HOME » NEWS » National-international » RISHI SUNAK FROM RISING TORY STAR TO BRITAINS CHANCELLOR OF THE EXCHEQUER IN JUST 5 YEARS SNVS

ಭಗವದ್ಗೀತೆ ಪ್ರಮಾಣದಿಂದ ಬ್ರಿಟನ್ ಹಣಕಾಸು ಸಚಿವನಾಗುವವರೆಗೆ: ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಸಾಧನೆಯ ಕ್ಷಿಪ್ರ ಹಾದಿ

2017ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಸಂಸದರಾಗಿದ್ದ ವೇಳೆ ರಿಷಿ ಸುನಾಕ್ ಅವರು ಭಗವದ್ಗೀತೆ ಹೆಸರಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದ್ದರು. 2015ರಲ್ಲಿ ಮೊದಲ ಬಾರಿ ಸಂಸದರಾದ ಅವರು 5 ವರ್ಷಗಳಲ್ಲಿ ಮಿಂಚಿನ ವೇಗದಲ್ಲಿ ಬೆಳವಣಿಗೆ ಕಂಡಿದ್ಧಾರೆ.

Vijayasarthy SN | news18
Updated:February 13, 2020, 7:09 PM IST
ಭಗವದ್ಗೀತೆ ಪ್ರಮಾಣದಿಂದ ಬ್ರಿಟನ್ ಹಣಕಾಸು ಸಚಿವನಾಗುವವರೆಗೆ: ನಾರಾಯಣಮೂರ್ತಿ ಅಳಿಯ ರಿಷಿ ಸುನಾಕ್ ಸಾಧನೆಯ ಕ್ಷಿಪ್ರ ಹಾದಿ
ರಿಷಿ ಸುನಾಕ್
  • News18
  • Last Updated: February 13, 2020, 7:09 PM IST
  • Share this:
ಇನ್​ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಅವರು ಬ್ರಿಟನ್ ದೇಶದ ಹಣಕಾಸು ಸಚಿವರಾಗಿ ನೇಮಕವಾಗಿದ್ದಾರೆ. ಪಂಜಾಬ್ ಮೂಲದ ರಿಷಿ ಸುನಾಕ್ ಈ ಎತ್ತರಕ್ಕೆ ಬೆಳೆದಿರುವುದು ಭಾರತೀಯರಿಗೆ ಅಚ್ಚರಿ ಮೂಡಿಸಿರಬಹುದು. ಆದರೆ, ಅವರ ವೃತ್ತಿಯನ್ನ ಹತ್ತಿರದಿಂದ ಕಂಡವರಿಗೆ ಇದು ಅಷ್ಟು ದೊಡ್ಡ ಅಚ್ಚರಿ ತಂದಿಲ್ಲ. ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ನೆಚ್ಚಿನ ಸಂಸದನಾಗಿ ರಿಷಿ ಸುನಾಕ್ ಸಾಕಷ್ಟು ಭರವಸೆ ಮೂಡಿಸಿದ್ದವರು. ಮೂರು ಚುನಾವಣೆಗಳಲ್ಲಿ ಗೆದ್ದು ಜನಪ್ರಿಯತೆ ಹೆಚ್ಚಿಸಿಕೊಂಡವರು.

40 ವರ್ಷದ ರಿಷಿ ಸುನಾಕ್ 1980ರಲ್ಲಿ ಹ್ಯಾಂಪ್​ಶೈರ್​ನ ಸೌಥಾಂಪ್ಟನ್​ನಲ್ಲಿ ಜನಿಸಿದವರು. ಅವರದ್ದು ಪಂಜಾಬ್ ಮೂಲದ ಕುಟುಂಬ. ಅವರ ಅಜ್ಜ ಅರವತ್ತರ ದಶಕದಲ್ಲಿ ಪೂರ್ವ ಆಪ್ರಿಕಾದಿಂದ ಬ್ರಿಟನ್​ಗೆ ವಲಸೆ ಬಂದವರು. ರಿಷಿ ಅವರ ತಂದೆ ಯಶವೀರ್ ವೃತ್ತಿಯಲ್ಲಿ ವೈದ್ಯರು. ತಾಯಿ ಉಷಾ ಔಷಧ ಮಳಿಗೆಯ ಮಾಲಕರಾಗಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್ ನಾರಾಯಣಮೂರ್ತಿ ಅಳಿಯ ಇಂಗ್ಲೆಂಡ್ ಹಣಕಾಸು ಸಚಿವ

ಆಕ್ಸ್​ಫರ್ಡ್​ನ ಲಿಂಕಾನ್ ಕಾಲೇಜಿನಲ್ಲಿ ರಾಜಕೀಯ, ಆರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ರಿಷಿ ಸುನಾಕ್ ಸ್ಟಾನ್​ಫೋರ್ಡ್ ವಿವಿಯಲ್ಲಿ ಎಂಬಿಎ ಮಾಡಿದರು. ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಪರಿಚಯವಾಗಿದ್ದು ಇದೇ ಸ್ಟಾನ್​ಫೋರ್ಡ್ ವಿವಿಯಲ್ಲೇ. ಇವರ ಪರಿಚಯ ಪ್ರೇಮಕ್ಕೆ ತಿರುಗಿ 2009ರಲ್ಲಿ ವಿವಾಹವಾದರು.

ಇದಾದ ಬಳಿಕ ಸುನಾಕ್ ಅವರು ವಿವಿಧ ಹಣಕಾಸು ಸಂಸ್ಥೆಗಳಲ್ಲಿ ವಿವಿಧ ಸ್ತರದಲ್ಲಿ ತೊಡಗಿಸಿಕೊಂಡರು. ಏಳೆಂಟು ವರ್ಷಗಳ ಹಿಂದೆ ಕನ್ಸರ್​ವೇಟಿವ್ ಪಕ್ಷದ ಮೂಲಕ ರಾಜಕಾರಣಕ್ಕೆ ಅಡಿ ಇಟ್ಟರು. 2015ರ ಸಾರ್ವತ್ರಿಕ ಚುನಾವಣೆಯಲ್ಲಿ ರಿಚ್ಮಂಡ್ ಕ್ಷೇತ್ರದಿಂದ ಸಂಸದರಾಗಿ ಚುನಾಯಿತರಾದರು. ಆಗಲೇ ಅವರ ರಾಜಕೀಯ ಬೆಳವಣಿಗೆ ವೇಗ ಕಂಡುಕೊಂಡಿತು. ಸಂಸತ್​ನ ಪರಿಸರ, ಆಹಾರ ಮತ್ತು ಗ್ರಾಮೀಣ ವ್ಯವಹಾರಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಎರಡು ವರ್ಷ ಕೆಲಸ ಮಾಡಿದರು.

ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಬೇರ್ಪಡುವ ಬ್ರೆಕ್ಸಿಟ್ ಒಪ್ಪಂದಕ್ಕೆ ರಿಷಿ ಸುನಾಕ್ ಅವರು ಬೆಂಬಲ ನೀಡಿದರು. ಇದೇ ಬ್ರೆಕ್ಸಿಟ್ ವಿಚಾರಕ್ಕೆ 2017ರಲ್ಲಿ ಬ್ರಿಟನ್​ನಲ್ಲಿ ಅವಧಿಗೆ ಮುನ್ನವೇ ಸಾರ್ವತ್ರಿಕ ಚುನಾವಣೆ ನಡೆಯಿತು. ರಿಷಿ ಸುನಾಕ್ ಇನ್ನಷ್ಟು ಹೆಚ್ಚು ಮತಗಳ ಅಂತರದಿಂದ ಮತ್ತೆ ಚುನಾಯಿತರಾದರು. ಆಗ ಅವರು ಸಂಸದರಾಗಿ ಭಗವದ್​ಗೀತೆ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದರು.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲಿಯೇ ತಲೆ ಎತ್ತಲಿದೆ ತಿರುಪತಿ ತಿಮ್ಮಪ್ಪನ ದೇಗುಲ; 100 ಎಕರೆ ಸ್ಥಳ ಗುರುತು2019ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ರಿಷಿ ಸುನಾಕ್ ಅವರು ಬೋರಿಸ್ ಜಾನ್ಸನ್ ಅವರ ಬಲಗೈ ಬಂಟರಾಗಿ ಹೋಗಿದ್ದರು. ಬೋರಿಸ್ ಪರವಾಗಿ ಟಿವಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ರಿಷಿ ಅವರೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಆ ಚುನಾವಣೆಯಲ್ಲಿ ರಿಚ್ಮಂಡ್ ಕ್ಷೇತ್ರದಲ್ಲಿ ಶೇ. 42ರಷ್ಟು, ಅಂದರೆ ಹಿಂದಿನೆರಡು ಬಾರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಭಾರಿಸಿದರು. ಪ್ರಧಾನಿ ಬೋರಿಸ್ ಜಾನ್ಸನ್ ಅವರು ಸುನಾಕ್ ಅವರನ್ನು ಟ್ರೆಷರಿ ಇಲಾಖೆಗೆ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿಕೊಂಡರು. ನಂತರ, ಬ್ರಿಟನ್ ದೇಶದ ರಾಣಿಯ ಮಹಾ ಮಂಡಳಿಗೆ(ಪ್ರೈವಿ ಕೌನ್ಸಿಲ್) ಸದಸ್ಯರೂ ಆದರು. ಈ ಪ್ರೈವಿ ಕೌನ್ಸಿಲ್ ಎಂಬುದು ಬ್ರಿಟನ್​ನ ಅತ್ಯುಚ್ಚ ಮಂಡಳಿ ಎಂದು ಪರಿಗಣಿಸಲಾಗಿದೆ. ಇದೇ ವೇಳೆ, ಪಾಕಿಸ್ತಾನ ಮೂಲದ ಸಾಜಿದ್ ಜಾವಿದ್ ಅವರು ಹಣಕಾಸು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಿಷಿ ಸುನಾಕ್ ಅವರ ಕಾರ್ಯಪ್ರವೃತ್ತಿ ನೋಡಿ ಮೆಚ್ಚಿಕೊಂಡಿದ್ದ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹಣಕಾಸು ಸಚಿವ ಸ್ಥಾನಕ್ಕೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಬ್ರಿಟನ್​ನಲ್ಲಿ ಭಾರತ ಮೂಲದ ವ್ಯಕ್ತಿಗಳು ವಿವಿಧ ರಾಜಕೀಯ ಪಕ್ಷಗಳಲ್ಲಿ ವಿವಿಧ ಸ್ತರಗಳಲ್ಲಿ ಕೆಲಸ ಮಾಡಿದ್ಧಾರೆ. ಆದರೆ, ಇಷ್ಟು ಉನ್ನತ ಮಟ್ಟಕ್ಕೆ ಹೋಗಿದ್ದು ರಿಷಿ ಸುನಾಕ್ ಮಾತ್ರವೇ. ಮುಂದಿನ ದಿನಗಳಲ್ಲಿ ಅವರು ಪ್ರಧಾನಿ ಪಟ್ಟಕ್ಕೆ ಏರುವಂತಾಗಲಿ ಎಂದು ಹಾರೈಸಬಹುದು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 13, 2020, 7:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories