ನವ ದೆಹಲಿ (ಫೆಬ್ರವರಿ 13); ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವರ್ಷ ದೊಡ್ಡ ಮಟ್ಟದ ಜನ ಹೋರಾಟ ನಡೆದಿತ್ತು. ಶಾಹೀನ್ ಭಾಗ್ ಹೋರಾಟ ಈ ವೇಳೆ ವಿಶ್ವದ ಗಮನವನ್ನು ಸೆಳೆದಿತ್ತು. ಈ ವೇಳೆ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, "ಸಿಎಎ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗಳು ಕಾನೂನು ಬಾಹೀರ" ಎಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ಮ ಈ ತೀರ್ಪನ್ನು ವಿರೋಧಿಸಿ 12 ಕಾರ್ಯಕರ್ತರು ತೀರ್ಪು ಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ, "ಪ್ರತಿಭಟನೆಯ ಹಕ್ಕು ಕೆಲವು ಕರ್ತವ್ಯಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಪ್ರತಿಭಟನೆಯನ್ನು ಎಲ್ಲಿಬೇಕಾದರೂ-ಯಾವಾಗಬೇಕಾದರೂ ನಡೆಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದೆ.
"2019 ರಲ್ಲಿ ದೆಹಲಿಯ ಶಾಹೀನ್‌ಬಾಗ್‌ನಲ್ಲಿ ನಡೆದ ಪೌರತ್ವ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಪ್ರತಿಭಟನೆ ಮತ್ತು ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಅದನ್ನು ಮನಸೋ ಇಚ್ಛೆ ಬಳಸುವಂತಿಲ್ಲ" ಎಂದು ಆದೇಶ ಹೊರಡಿಸಿದೆ.
"ಪ್ರತಿಭಟನೆಯನ್ನು ಎಲ್ಲಿಬೇಕಾದರೂ-ಯಾವಾಗಬೇಕಾದರೂ ನಡೆಸಲು ಸಾಧ್ಯವಿಲ್ಲ. ಅದು ಕೆಲವು ಸ್ವಯಂಪ್ರೇರಿತ ಪ್ರತಿಭಟನೆಗಳೂ ಕೂಡ ಆಗಿರಬಹುದು. ಆದರೆ ದೀರ್ಘಕಾಲದ ಪ್ರತಿಭಟನೆಯ ಸಂದರ್ಭದಲ್ಲಿ, ಇತರರ ಹಕ್ಕುಗಳ ಮೇಲೆ ಪರಿಣಾಮ ಬೀರುವ ಸಾರ್ವಜನಿಕ ಸ್ಥಳವನ್ನು ನಿರಂತರವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಅನಿರುದ್ ಬೋಸ್ ಮತ್ತು ಕೃಷ್ಣ ಮುರಾರಿ ಇದ್ದ ಮೂವರ ನ್ಯಾಯಾಧೀಶರ ಪೀಠವು ಹೇಳಿದೆ.
"ಪ್ರತಿಭಟನೆಗಾಗಿ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಳ್ಳುವಂತಿಲ್ಲ ಮತ್ತು ಸಾರ್ವಜನಿಕ ಪ್ರತಿಭಟನೆಗಳು ಗೊತ್ತುಪಡಿಸಿದ ಪ್ರದೇಶಗಳಲ್ಲಿ ಮಾತ್ರ ನಡೆಯಬೇಕು" ಎಂದು ನ್ಯಾಯಪೀಠವು ಪುನರುಚ್ಚರಿಸಿದೆ.
"ಭಿನ್ನಾಭಿಪ್ರಾಯ ಮತ್ತು ಪ್ರಜಾಪ್ರಭುತ್ವವು ಯಾವಾಗಲೂ ಒಟ್ಟಿಗೆ ಇರುತ್ತದೆ" ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್ 2020 ರಲ್ಲಿ ಹೇಳಿತ್ತು. ಇದನ್ನು ಉಲ್ಲೇಖಿಸಿದ ನ್ಯಾಯಪೀಠವು, “ಈ ರೀತಿಯ ಪ್ರತಿಭಟನೆಗಳು ಸ್ವೀಕಾರಾರ್ಹವಲ್ಲ" ಎಂದು ಒತ್ತಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ