ನವದೆಹಲಿ (ಜು. 15): ಭಾರತವನ್ನು 2ಜಿ ಮುಕ್ತಗೊಳಿಸಬೇಕೆಂಬ ಉದ್ದೇಶದಿಂದ ಜಿಯೋ ಮತ್ತು ಗೂಗಲ್ ಸಹಭಾಗಿತ್ವದಲ್ಲಿ ಉತ್ತಮ ಗುಣಮಟ್ಟದ ಮತ್ತು ಕಡಿಮೆ ಬೆಲೆಯ 4ಜಿ ಸ್ಮಾರ್ಟ್ಫೋನ್ಗಳನ್ನು ಪರಿಚಯಿಸಲಿದೆ. ಅಲ್ಲದೆ, ಜಿಯೋದಲ್ಲಿ ಗೂಗಲ್ 33,000 ಕೋಟಿ ರೂ.ಗಳ ಹೂಡಿಕೆಯನ್ನೂ ಮಾಡಿದೆ. ಈ ಬಗ್ಗೆ ಜಿಯೋದ ಮೊದಲ ವರ್ಚುವಲ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಿಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.
ಈ ವೇಳೆ ಜಿಯೋದ ಹೊಸ ವೆಂಚರ್ಗೆ ಶುಭಾಶಯಗಳನ್ನು ತಿಳಿಸಿರುವ ಫೇಸ್ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್, ಜಿಯೋದೊಂದಿಗೆ ಕೈಜೋಡಿಸಿ ನಾವು ವಿಭಿನ್ನವಾದ ಪ್ರಾಜೆಕ್ಟ್ಗಳನ್ನು ಕೈಗೆತ್ತಿಕೊಳ್ಳಲಿದ್ದೇವೆ. ನಮ್ಮ ಹೊಸ ಪ್ರಯತ್ನದಿಂದಾಗಿ ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಪ್ರತಿಯೊಂದು ದೇಶದ ಆರ್ಥಿಕತೆಗೆ ಸಣ್ಣ ಉದ್ಯಮಗಳೇ ಮೂಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: RIL AGM 2020: Jioದಲ್ಲಿ Google 33,000 ಕೋಟಿ ರೂ. ಹೂಡಿಕೆ; ಮುಕೇಶ್ ಅಂಬಾನಿ ಘೋಷಣೆ
ಭಾರತೀಯ ಟೆಲಿಕಾಂನಲ್ಲಿ ಹೊಸ ಅಲೆ ಸೃಷ್ಟಿಸಿದ್ದ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ಜಿಯೋ ತನ್ನ ಶೇ.9.99 ಷೇರನ್ನು ಅಮೆರಿಕದ ಟೆಕ್ ಸಂಸ್ಥೆ ಫೇಸ್ಬುಕ್ಗೆ ಮಾರಾಟ ಮಾಡಿತ್ತು. ಫೇಸ್ಬುಕ್ ಜಿಯೋದಲ್ಲಿ 43,574 ಕೋಟಿ ರೂ. ಹೂಡಿಕೆ ಮಾಡಿತ್ತು. ಈಗಾಗಲೇ ಜಿಯೋ ಪ್ಲಾಟ್ಫಾರ್ಮ್ನಲ್ಲಿ ಫೇಸ್ಬುಕ್, ಕ್ವಾಲ್ಕಂ ವೆಂಚರ್ಸ್ ಮುಂತಾದ 10ಕ್ಕೂ ಹೆಚ್ಚು ಸಂಸ್ಥೆಗಳು ಬಂಡವಾಳ ಹೂಡಿಕೆ ಮಾಡಿವೆ. ಭಾರತದಲ್ಲಿ 1.3 ಶತಕೋಟಿ ಜನರಿಗೆ ಉದ್ಯೋಗಾವಕಾಶ ನೀಡುವುದಷ್ಟೇ ಅಲ್ಲದೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸುವುದು ರಿಲಯನ್ಸ್ ಇಂಡಸ್ಟ್ರೀಸ್ನ ಉದ್ದೇಶ. ಈ ಹಿನ್ನೆಲೆಯಲ್ಲಿ ಜಿಯೋ ವೇದಿಕೆಯನ್ನು ಬಂಡವಾಳ ಹೂಡಿಕೆಗೆ ಮುಕ್ತವಾಗಿಸಲಾಗಿದೆ.
ಇದನ್ನೂ ಓದಿ: RIL AGM 2020: ಸದ್ಯದಲ್ಲೇ ದೇಶದಲ್ಲಿ ಜಿಯೋ 5ಜಿ ಸೇವೆ ಆರಂಭ: ಬೇರೆ ದೇಶಗಳಿಗೂ 5ಜಿ ಸೊಲ್ಯೂಷನ್ ಸೇವೆ
2017ರ ಜುಲೈ 21ರಂದು ನಡೆದಿದ್ದ ರಿಲಯನ್ಸ್ ಜಿಯೋ ಎಜಿಎಂನಲ್ಲಿ ಜಿಯೋ ಫೋನ್ ಬಿಡುಗಡೆಯಾಗಿತ್ತು. ನಂತರ 2018ರ ಜುಲೈ 31ರಂದು ಜಿಯೋ ಫೋನ್ 2 ಅನ್ನು 2,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. ಇಂದು ನಡೆಯುತ್ತಿರುವ ಎಜಿಎಂನಲ್ಲಿ ಗೂಗಲ್ ಮತ್ತು ಜಿಯೋದ ಸಹಭಾಗಿತ್ವದಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ಈವೆಂಟ್ ಷೇರುದಾರರು ಸೇರಿದಂತೆ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ Chatbot ಅನ್ನು ಪ್ರಾರಂಭಿಸಲಾಗಿದೆ. ಈಗಾಗಲೇ ವಿಶ್ವದ 6ನೇ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮುಕೇಶ್ ಅಂಬಾನಿ ಪಾತ್ರರಾಗಿದ್ದಾರೆ. ವಿಶ್ವದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿರುವ ಏಷ್ಯಾದ ಏಕೈಕ ವ್ಯಕ್ತಿ ಮುಕೇಶ್ ಅಂಬಾನಿ. ಭಾರತದ ಶ್ರೀಮಂತರ ಪೈಕಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ