ಹಿಂದೂ ಮುಸ್ಲಿಮ್ ಅಲ್ಲ, ವೈಯಕ್ತಿಕ ಹಕ್ಕಿನ ಪ್ರಶ್ನೆ: ಲವ್ ಜಿಹಾದ್ ಪ್ರಕರಣದಲ್ಲಿ ಕೋರ್ಟ್ ಮಹತ್ವದ ತೀರ್ಪು

ತಮ್ಮ ಮಗಳನ್ನ ಅಪಹರಿಸಿ ಇಸ್ಲಾಮ್ ಧರ್ಮಕ್ಕೆ ಮತಾಂತರ ಮಾಡಿ ಮದುವೆ ಮಾಡಲಾಗಿದೆ ಎಂದು ಹುಡುಗಿಯ ತಂದೆ ಮಾಡಿದ ಆರೋಪವನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್, ಇಲ್ಲಿ ಹಿಂದೂ ಮುಸ್ಲಿಮ್ ಪ್ರಶ್ನೆಗಿಂತ ಇಬ್ಬರು ವಯಸ್ಕ ವ್ಯಕ್ತಿಗಳ ವೈಯಕ್ತಿಕ ಆಯ್ಕೆ ಮುಖ್ಯ ಎಂದು ಅಭಿಪ್ರಾಯಪಟ್ಟಿದೆ.

ಅಲಹಾಬಾದ್ ಹೈಕೋರ್ಟ್

ಅಲಹಾಬಾದ್ ಹೈಕೋರ್ಟ್

 • News18
 • Last Updated :
 • Share this:
  ಅಲಾಹಾಬಾದ್(ನ. 24): ಲವ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿ ಮತಾಂತರ ಉದ್ದೇಶಿತ ಅಂತರ್ ಧರ್ಮೀಯ ವಿವಾಹಗಳಿಗೆ ಕಡಿವಾಣ ಹಾಕುವ ಕಾನೂನುಗಳನ್ನ ಕೆಲ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ಹೊತ್ತಲ್ಲೇ ಉತ್ತರ ಪ್ರದೇಶದ ಅಲಹಾಬಾದ್ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ವಯಸ್ಸಿಗೆ ಬಂದ ಯಾವುದೇ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಬಾಳಲು ಕಾನೂನಿನಲ್ಲಿ ಅವಕಾಶ ಇದೆ. ಅವರಿಬ್ಬರ ಶಾಂತಿಯುವ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಅಡ್ಡಗಾಲು ಹಾಕುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.

  ಸಲಾಮತ್ ಅನ್ಸಾರಿ ಸೇರಿದಂತೆ ನಾಲ್ವರು ವ್ಯಕ್ತಿಗಳು ತಮ್ಮ ವಿರುದ್ಧದ ಲವ್ ಜಿಹಾದ್ ಪ್ರಕರಣವನ್ನು ಕೈಬಿಡಬೇಕೆಂದು ಸಲ್ಲಿಸಿದ ಅರ್ಜಿಯ ವಿಚಾರಣೆ ನಂತರ ಕೋರ್ಟ್ ನೀಡಿದ ತೀರ್ಪು ಇದು. ಲವ್ ಜಿಹಾದ್​ಗೆ ತಳುಕುಹಾಕಿಕೊಂಡ ಪ್ರಕರಣ ಇದಾದ್ದರಿಂದ ಕೋರ್ಟ್ ತೀರ್ಪು ಮಹತ್ವ ಪಡೆದಿದೆ. ಇಸ್ಲಾಮ್ ಧರ್ಮೀಯ ಸಲಾಮತ್ ಮತ್ತು ಹಿಂದೂ ಧರ್ಮೀಯ ಪ್ರಿಯಾಂಕಾ ಖರ್ವರ್ ಅವರಿಬ್ಬರು ಪರಸ್ಪರ ಪ್ರೇಮಿಸಿ 2019, ಆಗಸ್ಟ್ 19ರಂದು ವಿವಾಹವಾಗಿದ್ದರು. ಮುಸ್ಲಿಮ್ ಶಾಸ್ತ್ರ ಸಂಪ್ರದಾಯದಂತೆ ಮದುವೆ ಜರುಗಿತ್ತು. ಮದುವೆ ನಂತರ ಪ್ರಿಯಾಂಕಾ ತನ್ನ ಹೆಸರನ್ನು ಆಲಿಯಾ ಎಂದು ಬದಲಾಯಿಸಿಕೊಂಡರು. ಪ್ರಿಯಾಂಕಾ ಅವರ ಕುಟುಂಬದವರಿಗೆ ಈ ಮದುವೆ ಇಷ್ಟವಿರಲಿಲ್ಲ. ತಮ್ಮ ಮಗಳನ್ನ ಅಪಹರಿಸಿ ಮದುವೆಯಾಗಿದ್ದಾರೆ ಎಂದು ಆರೋಪಿಸಿ ಅವರು ಪೋಕ್ಸೋ ಕಾಯ್ದೆ ಅಡಿ ಎಫ್​ಐಆರ್ ದಾಖಲಿಸಿದ್ದರು. ಈ ಎಫ್​ಐಆರ್ ಅನ್ನು ರದ್ದುಗೊಳಿಸಿ ಅವರಿಗೆ ಭದ್ರತೆ ಒದಗಿಸಬೇಕೆಂದು ಕೋರಿ ಸಲಾಮತ್ ಅನ್ಸಾರಿ, ಪ್ರಿಯಾಂಕಾ ಖರ್ವರ್ ಹಾಗೂ ಇತರ ಇಬ್ಬರ ಪರವಾಗಿ ಹೈಕೋರ್ಟ್​ನಲ್ಲಿ ಅರ್ಜಿ ಹಾಕಲಾಗಿತ್ತು.

  ಈ ಅರ್ಜಿಯ ವಿಚಾರೆ ನಡೆಸಿದ ನ್ಯಾಯಪೀಠ, ಸಲಾಮತ್ ಮತ್ತು ಪ್ರಿಯಾಂಕಾ ಅವರ ವಯಸ್ಸನ್ನ ಪರಿಶೀಲಿಸಿತು. ಇಬ್ಬರೂ ಪ್ರಾಪ್ತ ವಯಸ್ಸಿಗೆ ಬಂದಿರುವುದರಿಂದ ಎಫ್​ಐಆರ್​ನಲ್ಲಿ ಯಾವುದೇ ಹುರುಳಿಲ್ಲ ಎಂಬ ನಿಲುವಿಗೆ ಬಂದಿದೆ. ಈ ಪ್ರಕರಣವನ್ನು ಪೋಕ್ಸೋ ಕಾಯ್ದೆ ಅಡಿ ದಾಖಲಿಸಲು ಆಗುವುದಿಲ್ಲ ಎಂದು ಹೇಳಿದ ಉಚ್ಚ ನ್ಯಾಯಾಲಯ, ಎಫ್​ಐಆರ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

  ಇದನ್ನೂ ಓದಿ: Nusrat Jahan - ಪ್ರೀತಿಗೆ ಲವ್ ಜಿಹಾದ್ ಬಣ್ಣ ಬಳಿಯುವುದು ಸರಿಯಲ್ಲ: ನುಸ್ರತ್ ಜಹಾನ್

  ಇನ್ನು, ತಮ್ಮ ಮಗಳನ್ನ ಭೇಟಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ತಂದೆ ಮಾಡಿಕೊಂಡ ಮನವಿಯನ್ನು ಕೋರ್ಟ್ ಮಾನ್ಯ ಮಾಡಿತು. ಪ್ರಿಯಾಂಕ ಖರ್ವರ್ ಅವರು ಯಾರನ್ನ ಬೇಕಾದರೂ ಭೇಟಿ ಮಾಡಲು ಸ್ವತಂತ್ರರು. ತನ್ನ ಕುಟುಂಬದವರ ಜೊತೆ ಆಕೆ ಸನ್ನಡತೆ ತೋರಬೇಕು ಎಂದು ನ್ಯಾಯಾಧೀಶರು ಹೇಳಿದರು.

  ಇದೇ ವೇಳೆ, ಪ್ರಿಯಾಂಕಾ ತಂದೆ ಲವ್ ಜಿಹಾದ್ ಕಾನೂನಿನ ಅಂಶವನ್ನು ಉಲ್ಲೇಖಿಸಿ, ಮದುವೆಗಾಗಿ ಮತಾಂತರ ಮಾಡುವುದನ್ನು ಕಾನೂನು ನಿಷೇಧಿಸಿದೆ. ಈ ಮದುವೆಗೆ ಕಾನೂನಿನ ಮಾನ್ಯತೆ ಇಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ| ಪಂಕಜ್ ನಖ್ವಿ ಮತ್ತು ನ್ಯಾ| ವಿವೇಕ್ ಅಗರ್ವಾಲ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ, ಒಬ್ಬ ವ್ಯಕ್ತಿಯ ಆಯ್ಕೆಯನ್ನು ನಿರಾಕರಿಸುವುದು ಆಯ್ಕೆ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆಯಾಗುತ್ತದೆ. ಪ್ರಿಯಾಂಕಾ ಖರ್ವರ್ ಮತ್ತು ಸಲಾಮತ್ ಅವರನ್ನು ನ್ಯಾಯಾಲಯ ಹಿಂದೂ, ಮುಸ್ಲಿಮ್ ಎಂದು ನೋಡುವುದಿಲ್ಲ. ಒಬ್ಬ ವ್ಯಕ್ತಿ ತನ್ನ ಆಯ್ಕೆಯ ಜೋಡಿ ಜೊತೆ ಶಾಂತಿಯುತವಾಗಿ ಬದುಕಲು ಸಂವಿಧಾನದ ಆರ್ಟಿಕಲ್ 21ರಲ್ಲಿ ಅವಕಾಶ ಇದೆ. ಇದಕ್ಕೆ ಅಡಚಣೆ ಮಾಡುವಂತಿಲ್ಲ ಎಂದು ತೀರ್ಪು ನೀಡಿತು.

  ನ್ಯಾಯಪೀಠ ಹೇಳಿರುವ ಈ ವೈಯಕ್ತಿಕ ಆಯ್ಕೆ ಸ್ವಾತಂತ್ರ್ಯದ ವಿಚಾರ ಸಲಿಂಗಿಗಳಿಗೂ ಅನ್ವಯ ಆಗುತ್ತದೆ.
  Published by:Vijayasarthy SN
  First published: