ಕೋಲ್ಕತಾ (ಡಿಸೆಂಬರ್ 18): ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಭಾರಿ ಹೇಗಾದರೂ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ನಿರ್ಧರಿಸಿರುವ ಬಿಜೆಪಿ ಈಗಾಗಲೇ "ಮಿಷನ್ ಬಂಗಾಳ" ಆರಂಭಿಸಿದೆ. ಇದರ ಭಾಗವಾಗಿ ತೃಣಮೂಲ ಕಾಂಗ್ರೆಸ್ ತೊರೆದಿರುವ ಹಿರಿಯ ನಾಯಕ ಸುವೆಂಧು ಅಧಿಕಾರಿ ಗುರುವಾರ ತಮ್ಮ ಮಾತೃಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಅಮಿತ್ ಶಾ ಶನಿವಾರ ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ, ಎರಡು ದಿನದ ಪ್ರವಾಸಕ್ಕಾಗಿ ಬಂಗಾಳಕ್ಕೆ ಬರುವ ಅಮಿತ್ ಶಾ ಬಂಗಾಳದ ಬಿರ್ಭಮ್ನಲ್ಲಿ ರೋಡ್ ಶೋ ಮತ್ತು ಮಿಡ್ನಾಪುರದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಲಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ಮಾಹಿತಿ ನೀಡಿವೆ.
1921 ರಲ್ಲಿ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಟ್ಯಾಗೋರ್ ಅವರು ಸ್ಥಾಪಿಸಿದ ವಿಶ್ವ ಭಾರತಿ ವಿಶ್ವವಿದ್ಯಾಲಯಕ್ಕೆ ಅಮಿತ್ ಶಾ ಭಾನುವಾರ ಭೇಟಿ ನೀಡಲಿದ್ದು, ಅದಾದ ಕೆಲವೇ ಗಂಟೆಗಳಲ್ಲಿ ಬಿರ್ಭಮ್ನಲ್ಲಿರುವ ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಭೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು ಎಂದು ನಿರ್ಧರಿಸಿರುವ ಅಮಿತ್ ಶಾ ಈಗಾಗಲೇ ಹಲವು ಬಾರಿ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಅಲ್ಲದೆ, 294 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಂಗಾಳದಲ್ಲಿ ಕನಿಷ್ಟ 200 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು ಎಂಬ ಕಠಿಣ ಗುರಿಯನ್ನು ಅಲ್ಲಿನ ಕಾರ್ಯಕರ್ತರಿಗೆ ನೀಡಿದ್ದಾರೆ.
ಇದನ್ನೂ ಓದಿ: Farmers Protest: 23ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: ದೆಹಲಿ ಗಡಿಯಲ್ಲಿ ಮುಂದುವರೆದ ರೈತರ ಹೋರಾಟ
ಹೀಗಾಗಿ ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರದ ಪ್ರಭಾವಿ ನಾಯಕರು ಮತ್ತು ಕ್ಯಾಬಿನೆಟ್ ದರ್ಜೆಯ ಸಚಿವರು ಬಂಗಾಳಕ್ಕೆ ಆಗಮಿಸಿ ರೋಡ್ ಶೋ ಸೇರಿದಂತೆ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಪಟ್ಟಿಯಲ್ಲಿ ಕೇಂದ್ರ ಸಚಿವ ಗಜೇಂದ್ರ ಶೇಖಾವತ್, ಉತ್ತರಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ನರೋತ್ತಮ್ ಮಿಶ್ರಾ, ಸಂಜೀವ್ ಬಲ್ಯಾನ್, ಪ್ರಹ್ಲಾದ್ ಪಟೇಲ್, ಅರ್ಜುನ್ ಮುಂಡಾ, ಮತ್ತು ಮನ್ಸುಖ್ ಮಂಡವಿಯಾ ಸೇರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ