ಮುಂಬೈ (ಜೂನ್ 24): 2035ರ ವೇಳೆಗೆ ನಿವ್ವಳ 'ಕಾರ್ಬನ್ ಜೀರೋ' ಸಾಧನೆ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಸಂಸ್ಥೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಕಟಿಸಿದೆ. ರಿಲಯನ್ಸ್ನ ಈಗಿನ ವಹಿವಾಟಿನ ಆರಂಭಿಕ ಕೇಂದ್ರವಾಗಿದ್ದ ಜಾಮನಗರದಲ್ಲಿ 5,000 ಎಕರೆ ವಿಸ್ತೀರ್ಣದ 'ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್' ಅನ್ನು ಪ್ರಾರಂಭಿಸುವ ಮೂಲಕ ಅದನ್ನು ತಮ್ಮ ಹೊಸ ವಹಿವಾಟಿನ ಕೇಂದ್ರವನ್ನಾಗಿಯೂ ಮಾಡಿಕೊಳ್ಳುವುದಾಗಿ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಇಂದು ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸೌರಶಕ್ತಿಯ ಉತ್ಪಾದನೆ ಮತ್ತು ಶೇಖರಣೆ ಹಾಗೂ ಪರಿಸರ ಸ್ನೇಹಿ ಹೈಡ್ರೋಜನ್ ಉತ್ಪಾದನೆ ಮತ್ತು ಇಂಧನ ರೂಪಕ್ಕೆ ಪರಿವರ್ತನೆಗಾಗಿ ಒಟ್ಟು ನಾಲ್ಕು ಬೃಹತ್ ಕಾರ್ಖಾನೆಗಳನ್ನು ರಿಲಯನ್ಸ್ ಸ್ಥಾಪಿಸಲಿದೆ. ಈ ಉದ್ದೇಶಕ್ಕಾಗಿ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಬಂಡವಾಳ ಹೂಡುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. 2030ರ ವೇಳೆಗೆ ಕನಿಷ್ಠ 100 ಗಿಗಾ ವ್ಯಾಟ್ನಷ್ಟು ಸೌರ ವಿದ್ಯುತ್ ಉತ್ಪಾದನೆಯನ್ನು ರಿಲಯನ್ಸ್ ಸಾಧ್ಯವಾಗಿಸಲಿದೆ ಎಂದು ಅವರು ಹೇಳಿದ್ದಾರೆ.
ಹೊಸ ಮೆಟೀರಿಯಲ್ಗಳು ಹಾಗೂ ಪರಿಸರ ಸ್ನೇಹಿ ರಾಸಾಯನಿಕಗಳನ್ನು ಉತ್ಪಾದಿಸುವ ನಿಟ್ಟಿನಲ್ಲೂ ರಿಲಯನ್ಸ್ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಕಾರ್ಯಕ್ರಮಗಳ ಅಂಗವಾಗಿ ಭಾರತದ ಮೊತ್ತಮೊದಲ ವಿಶ್ವದರ್ಜೆಯ ಕಾರ್ಬನ್ ಫೈಬರ್ ಘಟಕದಲ್ಲಿ ಹೂಡಿಕೆ ಮಾಡುತ್ತಿರುವುದಾಗಿ ಮುಖೇಶ್ ಅಂಬಾನಿ ಘೋಷಿಸಿದ್ದಾರೆ. ತಮ್ಮ ಹೊಸ ಯೋಜನೆಗಳ ಮೂಲಕ ರಿಲಯನ್ಸ್ನ ಸಾಂಪ್ರದಾಯಿಕ ಇಂಧನಗಳ ವಹಿವಾಟನ್ನು ತಾಳಿಕೆಯ, ಸರ್ಕ್ಯುಲರ್ ಮತ್ತು ನಿವ್ವಳ ಜೀರೋ ಕಾರ್ಬನ್ ಮೆಟೀರಿಯಲ್ಗಳ ವಹಿವಾಟಾಗಿ ಬದಲಿಸುವುದಾಗಿ ಅವರು ತಿಳಿಸಿದ್ದಾರೆ. ಇದು ನಮಗೆ ಕೇವಲ ಹೊಸದೊಂದು ವಹಿವಾಟು ಮಾತ್ರವೇ ಅಲ್ಲ, ಇದು ಪರಿಸರಕ್ಕೆ ಉಂಟಾಗಿರುವ ಹಾನಿಯನ್ನು ಗುಣಪಡಿಸುವ ತಮ್ಮ ಉದ್ದಿಷ್ಟ ಕಾರ್ಯ ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಇದನ್ನು ಓದಿ: RIL AGM 2021: ಗಣೇಶ ಚತುರ್ಥಿಗೆ ಜಗತ್ತಿನ ಅತ್ಯಂತ ಕಡಿಮೆ ಬೆಲೆಯ 5ಜಿ ಜಿಯೋಫೋನ್ ನೆಕ್ಸ್ಟ್ ಬಿಡುಗಡೆ; ಅಂಬಾನಿ
5G ತಂತ್ರಜ್ಞಾನದ ಬಳಕೆ
ದೇಶೀಯ ನಿರ್ಮಿತ 5G ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಯೋ ಗಮನಾರ್ಹ ಸಾಧನೆಗಳನ್ನು ಮಾಡಿದ್ದು, ಪರೀಕ್ಷಾರ್ಥ ಚಟುವಟಿಕೆಗಳು ಮುಂದುವರೆದಿವೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ. ಶಿಕ್ಷಣ, ಆರೋಗ್ಯ ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ 5G ತಂತ್ರಜ್ಞಾನದ ಬಳಕೆಯನ್ನು ಪರೀಕ್ಷಿಸಲಾಗುತ್ತಿದ್ದು, ಭಾರತ ಶೀಘ್ರವೇ '2G-ಮುಕ್ತ'ವಾಗುವುದರ ಜೊತೆಗೆ '5G-ಯುಕ್ತ'ವೂ ಆಗುತ್ತದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ. ಭಾರತದಾದ್ಯಂತ 5G ಪರಿಚಯಿಸುವುದರ ಜೊತೆಗೆ ನಮ್ಮ ತಂತ್ರಜ್ಞಾನವನ್ನು ಇನ್ನಿತರ ದೇಶಗಳೂ ಬಳಸಲಿವೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸಂಕಷ್ಟದ ನಡುವೆಯೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಉತ್ತಮ ನಿರ್ವಹಣೆ ಪ್ರದರ್ಶಿಸಿದ್ದು, ಕಳೆದ ವರ್ಷದಲ್ಲಿ 54,000 ಕೋಟಿ ರೂ.ಗಳ ಒಟ್ಟು ಆದಾಯ ಗಳಿಸಿದೆ. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್ಗ್ಗಳ ಮೊದಲಿನ ಆದಾಯವು (EBITDA) ಸುಮಾರು 98,000 ಕೋಟಿ ರೂ.ಗಳಷ್ಟಿದ್ದು, ಈ ಪೈಕಿ ಸುಮಾರು ಅರ್ಧದಷ್ಟು ಗ್ರಾಹಕ ವಹಿವಾಟುಗಳಿಂದಲೇ ಬಂದಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ನ ಮುಖ್ಯಸ್ಥ ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ