ನವದೆಹಲಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಯೆಸ್ ಬ್ಯಾಂಕ್ ಗ್ರಾಹಕರಿಗೆ ಹಣ ಪಡೆಯಲು ನಿಗದಿಪಡಿಸಿದ್ದ 50 ಸಾವಿರ ರೂಪಾಯಿ ಮಿತಿಯನ್ನು ವಾರಾಂತ್ಯದಲ್ಲಿ ತೆಗೆಯಲಾಗುವುದು ಎಂದು ಬ್ಯಾಂಕ್ನ ಆಡಳಿತಾಧಿಕಾರಿ ಸಿಎನ್ಬಿಸಿ-ಟಿವಿ 18ಗೆ ಸೋಮವಾರ ತಿಳಿಸಿದ್ದಾರೆ.
ಗ್ರಾಹಕರು ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ, ನಿಮ್ಮ ಹಣ ಭದ್ರವಾಗಿದೆ. ಹಣ ತೆಗೆಯಲು ಹಾಕಿರುವ ಮಿತಿಯನ್ನು ಸಹ ಶೀಘ್ರದಲ್ಲಿ ಹಿಂಪಡೆಯಲಾಗುವುದು ಎಂದು ಯೆಸ್ ಬ್ಯಾಂಕ್ ಆಡಳಿತಾಧಿಕಾರಿಯಾಗಿ ಆರ್ಬಿಐನಿಂದ ನೇಮಿಸಲ್ಪಟ್ಟಿರುವ ಪ್ರಶಾಂತ್ ಕುಮಾರ್ ಭರವಸೆ ನೀಡಿದ್ದಾರೆ.
ಗ್ರಾಹಕರೇ ನಮ್ಮ ಮೊದಲ ಆದ್ಯತೆ. ಬೇರೆ ಬ್ಯಾಂಕ್ ಎಟಿಎಂಗಳನ್ನು ಯೆಸ್ ಬ್ಯಾಂಕ್ ಗ್ರಾಹಕರು ಶನಿವಾರದಿಂದಲೇ ಬಳಸಲು ಅನುವು ಮಾಡಲಾಗಿದೆ. ಎಲ್ಲಾ ರೀತಿಯ ಬ್ಯಾಂಕ್ ಸೇವೆಗಳನ್ನು ಶೀಘ್ರದಲ್ಲಿ ಗ್ರಾಹಕರಿಗೆ ಒದಗಿಸಬೇಕು ಎಂಬುದು ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
ಗುರುವಾರ ರಿಸರ್ವ್ ಬ್ಯಾಂಕ್ ಯೆಸ್ ಬ್ಯಾಂಕ್ನ ವಹಿವಾಟಿನ ಮೇಲೆ ನಿರ್ಬಂಧ ಹೇರಿ, ಬ್ಯಾಂಕ್ನ ಆಡಳಿತ ಮಂಡಳಿಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿತ್ತು. ಗ್ರಾಹಕರಿಗೆ ಒಂದು ತಿಂಗಳಿಗೆ ಕೇವಲ 50 ಸಾವಿರ ಹಣವನ್ನು ತಮ್ಮ ಖಾತೆಯಿಂದ ತೆಗೆಯಲು ಅವಕಾಶ ನೀಡಿತ್ತು.
ಸದ್ಯ ಬ್ಯಾಂಕ್ ಗ್ರಾಹಕರಿಗೆ ಯಾವುದೇ ಹೊಸ ಸಾಲ ಕೊಡಲು ಸಾಧ್ಯವಿಲ್ಲ ಮತ್ತು ಹಳೆಯ ಸಾಲ ನವೀಕರಿಸಲು ಸಹ ಆಗುವುದಿಲ್ಲ. ಅದಲ್ಲದೇ ಯಾವುದೇ ಹೊಸ ಹೂಡಿಕೆಯನ್ನು ಬ್ಯಾಂಕ್ ಮಾಡುವಂತಿಲ್ಲ ಎಂದು ಆರ್ಬಿಐ ಹೇಳಿದೆ. ಜೊತೆಗೆ ಯೆಸ್ ಬ್ಯಾಂಕ್ನ ಆಡಳಿತವನ್ನು ಎಸ್ಬಿಐ ಮಾಜಿ ಮುಖ್ಯ ಆರ್ಥಿಕ ಅಧಿಕಾರಿ ಪ್ರಶಾಂತ್ ಕುಮಾರ್ ಅವರು ನೋಡಿಕೊಳ್ಳಲಿದ್ದಾರೆ.
ಇದನ್ನು ಓದಿ: ಯೆಸ್ ಬ್ಯಾಂಕ್ ಸಂಸ್ಥಾಪಕರಿಗೆ DHFLನಿಂದ 600 ಕೋಟಿ ಲಂಚ: ಸಿಬಿಐ ಆರೋಪ; ಮುಂಬೈನ 7 ಕಡೆ ದಾಳಿ
ಯೆಸ್ ಬ್ಯಾಂಕ್ ಪುನಶ್ಚೇತನಗೊಳಿಸಲು ಆರ್ಬಿಐ ಯೋಜನೆ ರೂಪಿಸಿದೆ. ಸದ್ಯ ಹಣದ ನೆರವಿನ ಅಗತ್ಯವಿದ್ದು , ಯೆಸ್ ಬ್ಯಾಂಕ್ನ ಶೇ.49 ಷೇರುಗಳನ್ನು ಎಸ್ಬಿಐ ಖರೀದಿಸಿದೆ. ಹೀಗಾಗಿ ಸ್ವಲ್ಪಮಟ್ಟಿಗೆ ಬ್ಯಾಂಕ್ ಚೇತರಿಸಿಕೊಂಡಿದೆ. ಇದೇ ಹಣವನ್ನು ಹೂಡಿಕೆದಾರರಿಗೆ ನೀಡಲು ಬ್ಯಾಂಕ್ ನಿರ್ಧರಿಸಿದೆ. ಹಾಗಾಗಿ ಯಾವುದೇ ತೊಂದರೆಗಳು ಇಲ್ಲ ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಎಸ್ಬಿಐನೊಂದಿಗೆ ವಿಲೀನಗೊಳ್ಳುವ ವಿಚಾರವನ್ನು ಅಲ್ಲಗಳೆದಿರುವ ಪ್ರಶಾಂತ್ ಕುಮಾರ್ ಯೆಸ್ ಬ್ಯಾಂಕ್ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಿದರು.
ವರದಿ: ಸಂಧ್ಯಾ ಎಸ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ