ಅಲ್ಪ ಸಂಖ್ಯಾತರ ವಿರುದ್ಧದ ಸಾಮೂಹಿಕ ಹಲ್ಲೆಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು; ಮೋಹನ್ ಭಾಗವತ್​ ಒತ್ತಾಯ

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಡೆಯನ್ನು ಆರ್​ಎಸ್​ಎಸ್ ಪ್ರಧಾನ ಸಂಚಾಲಕ ಮೋಹನ್ ಭಾಗವತ್​ ಶ್ಲಾಘಿಸಿದ್ದಾರೆ.

MAshok Kumar | news18-kannada
Updated:October 8, 2019, 12:21 PM IST
ಅಲ್ಪ ಸಂಖ್ಯಾತರ ವಿರುದ್ಧದ ಸಾಮೂಹಿಕ ಹಲ್ಲೆಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು; ಮೋಹನ್ ಭಾಗವತ್​ ಒತ್ತಾಯ
ಮೋಹನ್ ಭಾಗವತ್
  • Share this:
ನಾಗಪುರ (ಅಕ್ಟೋಬರ್ 08): ಅಲ್ಪಸಂಖ್ಯಾತರ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹಿಂಸಾಚಾರ ಹಾಗೂ ಸಾಮೂಹಿಕ ಹಲ್ಲೆಗಳಂತಹ ಪ್ರಕರಣಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು ಎಂದು ಆರ್​ಎಸ್​ಎಸ್​ ಪ್ರಧಾನ ಸರಸಂಚಾಲಕ ಮೋಹನ್ ಭಾಗವತ್ ಒತ್ತಾಯಿಸಿದ್ದಾರೆ.

ಇಂದು ನಾಗಪುರದ ಆರ್​​ಎಸ್​ಎಸ್​ ಕೇಂದ್ರ ಕಚೇರಿಯಲ್ಲಿ ತಮ್ಮ ವಾರ್ಷಿಕ ವಿಜಯದಶಮಿ ಭಾಷಣದಲ್ಲಿ ಈ ಕುರಿತು ಮಾತನಾಡಿದ ಅವರು, "ಪ್ರಸ್ತುತ ದೇಶದಲ್ಲಿ ಹಲವಾರು ಕಡೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳುಗೆಡಹುವ ಕೆಲಸ ನಡೆಯುತ್ತಿದೆ. ಅಲ್ಪ ಸಂಖ್ಯಾತರ ವಿರುದ್ಧ ಸಾಮೂಹಿಕ ಹಲ್ಲೆಗಳನ್ನು ನಡೆಸಲಾಗುತ್ತಿದೆ. ಇಂತಹ ಪಟ್ಟಭದ್ರ ಹಿತಾಸಕ್ತಿಗಳನ್ನು ಪ್ರೋತ್ಸಾಹಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಅಮಾನವೀಯ ಸಾಮೂಹಿಕ ಹಲ್ಲೆಗಳಿಗೆ ಕೇಂದ್ರ ಸರ್ಕಾರ ಕಡಿವಾಣ ಹಾಕಬೇಕು" ಎಂದು ಅವರು ಆಗ್ರಹಿಸಿದ್ದಾರೆ.

ಸಮಾಜದಲ್ಲಿನ ಅಶಾಂತಿಯ ಬಗ್ಗೆ ಗಮನ ಸೆಳೆದ ಭಾಗವತ್​, "ಪ್ರಸ್ತುತ ದಿನಗಳಲ್ಲಿ ಭಾಷೆ ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಬೆಳೆಸುವ ಪ್ರಯತ್ನ ನಡೆಸಲಾಗುತ್ತಿದೆ. ಸಮಾಜದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿ ಸಮುದಾಯಗಳ ನಡುವೆ ಬಿರುಕು ಮೂಡಿಸುವ ಕೆಲಸ ನಡೆಯುತ್ತಿದೆ. ಅಲ್ಲದೆ, ಇದೆಲ್ಲದಕ್ಕೂ ಆರ್​​ಎಸ್​ಎಸ್​ ಕಾರಣ ಎಂದು ಬಿಂಬಿಸಲಾಗುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗುತ್ತಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಡೆಯನ್ನು ಶ್ಲಾಘಿಸಿದ  ಮೋಹನ್ ಭಾಗವತ್, “ಜನರ ಭಾವನೆಗಳನ್ನು ಗೌರವಿಸಿದ್ದಕ್ಕಾಗಿ ಈ ಸರ್ಕಾರ ಪ್ರಶಂಸೆಗೆ ಅರ್ಹವಾಗಿದೆ. ಕಾಶ್ಮೀರದ 370 ನೇ ವಿಧಿಯನ್ನು ತೆಗೆದುಹಾಕುವ ವಿಚಾರ ಆರಂಭದಿಂದಲೇ ಆಡಳಿತ ಪಕ್ಷದ ಚಿಂತನೆಯಲ್ಲಿತ್ತು.

ಆದರೆ ಈ ಬಾರಿ, ಉಭಯ ಸದನಗಳಲ್ಲಿ ಇತರ ಪಕ್ಷಗಳ ಬೆಂಬಲವನ್ನು ಕೌಶಲ್ಯದಿಂದ ಪಡೆದುಕೊಳ್ಳುವ ಮೂಲಕ ಬಿಜೆಪಿ ಸಾರ್ವಜನಿಕ ಮನೋಭಾವಕ್ಕೆ ಅನುಗುಣವಾಗಿ ಬಲವಾದ ತರ್ಕ ಮತ್ತು ಮನವಿಯೊಂದಿಗೆ ಈ ಕಾರ್ಯವನ್ನು ಸಾಧಿಸಿದೆ. ಪ್ರಧಾನಿ ಮತ್ತು ಗೃಹ ಸಚಿವರು ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಮತ್ತು ಸಂಸತ್ತಿನಲ್ಲಿ ಸಾರ್ವಜನಿಕ ಭಾವನೆಗಳನ್ನು ಎತ್ತಿಹಿಡಿದ ಇತರ ರಾಜಕೀಯ ಪಕ್ಷಗಳು ಈ ಸಾಧನೆಗೆ ಅಭಿನಂದನಾರ್ಹರು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಯಾವುದೇ ದೇಶ ಎರಡು ಸಂವಿಧಾನ, ಇಬ್ಬರು ನಾಯಕರು ಮತ್ತು ಎರಡು ಪ್ರತ್ಯೇಕ ನಿಯಮಗಳನ್ನು ಹೊಂದಲು ಸಾಧ್ಯವಿಲ್ಲ ಎಂಬುದು ಜನ ಸಂಘದ ಆಂದೋಲನದ ಭಾಗ. ಇದೇ ಕಾರಣಕ್ಕೆ ಇಡೀ ದೇಶ ದಶಕಗಳಿಂದ 370 ನೇ ವಿಧಿಯನ್ನು ರದ್ದುಗೊಳಿಸಬೇಕೆಂದು ಬಯಸಿತ್ತು. ಈ ಹೊಸ ಸರ್ಕಾರದ ಮೊದಲ ದೊಡ್ಡ ನಿರ್ಧಾರವೆಂದರೆ ದೇಶದ ಎಲ್ಲಾ ಭಾಗಗಳಲ್ಲಿ ಅಭಿವೃದ್ಧಿ ಮತ್ತು ಸಮೃದ್ಧಿಯನ್ನು ತುಂಬುವುದು ಮತ್ತು ಜಮ್ಮು ಕಾಶ್ಮೀರವನ್ನೂ ಸಹ ಇದರ ಭಾಗವನ್ನಾಗಿಸುವುದಾಗಿದೆ” ಎಂದು ಅವರು ಅಭಿನಂದಿಸಿದ್ದಾರೆ.

ಆರ್​​ಎಸ್​ಎಸ್​ ಹಿಂದೂ ಪ್ರತಿಪಾದನಾ ಸಂಸ್ಥೆಯನ್ನು 1925ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಆರ್​​ಎಸ್​ಎಸ್​ ಪ್ರಧಾನ ಸಂಚಾಲಕರು ನಾಗಪುರದ ಕೇಂದ್ರ ಕಚೇರಿಯಲ್ಲಿ ವಿಜಯ ದಶಮಿ ದಿನದಂದು ವಿಶೇಷ ಭಾಷಣ ಮಾಡುವುದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.ಇದನ್ನೂ ಓದಿ : ಭಾರತೀಯ ವಾಯು ಸೇನೆಗೆ 87 ವರ್ಷ; ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ ಸೈನಿಕರು, ವಿಂಗ್ ಕಮಾಂಡರ್ ಅಭಿನಂದನ್ ಭಾಗಿ

First published: October 8, 2019, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading