ನೂತನ ಸಿಎಂ ಸ್ಟಾಲಿನ್ ಸ್ಟೈಲ್: 2,000 ರೂ. ಕೋವಿಡ್ ನೆರವು, ಹಾಲಿನ ದರ ಕಡಿತ, ಮಹಿಳೆಯರಿಗೆ ಬಂಪರ್!

ತಮಿಳುನಾಡು ನೂತನ ಸಿಎಂ ಎಂ.ಕೆ.ಸ್ಟಾಲಿನ್​

ತಮಿಳುನಾಡು ನೂತನ ಸಿಎಂ ಎಂ.ಕೆ.ಸ್ಟಾಲಿನ್​

ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಮತಗಳನ್ನು ಸೆಳೆಯಲು ಘೋಷಿಸಿದ್ದ ಯೋಜನೆಯನ್ನೂ ತಕ್ಷಣಕ್ಕೆ ಜಾರಿಗೆ ತಂದಿದ್ದಾರೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸರ್ಕಾರಿ ಬಸ್​ ಪ್ರಯಾಣ ದರದಲ್ಲಿ ವಿನಾಯ್ತಿ ನೀಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಕರ್ತವ್ಯನಿರತ ಮಹಿಳೆಯರ ಬಸ್​ ಪ್ರಯಾಣದ ಹೊರೆ ತಗ್ಗಲಿದೆ.

ಮುಂದೆ ಓದಿ ...
  • Share this:

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನವೇ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್​ ಭರ್ಜರಿ ಘೋಷಣೆ ಹೊರಡಿಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿನ ಆಶ್ವಾಸನೆಯನ್ನು ಸಿಎಂ ಆದ ಮೊದಲ ದಿನವೇ ಸ್ಟಾಲಿನ್​​ ಜಾರಿಗೆ ತಂದಿದ್ದಾರೆ. ಕೋವಿಡ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳಿಗೆ 2,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಹಾಲಿನ ದರವನ್ನು ಕಡಿತಗೊಳಿಸಿದ್ದು, ಕೆಲಸ ಮಾಡುವ ಮಹಿಳೆಯರಿಗೆ ಬಸ್​ ದರದಲ್ಲಿ ವಿನಾಯ್ತಿ ನೀಡಿದ್ದಾರೆ. ಚುನಾವಣೆ ವೇಳೆ ಕೊಟ್ಟ ಆಶ್ವಾಸನೆಗಳಲ್ಲಿ ಐದು ಪ್ರಮುಖ ಆಶ್ವಾಸನೆಯನ್ನು ಜಾರಿಗೆ ತಂದಿದ್ದಾರೆ.


ಕೊರೋನಾ ಸಂಕಷ್ಟಕ್ಕೆ ಸಿಲುಕಿರುವ 10 ಸಾವಿರ ಬಿಪಿಎಲ್​ ಕಾರ್ಡುದಾರರ ಕುಟುಂಬಕ್ಕೆ ತಲಾ 4 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಮೊದಲ ಕಂತಾಗಿ ಈ ತಿಂಗಳೇ 2 ಸಾವಿರ ರೂಪಾಯಿಗಳನ್ನು ಕುಟುಂಬಗಳಿಗೆ ರಿಲೀಸ್​ ಮಾಡಲಿದ್ದಾರೆ. ಇನ್ನು ಆರೋಗ್ಯ ಯೋಜನೆಯನ್ನು ವಿಸ್ತರಿಸಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್​ ಚಿಕಿತ್ಸೆ ಪಡೆದರೂ ಅನುಕೂಲವಾಗುವಂತೆ ಮಾಡಿದ್ದಾರೆ.  ಇದರಿಂದ ಖಾಸಗಿ ಆಸ್ಪತ್ರೆಗಳಲ್ಲೂ ಸರ್ಕಾರದ ಯೋಜನೆಯಡಿ ಕೋವಿಡ್​ ಚಿಕಿತ್ಸೆಯನ್ನು ಪಡೆಯಬಹುದಾಗಿದೆ.


ಚುನಾವಣಾ ಪ್ರಚಾರದ ವೇಳೆ ಮಹಿಳೆಯರ ಮತಗಳನ್ನು ಸೆಳೆಯಲು ಘೋಷಿಸಿದ್ದ ಯೋಜನೆಯನ್ನೂ ತಕ್ಷಣಕ್ಕೆ ಜಾರಿಗೆ ತಂದಿದ್ದಾರೆ. ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಸರ್ಕಾರಿ ಬಸ್​ ಪ್ರಯಾಣ ದರದಲ್ಲಿ ವಿನಾಯ್ತಿ ನೀಡಿದ್ದಾರೆ. ಇದರಿಂದ ಮಧ್ಯಮ ವರ್ಗದ ಕರ್ತವ್ಯನಿರತ ಮಹಿಳೆಯರ ಬಸ್​ ಪ್ರಯಾಣದ ಹೊರೆ ತಗ್ಗಲಿದೆ. ಇದರ ಜೊತೆಗೆ ಸರ್ಕಾರ ಸ್ವಾಮ್ಯದ ಆವಿನ್​​ ಹಾಲಿನ ದರದಲ್ಲಿ 3 ರೂಪಾಯಿ ಕಡಿತಗೊಳಿಸಿದ್ದು, ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಹಾಲು ದೊರೆಯಲಿದೆ. ಮೇ 16ರಿಂದ ನೂತನ ದರ ಅನ್ವಯವಾಗಲಿದೆ.



ಇನ್ನು ಇಂದು ಬೆಳಗ್ಗೆ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಡಿಎಂಕೆ ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕರಿಸಿದರು. ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಜಯಭೇರಿ ಬಾರಿಸಿದ್ದು, ಇದೇ ಮೊದಲ ಬಾರಿಗೆ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಚೆನ್ನೈನ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ.ಕೆ. ಸ್ಟಾಲಿನ್ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಪ್ರಮಾಣವಚನ ಬೋಧಿಸಿದ್ದಾರೆ. ಸಿಎಂ ಎಂ.ಕೆ. ಸ್ಟಾಲಿನ್ ಅವರೊಂದಿಗೆ ಕೆಲವು ಸಚಿವರು ಕೂಡ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.


ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷ 234 ಕ್ಷೇತ್ರಗಳ ಪೈಕಿ 133 ಸ್ಥಾನಗಳನ್ನು ಪಡೆಯುವ ಮೂಲಕ ತಮಿಳುನಾಡಿನ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಡಿಎಂಕೆ ಮೈತ್ರಿಕೂಟ 159 ಸ್ಥಾನಗಳನ್ನು ಪಡೆದು, ಸರ್ಕಾರ ರಚನೆ ಮಾಡಿದೆ. ಬಿಜೆಪಿ, ಪಿಎಂಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಎಐಡಿಎಂಕೆ ಕೇವಲ 66 ಸ್ಥಾನಗಳನ್ನು ಪಡೆದು ಹೀನಾಯ ಸೋಲನ್ನು ಅನುಭವಿಸಿದೆ. ತಮಿಳುನಾಡಿನ ಖ್ಯಾತ ರಾಜಕಾರಣಿ ಹಾಗೂ ಮಾಜಿ ಸಿಎಂ ದಿ. ಕರುಣಾನಿಧಿ ಅವರ ಮಗನಾಗಿರುವ ಎಂ.ಕೆ. ಸ್ಟಾಲಿನ್ ಇದೇ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಅವರು ವಿರೋಧ ಪಕ್ಷದ ನಾಯಕರಾಗಿದ್ದರು.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು