್ನ ಕುಟುಂಬ ಎಂದು ಪರಿಗಣಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: Hindu: ಹಿಂದೂವಾಗಲು ಧರ್ಮ ಬದಲಾಯಿಸಬೇಕೆಂದಿಲ್ಲ, ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ: ಮೋಹನ್ ಭಾಗವತ್
'ರಾಷ್ಟ್ರೀಯ ಏಕತೆಗೆ ಕೆಲಸ ಮಾಡಬೇಕು'
ಇನ್ನು, ಹಿಂದೂ ಸಮಾಜದ ಎಲ್ಲ ಸದಸ್ಯರು ಸಂಘದ ಕುಟುಂಬದ ಭಾಗವಾಗಿದ್ದಾರೆ ಎಂದ ದತ್ತಾತ್ರೇಯ ಹೊಸಬಾಳೆ, ಆದ್ದರಿಂದ ನಮ್ಮ ಜನರಲ್ಲಿ ಬದಲಾವಣೆಗಳನ್ನು ತರುವುದು ಮತ್ತು ಅವರಲ್ಲಿ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಭಾವನೆಗಳನ್ನು ಬೆಳೆಸುವುದು ನಮ್ಮ ಕರ್ತವ್ಯ. ಆಗ ಮಾತ್ರ ನಾವು ಸಮಾಜವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಸಂಘವು ಸಮಾಜವನ್ನು ಒಗ್ಗೂಡಿಸುವ ಮತ್ತು ಶಕ್ತಿಯುತವಾಗಿಸುವ ಗುರಿಯನ್ನು ಹೊಂದಿದೆ. ಇದಕ್ಕಾಗಿ ನಾವು ರಾಷ್ಟ್ರೀಯ ಏಕತೆಗಾಗಿ ಕೆಲಸ ಮಾಡಬೇಕು, ಗೋಸಂರಕ್ಷಣೆಯನ್ನು ಸಬಲೀಕರಣಗೊಳಿಸಬೇಕು ಮತ್ತು ಧಾರ್ಮಿಕ ಮತಾಂತರದ ವಿರುದ್ಧ ಹೋರಾಡಬೇಕು ಎಂದು ಅವರು ಹೇಳಿದರು.
'ಆರೆಸ್ಸೆಸ್ ಬಲವೂ ಅಲ್ಲ, ಎಡವೂ ಅಲ್ಲ'
ಇಂದು ಸಂಘವು ತನ್ನ ಪ್ರಮುಖ ಹಂತಕ್ಕೆ ತಲುಪಿದೆ. ಯಾಕೆಂದರೆ ದೇಶದ ಜನರು ಸಂಘದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಿದ್ದಾರೆ ಎಂದ ಹೊಸಬಾಳೆ, ಆರೆಸ್ಸೆಸ್ ಯಾವುದೇ ರಾಜಕೀಯ ಒಲವು ತೋರಿಸದೆ ರಾಷ್ಟ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತದೆ. ಈ ಸಂಘಟನೆ ಬಲಪಂಥೀಯವೂ ಅಲ್ಲ, ಎಡಪಂಥೀಯವೂ ಅಲ್ಲ. ಇದು ದೇಶದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಪಾತ್ರವನ್ನು ವಹಿಸಿದ್ದು, ಭಾರತದ ಎಲ್ಲಾ ಧರ್ಮಗಳು ಮತ್ತು ಪಂಗಡಗಳನ್ನು ಒಂದಾಗಿ ಪರಿಗಣಿಸುತ್ತದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ