ಚಂಡೀಗಢ: ಸಹೋದ್ಯೋಗಿಯೊಬ್ಬರ ಅಕ್ರಮ ಬಂಧನಕ್ಕೆ ಸಂಬಂಧಿಸಿದಂತೆ ಪಂಜಾಬ್ ಸಿವಿಲ್ ಸರ್ವಿಸ್ ಅಧಿಕಾರಿಗಳು (Punjab Civil Service officers) ಕೆಲಸಕ್ಕೆ ಹಾಜರಾಗದೇ ಪ್ರತಿಭಟಿಸುತ್ತಿದ್ದಾರೆ. ಈ ನಡುವೆ ಇಂದು ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲಾ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗದಿದ್ದರೆ ಅಮಾನತುಗೊಳಿಸಲಾಗುತ್ತದೆ (suspend) ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಚ್ಚರಿಕೆ ನೀಡಿದ್ದಾರೆ. ಇಂತಹ ಮುಷ್ಕರಗಳು ಬ್ಲ್ಯಾಕ್ಮೇಲಿಂಗ್ (Blackmailing) ಮತ್ತು ಪ್ರಕರಣವನ್ನು ತಿರುಚುವಂತಹದ್ದಾಗಿದೆ ಎಂದು ಕಿಡಿಕಾರಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಭಗವಂತ್ ಮಾನ್ (Bhagwant Mann) ಅವರು, ಕೆಲವು ಅಧಿಕಾರಿಗಳು (PCS) ಮುಷ್ಕರದ ನೆಪದಲ್ಲಿ ಕರ್ತವ್ಯಕ್ಕೆ ಹಾಜರಾಗದೇ ಇರುವುದು ನನ್ನ ಗಮನಕ್ಕೆ ಬಂದಿದೆ. ಭ್ರಷ್ಟ ಅಧಿಕಾರಿ (Corrupt Officer) ವಿರುದ್ಧ ಸರ್ಕಾರ ಕೈಗೊಂಡಿರುವ ಕಠಿಣ ಕ್ರಮವನ್ನು ವಿರೋಧಿಸಿ ಈ ಪ್ರತಿಭಟಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಸರ್ಕಾರವು ಭ್ರಷ್ಟಾಚಾರ ಶೂನ್ಯ ಸಹಿಷ್ಣುತೆ ಹೊಂದಿದೆ
ಈ ಸರ್ಕಾರವು ಭ್ರಷ್ಟಾಚಾರವನ್ನು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂಬುದು ಎಲ್ಲರಿಗೂ ಸ್ಪಷ್ಟವಾಗಿ ತಿಳಿದಿರಲಿ. ಇಂತಹ ಮುಷ್ಕರವು ಬ್ಲ್ಯಾಕ್ಮೇಲಿಂಗ್ ಮತ್ತು ಪ್ರಕರಣವನ್ನು ತಿರುಚುವುದಕ್ಕೆ ಸಮಾನವಾಗಿದೆ. ಯಾವುದೇ ಜವಾಬ್ದಾರಿಯುತ ಸರ್ಕಾರವು ಇದನ್ನು ಸಹಿಸುವುದಿಲ್ಲ. ಆದ್ದರಿಂದ, ಮುಷ್ಕರವನ್ನು ಕಾನೂನುಬಾಹಿರವೆಂದು ಘೋಷಿಸಲು ಈ ಮೂಲಕ ನಿಮಗೆ ಸೂಚಿಸಲಾಗಿದೆ.
ਭ੍ਵਿਸ਼ਟਾਚਾਰ ਦੇ ਮਾਮਲੇ ਚ ਕੋਈ ਵੀ ਬਖਸ਼ਿਆ ਨਹੀਂ ਜਾਵੇਗਾ ਭਾਵੇ ਮੰਤਰੀ ਹੋਵੇ ,ਸੰਤਰੀ ਹੋਵੇ ਜਾਂ ਮੇਰਾ ਕੋਈ ਸਕਾ-ਸੰਬੰਧੀ…ਜਨਤਾ ਦੇ ਇੱਕ-ਇੱਕ ਪੈਸੇ ਦਾ ਹਿਸਾਬ ਲਿਆ ਜਾਵੇਗਾ.. pic.twitter.com/bzc3aYGO9N
— Bhagwant Mann (@BhagwantMann) January 11, 2023
ಮಧ್ಯಾಹ್ನ 2 ಗಂಟೆ ಒಳಗೆ ಕೆಲಸಕ್ಕೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚನೆ
ಇಂದು ಅಂದರೆ 11.01.2023 ರಂದು ಮಧ್ಯಾಹ್ನ 2 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗದೇ ಇರುವ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತದೆ. ಮಧ್ಯಾಹ್ನ 2 ಗಂಟೆಯೊಳಗೆ ಕೆಲಸಕ್ಕೆ ಬರದೇ ಇದ್ದಲ್ಲಿ, ಅವರ ಅನುಪಸ್ಥಿತಿಯ ಅವಧಿಯನ್ನು ಡೈಸ್ ನಾನ್ ಎಂದು ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ.
ಸೋಮವಾರದಿಂದ ಕೆಲಸಕ್ಕೆ ಮಾಸ್ ಬಂಕ್ ಹಾಕಿ ಅಧಿಕಾರಿಗಳಿಂದ ಪ್ರತಿಭಟನೆ
ರಾಜ್ಯ ವಿಜಿಲೆನ್ಸ್ ಬ್ಯೂರೋದಿಂದ ಲೂಧಿಯಾನದಲ್ಲಿ ಪಿಸಿಎಸ್ ಅಧಿಕಾರಿ ನರಿಂದರ್ ಸಿಂಗ್ ಧಲಿವಾಲ್ ಅವರನ್ನು ಬಂಧಿಸಲಾಗಿತ್ತು. ಇದನ್ನು ವಿರೋಧಿಸಿ ಪಂಜಾಬ್ ಸಿವಿಲ್ ಸರ್ವಿಸ್ ಅಧಿಕಾರಿಗಳು ಸೋಮವಾರದಿಂದ ಕೆಲಸಕ್ಕೆ ಸಾಮೂಹಿಕವಾಗಿ ರಜೆ ಹಾಕಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ರಾಜ್ಯದ ಆಡಳಿತ ಕಚೇರಿಗಳಲ್ಲಿನ ಸೇವೆಗಳಿಗೆ ಹೊಡೆತ ಬಿದ್ದ ಹಿನ್ನೆಲೆ ಭಗವಂತ್ ಮಾನ್ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.
ಶುಕ್ರವಾರ ನರಿಂದರ್ ಸಿಂಗ್ ಧಲಿವಾಲ್ರನ್ನು ಬಂಧಿಸಿದ್ದ ವಿಜಿಲೆನ್ಸ್ ಬ್ಯೂರೋ
ಲೂಧಿಯಾನದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ನಿಯೋಜಿತರಾಗಿರುವ ಧಲಿವಾಲ್ ಅಕ್ರಮವಾಗಿ ವಾಹನಗಳಿಗೆ ಚಲನ್ಗಳನ್ನು ನೀಡದೇ ಸಾಗಣೆದಾರರಿಂದ ಲಂಚ ಪಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಶುಕ್ರವಾರ ವಿಜಿಲೆನ್ಸ್ ಬ್ಯೂರೋ ಧಲಿವಾಲ್ ಬಂಧಿಸಿದೆ.
ಧಲಿವಾಲ್ರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಾರೆಂಬ ಆರೋಪ
ಇದೀಗ ಪಿಸಿಎಸ್ ಅಧಿಕಾರಿ ನರೀಂದರ್ ಸಿಂಗ್ ಧಲಿವಾಲ್ಯನ್ನು ಕಾನೂನುಬಾಹಿರವಾಗಿ, ತಪ್ಪಾಗಿ ಮತ್ತು ನಿರಂಕುಶವಾಗಿ ಮತ್ತು ಸರಿಯಾದ ಕಾರ್ಯವಿಧಾನವಿಲ್ಲದೇ ಬಂಧಿಸಲಾಗಿದೆ ಎಂದು ಪಿಸಿಎಸ್ ಅಧಿಕಾರಿಗಳ ಸಂಘ ಆರೋಪಿಸಿದೆ.
ನರೀಂದರ್ ಸಿಂಗ್ ಧಲಿವಾಲ್ ಯಾರು?
ಮೊಗಾದ ಮೂಲದ ನರೀಂದರ್ ಸಿಂಗ್ ಧಲಿವಾಲ್ ಅವರು 2014ನೇ ಬ್ಯಾಚ್ನ ಪಿಸಿಎಸ್ ಅಧಿಕಾರಿಯಾಗಿದ್ದು, ಅವರನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್ಟಿಎ), ಲುಧಿಯಾನ ಕಾರ್ಯದರ್ಶಿಯಾಗಿ ನಿಯೋಜಿಸಲಾಗಿತ್ತು. 40 ವರ್ಷದ ಧಲಿವಾಲ್ ಅವರು ಪಂಜಾಬಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದಾರೆ ಮತ್ತು 2014ರ ಫೆಬ್ರವರಿ 5 ರಂದು ಪಿಸಿಎಸ್ ಅಧಿಕಾರಿಯಾಗಿ ನೇಮಕಗೊಂಡರು. ಇದಕ್ಕೂ ಮೊದಲು ಧಲಿವಾಲ್ ಅವರು ಜಾಗರಾನ್ನಲ್ಲಿ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಆಗಿಯೂ ನಿಯೋಜನೆಗೊಂಡಿದ್ದರು.
ಇದನ್ನೂ ಓದಿ: Bhagwant Mann: ಕುಡಿದು ವಿಮಾನ ಏರಿದರೇ ಪಂಜಾಬ್ ಸಿಎಂ ಭಗವಂತ್ ಮನ್?
ಜನವರಿ 6 ರಂದು ಲುಧಿಯಾನಾ ಜಿಲ್ಲೆಯಲ್ಲಿ ಸಾರಿಗೆದಾರರಿಂದ ಲಂಚವಾಗಿ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ನರೀಂದರ್ ಸಿಂಗ್ ಧಲಿವಾಲ್ ಅವರನ್ನು ವಿಜಿಲೆನ್ಸ್ ಬ್ಯೂರೋ ಬಂಧಿಸಿತ್ತು. ಭ್ರಷ್ಟಾಚಾರ ವಿರೋಧಿ ಸಹಾಯವಾಣಿಗೆ ಕರೆ ಮಾಡಿ ಸತ್ನಾಮ್ ಸಿಂಗ್ ಧವನ್ ಎಂಬವರು ಧಲಿವಾಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ. ಧಲಿವಾಲ್ ಅವರು ತಮ್ಮ ವಾಹನಗಳ ಚಲನ್ಗಳನ್ನು ನೀಡುವ ನೆಪದಲ್ಲಿ ಮಾಸಿಕ ಆಧಾರದ ಮೇಲೆ ಚಾಲಕರಿಂದ ಲಂಚ ಸ್ವೀಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ