ಕೊಲ್ಕತ್ತಾ: ದೇಶಾದ್ಯಂತ ರಾಜಕೀಯ ವಲಯದಲ್ಲಿ ಸದ್ಯ ಕೇಳುತ್ತಿರುವ ಒಂದೇ ಹೆಸರು ಮಮತಾ ಬ್ಯಾನರ್ಜಿ. ಪ್ರಧಾನಿ ಮೋದಿ, ಅಮಿತ್ ಶಾ ಅಬ್ಬರದ ಪ್ರಚಾರದ ಎದುರು ದಿಗ್ವಿಜಯ ಸಾಧಿಸಿದ ದೀದಿ ಸತತ 3ನೇ ಬಾರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗದ್ದುಗೆಯೇರಲಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ಗೆರೆ ದಾಟಿಸಿ ಬೀಗುತ್ತಿರುವ ಮಮತಾ ಸ್ವಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಟಿಎಂಸಿ ಇಡೀ ರಾಜ್ಯದಲ್ಲಿ ದಿಗ್ವಿಜಯ ಸಾಧಿಸಿದ್ದರೂ ನಂದಿಗ್ರಾಮದ ಸೋಲು ದೀದಿಯನ್ನು ಕೆರಳಿಸಿದೆ. ನಿನ್ನೆ ಮತದಾನದ ವೇಳೆ ನಂದಿಗ್ರಾಮ್ದ ಚುನಾವಣಾ ಫಲಿತಾಂಶ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಒಮ್ಮೆ ಮಮತಾ ಗೆದ್ದಿದ್ದಾರೆ ಎಂದಿದ್ದವರು, ನಂತರ ಸುವೆಂದು ಅಧಿಕಾರಿ ಜಯಗಳಿದ್ದಾರೆ ಎಂದಿದ್ದರು. ಈ ಹಿನ್ನೆಲೆ ಇಡೀ ಫಲಿತಾಂಶದ ಸುತ್ತ ಅನುಮಾನಗಳ ಹುತ್ತ ಬೆಳೆದು ನಿಂತಿದೆ.
ತಮ್ಮ ಸೋಲಿನ ಬಗ್ಗೆ ಇಂದು ಮಾತನಾಡಿರುವ ಮಮತಾ ಬ್ಯಾನರ್ಜಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮತಎಣಿಗೆ ಗೊಂದಲ ಉಂಟಾಗಿತ್ತು, ನಾನೇನಾದರು ಮರುಎಣಿಕೆಗೆ ಮುಂದಾಗಿದ್ದರೆ ನನ್ನ ಪ್ರಾಣಕ್ಕೆ ಅಪಾಯವಿತ್ತು ಎಂದು ಚುನಾವಣಾ ಅಧಿಕಾರಿ ಬೇರೊಬ್ಬರ ಬಳಿ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ನನಗೆ ಒಬ್ಬರು ಎಸ್ಎಂಎಸ್ ಮಾಡಿದ್ದಾರೆ ಎಂದು ದೀದಿ ಹೇಳಿದ್ದಾರೆ. ಇನ್ನು ಮತಎಣಿಕೆ ಸಮಯದಲ್ಲಿ 4 ಗಂಟೆಗಳ ಕಾಲ ಸರ್ವರ್ ಬಂದ್ ಆಗಿತ್ತು. ಇವೆಲ್ಲಾ ಸಂಗತಿಗಳಿಂದ ಮತಎಣಿಕೆ ವೇಳೆ ಅಕ್ರಮ ನಡೆದಿದೆ ಎಂಬುವುದು ಸ್ಪಷ್ಟ ಎಂದು ದೀದಿ ಆರೋಪಿಸಿದ್ದಾರೆ.
ನಂದಿಗ್ರಾಮ್ ಕ್ಷೇತ್ರದ ಫಲಿತಾಂಶ ಹೊರ ಬಿದ್ದು, ಗವರ್ನರ್ ಕೂಡ ನನಗೆ ಶುಭಾಶಯ ತಿಳಿಸಿದ್ದರು. ಆದರೆ ಕೆಲವೇ ಗಂಟೆಗಳಲ್ಲಿ ಚುನಾವಣಾ ಫಲಿತಾಂಶ ಬದಲಾಗಿದೆ. ಫಲಿತಾಂಶ ಘೋಷಣೆ ಬಳಿಕ ಚುನಾವಣಾ ಆಯೋಗ ಫಲಿತಾಂಶವನ್ನು ಅದಲು-ಬದಲು ಮಾಡಿದೆ. ಈ ಬಗ್ಗೆ ನಾನು ಕಾನೂನು ಹೋರಾಟ ನಡೆಸಲಿದ್ದೇನೆ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.
ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ದೀದಿಯ ಹಳೆಯ ಶಿಷ್ಯ ಸುವೆಂದು ಅಧಿಕಾರಿ ನಂದಿಗ್ರಾಮ್ ಕ್ಷೇತ್ರದಲ್ಲಿ 1,956 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. ಹಲವು ಸುತ್ತುಗಳಲ್ಲಿ ನಡೆದ ನಂದಿಗ್ರಾಮ್ ಕ್ಷೇತ್ರದ ಮತ ಎಣಿಕೆ ಸಾಕಷ್ಟು ಗೊಂದಲಗಳಿಂದ ಕೂಡಿತ್ತು. ಮೊದಲಿಗೆ ಬಹುತೇಕ ಮಾಧ್ಯಮಗಳು ಮಮತಾ ಬ್ಯಾನರ್ಜಿ ಅವರು ಜಯ ಗಳಿಸಿದ್ದಾರೆ ಎಂದು ವರದಿ ಮಾಡಿದ್ದವು. ನಂತರ ಚುನಾವಣಾ ಆಯೋಗ ಸುವೆಂದು ಅಧಿಕಾರಿ ಜಯಗಳಿಸಿದ್ದಾರೆ ಎಂದು ಮಾಹಿತಿ ನೀಡಿತ್ತು. ಟಿಎಂಟಿ ಕೂಡಲೇ ಮರು ಎಣಿಕೆಗೆ ಆಗ್ರಹಿಸಿತ್ತು. ಈಗ ಫಲಿತಾಂಶದ ವಿರುದ್ಧ ಕೋರ್ಟ್ ಮೊರೆ ಹೋಗಲು ಮಮತಾ ಬ್ಯಾನರ್ಜಿ ಅವರು ನಿರ್ಧರಿಸಿದ್ದಾರೆ. ಇನ್ನು ಚುನಾವಣಾ ಆಯೋಗದ ಮಾಹಿತಿ ಪ್ರಕಾರ ನಂದಿಗ್ರಾಮ್ ಕ್ಷೇತ್ರದಲ್ಲಿ ದೀದಿ 1,08,808 ಮತಗಳನ್ನು ಗಳಿಸಿದ್ದರೆ, ಸುವೆಂದು ಅಧಿಕಾರಿ 1,10,764 ಮತಗಳನ್ನು ಪಡೆದು ಗೆದ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ