Reliance: 771 ಮಿ. ಡಾಲರ್​ಗೆ ನಾರ್ವೆಯ ಆರ್‌ಇಸಿ ಸೋಲಾರ್ ಹೋಲ್ಡಿಂಗ್ಸ್ ಖರೀದಿಸಿದ 'ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್'

ಆರ್‌ಇಸಿ ಖರೀದಿಯಿಂದ ರಿಲಯನ್ಸ್‌ಗೆ ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಸೇರಿದಂತೆ ವಿಶ್ವದಾದ್ಯಂತ ಸೌರಶಕ್ತಿ ಮಾರುಕಟ್ಟೆಗಳಿಗೆ ಪ್ರವೇಶ ನೀಡಿದಂತಾಗಿದೆ.

ಮುಕೇಶ್ ಅಂಬಾನಿ

ಮುಕೇಶ್ ಅಂಬಾನಿ

 • Share this:
  ನವದೆಹಲಿ, ಅಕ್ಟೋಬರ್ 10: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (Reliance Industries Limited) ಭಾನುವಾರ ನಾರ್ವೇಜಿಯನ್ (Norway) ಪ್ರಧಾನ ಕಚೇರಿ ಹೊಂದಿರುವ ಸೌರ ವಿದ್ಯುತ್ ತಯಾರಕ REC ಘಟಕದ ಹೋಲ್ಡಿಂಗ್ಸ್ (REC Group) ಅನ್ನು ಚೀನಾ ನ್ಯಾಷನಲ್ ಬ್ಲೂಸ್ಟಾರ್ ನಿಂದ 771 ಮಿಲಿಯನ್ ಡಾಲರ್ (ಸುಮಾರು ರೂ. 5,800 ಕೋಟಿ) ಉದ್ಯಮದ ಶೇ. 100 ಪಾಲನ್ನು ಖರೀದಿಸುವ ಮೂಲಕ ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡಿತು. ಆರ್​​ಇಸಿ ಗ್ರೂಪ್ ಪ್ರವರ್ತಕ ನಾವೀನ್ಯತೆಗಳಿಗಾಗಿ ಪ್ರಮುಖ ಅಂತಾರಾಷ್ಟ್ರೀಯ ಸೌರಶಕ್ತಿ ಕಂಪನಿಯಾಗಿದೆ. ಇದು ಹೆಚ್ಚಿನ ದಕ್ಷತೆ, ದೀರ್ಘಾವಧಿಯ ಸೌರ ಕೋಶಗಳು ಮತ್ತು ಸ್ವಚ್ಛ ಮತ್ತು ಕೈಗೆಟುಕುವ ಸೌರ ಶಕ್ತಿಗಾಗಿ ಫಲಕಗಳಿಗೆ ಹೆಸರುವಾಸಿಯಾಗಿದೆ.

  ಈ ಖರೀದಿ ಕುರಿತು ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಅಧ್ಯಕ್ಷ ಮುಖೇಶ್ ಅಂಬಾನಿ (RIL Chairman Mukesh Ambani) ಅವರು ಮಾತನಾಡಿ, "ಆರ್‌ಇಸಿ ಖರೀದಿ ನನಗೆ ತುಂಬಾ ಸಂತೋಷವಾಗಿದೆ. ಏಕೆಂದರೆ ಇದು ಸೂರ್ಯ ದೇವನ ಅನಿಯಮಿತ ಮತ್ತು ವರ್ಷಪೂರ್ತಿ ದೊರೆಯುವ ಸೌರ ಶಕ್ತಿಯನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ. ಈ ದಶಕದ ಅಂತ್ಯಕ್ಕೆ ಈ ಒಪ್ಪಂದ ಜಾರಿಗೆ ಬರಲಿದ್ದು, 100 ಗಿಗಾ ವಾಟ್ಸ್‌ ಸ್ವಚ್ಛ ಮತ್ತು ಗ್ರೀನ್ ಎನರ್ಜಿ ಸೃಷ್ಟಿಸುವ ರಿಲಯನ್ಸ್ ಗುರಿಯನ್ನು ಸಾಧಿಸಲು, ಹೊಸ ಮತ್ತು ಸುಧಾರಿತ ತಂತ್ರಜ್ಞಾನಗಳು ಮತ್ತು ಕಾರ್ಯಾಚರಣೆಯ ದಕ್ಷತೆಗಳಲ್ಲಿ ಹೂಡಿಕೆ ಮಾಡುವ ನಮ್ಮ ಕಾರ್ಯತಂತ್ರಕ್ಕೆ ಅನುಗುಣವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು 2030ರ ವೇಳೆಗೆ ಭಾರತದಲ್ಲಿ 450 ಗಿಗಾ ವಾಟ್ಸ್‌ನಷ್ಟು ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಹೊಂದಿದ್ದಾರೆ. ಇದನ್ನು ಸಾಧಿಸಲು ಯಾವುದೊ ಒಂದು ಕಂಪನಿಯ ಅತಿದೊಡ್ಡ ಕೊಡುಗೆಯಾಗಿರುತ್ತದೆ. ಇದು ಭಾರತವು ಹವಾಮಾನ ಬಿಕ್ಕಟ್ಟನ್ನು ಜಯಿಸಲು ಮತ್ತು ಹಸಿರು ಶಕ್ತಿ ಕ್ಷೇತ್ರದಲ್ಲಿ ಭಾರತ ವಿಶ್ವ ನಾಯಕನಾಗಲು ಸಹಾಯ ಮಾಡುತ್ತದೆ'' ಎಂದು ಹೇಳಿದರು.

  ''ಇತ್ತೀಚಿನ ಹೂಡಿಕೆಯೊಂದಿಗೆ, ರಿಲಯನ್ಸ್ ಸಂಸ್ಥೆಯು ಈಗ ಜಾಗತಿಕವಾಗಿ ಸಂಯೋಜಿತ ಫೋಟೋವೋಲ್ಟಿಕ್‌ ಗಿಗಾ ಕಾರ್ಖಾನೆಯನ್ನು ಸ್ಥಾಪಿಸಲು ಹೊರಟಿದ್ದು ಮತ್ತು ಭಾರತವನ್ನು ಕಡಿಮೆ ವೆಚ್ಚದ ಮತ್ತು ಅತ್ಯಧಿಕ ದಕ್ಷತೆಯ ಸೋಲಾರ್ ಪ್ಯಾನಲ್‌ಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡಲಿದೆ. ಭಾರತ ಮತ್ತು ಪ್ರಪಂಚದಾದ್ಯಂತ ನಮ್ಮ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಉತ್ಪನ್ನಗಳನ್ನು ಒದಗಿಸಲು ನಾವು ಜಾಗತಿಕ ಕಂಪನಿಗಳೊಂದಿಗೆ ಹೂಡಿಕೆ, ತಯಾರಿಕೆ ಮತ್ತು ಸಹಯೋಗವನ್ನು ಮುಂದುವರಿಸುತ್ತೇವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಿಕೇಂದ್ರಿಕೃತ ರೀತಿಯಲ್ಲಿ ಲಕ್ಷಾಂತರ ಹಸಿರು ಉದ್ಯೋಗಗಳನ್ನು ಸೃಷ್ಟಿಸುವ ಈ ಅವಕಾಶ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ'' ಎಂದು ಮುಖೇಶ್ ಅಂಬಾನಿ ಅವರು ಹೇಳಿದರು.

  ವಿಶ್ವದ ಪ್ರಮುಖ ಸೌರ ವಿದ್ಯುತ್ ಕಂಪನಿ

  ಆರ್‌ಇಸಿ ಒಂದು ಬಹುರಾಷ್ಟ್ರೀಯ ಸೌರ ವಿದ್ಯುತ್ ಕಂಪನಿಯಾಗಿದೆ. ಕಂಪನಿಯ ಪ್ರಧಾನ ಕಚೇರಿ ನಾರ್ವೆಯಲ್ಲಿದೆ ಮತ್ತು ಅದರ ಕಾರ್ಯಕಾರಿ ಕಚೇರಿಯು ಸಿಂಗಾಪುರದಲ್ಲಿದೆ. ಕಂಪನಿಯು ಉತ್ತರ ಅಮೆರಿಕಾ, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ-ಪೆಸಿಫಿಕ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ಹೊಂದಿದೆ. ನಾರ್ವೆಯಲ್ಲಿ ಎರಡು ಮತ್ತು ಸಿಂಗಾಪುರದಲ್ಲಿ ಒಂದು ಉತ್ಪಾದನಾ ಘಟಕಗಳಿವೆ. ಕಂಪನಿಯು ತನ್ನ ತಾಂತ್ರಿಕ ಆವಿಷ್ಕಾರಕ್ಕೆ, ಕೈಗೆಟುಕುವ ಸೌರ ವಿದ್ಯುತ್ ಫಲಕಗಳ ಉತ್ಪಾದನೆಗೆ ಹೆಚ್ಚಿನ ದಕ್ಷತೆಗೆ ಹೆಸರುವಾಸಿಯಾಗಿದೆ. 25 ವರ್ಷಗಳ ಅನುಭವದೊಂದಿಗೆ, ವಿಶ್ವದ ಪ್ರಮುಖ ಸೋಲಾರ್ ಸೆಲ್/ಪ್ಯಾನಲ್ ಮತ್ತು ಪಾಲಿಸಿಲಿಕಾನ್ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿದೆ.

  ಅತ್ಯಂತ ಕಡಿಮೆ ಇಂಗಾಲದ ಹೆಜ್ಜೆಗುರುತಿನೊಂದಿಗೆ ಆರ್‌ಇಸಿ 600ಕ್ಕೂ ಹೆಚ್ಚು ಉಪಯೋಗಿ ಮತ್ತು ವಿನ್ಯಾಸ ಪೇಟೆಂಟ್‌ಗಳನ್ನು ಹೊಂದಿದೆ. ಈ ಪೈಕಿ 446 ಅನ್ನು ಅನುಮೋದನೆ ಪಡೆದಿದ್ದು, ಉಳಿದವು ಮೌಲ್ಯಮಾಪನದಲ್ಲಿವೆ. ಆರ್‌ಇಸಿ ಜಾಗತಿಕವಾಗಿ ನಂಬಲರ್ಹವಾದ ಬ್ರ್ಯಾಂಡ್ ಆಗಿದ್ದು ನವೀನ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಎಲ್ಲಾ ಉತ್ಪಾದನೆಗಳು ಆರ್‌ಇಸಿಯು ಹಾಫ್ ಕಟ್ ಪ್ಯಾಸಿವ್ ಎಮಿಟರ್ ಮತ್ತು ರಿಯರ್ ಸೆಲ್ ತಂತ್ರಜ್ಞಾನಗಳನ್ನು ಆಧರಿಸಿದೆ. ಆರ್‌ಇಸಿ ಮುಂದಿನ ಪೀಳಿಗೆಯ ಎಚ್‌ಜೆಟಿ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಆರ್‌ಇಸಿ ವಿಶ್ವಾದ್ಯಂತ 1,300 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲ ವಹಿವಾಟಿನ ನಂತರ, ಈ ಕಂಪನಿಯು ರಿಲಯನ್ಸ್ ಕುಟುಂಬದ ಭಾಗವಾಗುತ್ತದೆ. ರಿಲಯನ್ಸ್‌ನ ಮಹತ್ವಾಕಾಂಕ್ಷೆಯ ಹಸಿರು ಶಕ್ತಿ ಮಿಷನ್ ಗೆ ಉತ್ತೇಜನ ನೀಡುತ್ತದೆ. ಫ್ರಾನ್ಸ್, ಯುಎಸ್ ಮತ್ತು ಸಿಂಗಾಪುರದಲ್ಲಿ ಆರ್ಇಸಿ ವಿಸ್ತರಣಾ ಯೋಜನೆಗಳಿಗೆ ರಿಲಯನ್ಸ್ ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ.

  ಇದನ್ನು ಓದಿ: Cooking Oil Price: ಜನಸಾಮಾನ್ಯರಿಗೆ ಗುಡ್​​ನ್ಯೂಸ್; ಕಡಿಮೆಯಾಗಲಿದೆ ಅಡುಗೆ ಎಣ್ಣೆ ಬೆಲೆ!

  10 ಗಿಗಾ ವಾಟ್ಸ್‌ ಉತ್ಪಾದಿಸಲು ಯೋಜನೆ

  ಜಾಮ್‌ನಗರದಲ್ಲಿ ನಿರ್ಮಿಸಲಿರುವ ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ ರಿಲಯನ್ಸ್ ಆರ್‌ಇಸಿ ಅತ್ಯುತ್ತಮ ತಂತ್ರಜ್ಞಾನಗಳನ್ನು ಬಳಸಲಿದೆ. ಇದರ ಸಾಮರ್ಥ್ಯವು 4 ಗಿಗಾ ವಾಟ್ಸ್‌ನಿಂದ ಆರಂಭಿಸಿ ಪ್ರತಿ ವರ್ಷ ಹೆಚ್ಚಿಸಿ 10 ಗಿಗಾ ವಾಟ್ಸ್‌ ಉತ್ಪಾದಿಸಲು ಯೋಜಿಸಲಾಗಿದೆ. ಆರ್‌ಇಸಿ ಅತ್ಯುತ್ತಮ ಸೌರ ತಂತ್ರಜ್ಞಾನವನ್ನು ಹೊಂದಿದ್ದರೆ, ರಿಲಯನ್ಸ್ ದೊಡ್ಡ ಪ್ರಮಾಣದ ಯೋಜನೆಗಳನ್ನು ಸ್ಥಾಪಿಸುವಲ್ಲಿ ಮತ್ತು ಅವುಗಳನ್ನು ಅತ್ಯುತ್ತಮವಾಗಿ ನಡೆಸುವಲ್ಲಿ ದಶಕಗಳ ಅನುಭವವನ್ನು ಹೊಂದಿದೆ. ಇಬ್ಬರೂ ಒಟ್ಟಾಗಿ ಅತ್ಯಾಧುನಿಕ ಮುಂದಿನ ಪೀಳಿಗೆಯ ಸಂಪೂರ್ಣ ಸಂಯೋಜಿತ ಪಿವಿ ಉತ್ಪಾದನಾ ಘಟಕವನ್ನು ಧೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್‌ನಲ್ಲಿ ಸ್ಥಾಪಿಸಿದರು ಮತ್ತು ನಂತರ ಪ್ರಪಂಚದಾದ್ಯಂತ ಇದೇ ರೀತಿಯ ದೊಡ್ಡ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲಿದ್ದಾರೆ. ಆರ್‌ಇಸಿ ಖರೀದಿಯಿಂದ ರಿಲಯನ್ಸ್‌ಗೆ ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾ ಸೇರಿದಂತೆ ವಿಶ್ವದಾದ್ಯಂತ ಸೌರಶಕ್ತಿ ಮಾರುಕಟ್ಟೆಗಳಿಗೆ ಪ್ರವೇಶ ನೀಡಿದಂತಾಗಿದೆ.
  Published by:HR Ramesh
  First published: