ಆಂಧ್ರಪ್ರದೇಶ: ತಿರುಮಲ ತಿರುಪತಿ ದೇವಸ್ಥಾನ (Tirumala Tirupati Devasthanam) ವಿಶ್ವವಿಖ್ಯಾತ ಧಾರ್ಮಿಕ ಸಂಸ್ಥೆಯಾಗಿದೆ. ಬೆಟ್ಟದ ಮೇಲಿರುವ ಶ್ರೀವೆಂಕಟೇಶ್ವರ ಸ್ವಾಮಿಯ (Shree Venkateswara Swamy) ದರ್ಶನಕ್ಕೆ ದೇಶದ ವಿವಿಧ ರಾಜ್ಯಗಳಿಂದ ಹಾಗೂ ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ತಿರುಮಲಕ್ಕೆ ಬರುವ ಭಕ್ತರು (Devotees) ತಮ್ಮ ಕಾಣಿಕೆಯನ್ನು ದೇವಸ್ಥಾನದ ಹುಂಡಿಯಲ್ಲಿ ಹಾಕುತ್ತಾರೆ. ಪ್ರತಿಯೊಬ್ಬ ಭಕ್ತರು ತಮ್ಮ ಕೈಲಾದಷ್ಟು ಚಿನ್ನ, ಬೆಳ್ಳಿ, ನಗದನ್ನು ಹಾಕುತ್ತಾರೆ. ಕೆಲವರು ವಿದೇಶಿ ಕರೆನ್ಸಿಯನ್ನು ಹುಂಡಿಯಲ್ಲಿ ಹಾಕುತ್ತಾರೆ. ತಿರುಮಲ ತಿರುಪತಿ ದೇವಸ್ಥಾನದ ಹುಂಡಿಯಲ್ಲಿ ಕಾಣಿಕೆ ಸಲ್ಲಿಸಲು ಬಯಸುವ ದೂರದ ಪ್ರದೇಶಗಳಲ್ಲಿ ವಾಸಿಸುವ ಭಕ್ತರಿಗೆ ಇ-ಹುಂಡಿ ವ್ಯವಸ್ಥೆ ಮಾಡಲಾಗಿದೆ. ಆದರೆ ಟಿಟಿಡಿಗೆ ಇ- ಹುಂಡಿ ಕಾಣಿಕೆಯ ಹಣವೇ ಸಮಸ್ಯೆಯನ್ನು ಉಂಟುಮಾಡಿದೆ.
ದಾಖಲೆಯಿಲ್ಲದ ಕಾರಣ ಟಿಟಿಡಿ ಖಾತೆಗೆ ಜಮಾ ಆಗದ ವಿದೇಶಿ ಕರೆನ್ಸಿ
ಇ-ಹುಂಡಿ ವ್ಯವಸ್ಥೆ ಟಿಟಿಡಿ ಅಧಿಕೃತ ವೆಬ್‌ಸೈಟ್, ಟಿಟಿಡಿ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಇ-ಹುಂಡಿಯಲ್ಲಿ, ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಭಕ್ತರು 1 ರೂಪಾಯಿಯಿಂದ ಹಣವನ್ನು ವರ್ಗಾಯಿಸಬಹುದು. ಜೊತೆಗೆ ಸ್ಥಳೀಯ ಮತ್ತು ವಿದೇಶಿ ಕರೆನ್ಸಿಯಲ್ಲೂ ಕಳುಹಿಸಬಹುದು. ವಿವಿಧ ದೇಶಗಳ ಕರೆನ್ಸಿಗಳನ್ನು ನೇರವಾಗಿ ಇ-ಹುಂಡಿಗೆ ವರ್ಗಾಯಿಸಲಾಗುತ್ತದೆ. ಆದರೆ ಭಕ್ತರು ತಮ್ಮ ವಿವರಗಳನ್ನು ಟಿಟಿಡಿಗೆ ನೀಡದ ಕಾರಣ ಆ ಮೊತ್ತ ಟಿಟಿಡಿ ಖಾತೆಗೆ ಜಮಾ ಆಗಿಲ್ಲ.
26 ಕೋಟಿ ವಿದೇಶಿ ಕರೆನ್ಸಿ ಸಂಗ್ರಹ
ಈಗಾಗಲೆ ಈ ಹುಂಡಿಯಲ್ಲಿ 26 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. 11.50 ಕೋಟಿ ರೂಪಾಯಿ ಮೌಲ್ಯದ ಅಮೆ ರಿಕನ್ ಡಾಲರ್, 5.93 ಕೋಟಿ ರೂ ಮೌಲ್ಯದ ಮಲೇಷಿಯಾ ರಿಂಗಿಟ್ ಮತ್ತು 4.06 ಕೋಟಿ ರೂ ಮೌಲ್ಯದ ಸಿಂಗಾಪುರ ಡಾಲರ್ ಸಂಗ್ರಹವಾಗಿದೆ. ಆದರೆ ಮೂರು ವರ್ಷಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆ ಮೊತ್ತವನ್ನು ಟಿಟಿಡಿ ಖಾತೆಗೆ ಜಮಾ ಮಾಡದೆ ಅವಧಿ ವಿಸ್ತರಿಸುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: TTD Alert: ತಿರುಮಲದ ಭಕ್ತಾದಿಗಳೇ, ವಿಶೇಷ ಟಿಕೆಟ್ ಹೀಗೆ ಬುಕ್ ಮಾಡಿ
3 ಕೋಟಿ ರೂಪಾಯಿ ದಂಡ
ಹುಂಡಿ ಮತ್ತು ವಿದೇಶಿ ಕೊಡುಗೆಗಳನ್ನು ಸ್ವೀಕರಿಸುವಲ್ಲಿ ವಿದೇಶಿ ಕೊಡುಗೆ ಕಾಯ್ದೆಯ (ಎಫ್‌ಸಿಆರ್‌ಎ) ನಿಯಮಾವಳಿಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ)ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 3 ಕೋಟಿ ರೂಪಾಯಿ ದಂಡ ವಿಧಿಸಿದೆ. ಮೊದಲು ಆರ್‌ಬಿಐ ಟಿಟಿಡಿಗೆ ನಿಯಮ ಉಲ್ಲಂಘನೆ ಮಾಡಿರುವ ಕಾರಣಕ್ಕೆ 10 ಕೋಟಿ ರೂಪಾಯಿ ದಂಡ ವಿಧಿಸಿತ್ತು. ಆದರೆ, ಎಫ್‌ಸಿಆರ್‌ಎ ನಿಯಂತ್ರಣ ಮಂಡಳಿ ಮತ್ತು ದೇವಾಲಯದ ಟ್ರಸ್ಟ್ ನಡುವೆ ಮಾತುಕತೆ, ಚೌಕಾಶಿ ನಡೆದ ಬಳಿಕ ದಂಡದ ಮೊತ್ತವನ್ನು 3 ಕೋಟಿ ರೂಪಾಯಿಗಳಿಗೆ ಇಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿವೆ.
ಲೋಪದೋಷಗಳಿಗಾಗಿ ದಂಡ ಪಾವತಿ
ವಿಶ್ವದಾದ್ಯಂತ ಇರುವ ಭಕ್ತರು ಸ್ವಯಂಪ್ರೇರಿತವಾಗಿ ನೀಡುವ ಕೊಡುಗೆ, ಕಾಣಿಕೆಗಳನ್ನು ಹೊರತುಪಡಿಸಿ, ವಿದೇಶದಿಂದ ಬರುವ ಕೊಡುಗೆಗಳನ್ನು ಪಡೆಯಲು, ಸ್ವೀಕರಿಸಲು ತಿರುಪತಿ ತಿರುಮಲ ದೇವಸ್ಥಾನಕ್ಕೆ ಯಾವುದೇ ಮಾರ್ಗಗಳು ಇಲ್ಲ ಎಂದು ಸಚಿವಾಲಯಕ್ಕೆ ತಿಳಿಸಿದ್ದೇವೆ ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾರೆಡ್ಡಿ ಹೇಳಿದ್ದಾರೆ.
ಹೀಗಿದ್ದರೂ, ದಂಡ ಪಾವತಿಸಿರುವುದನ್ನು ಟಿಟಿಡಿ ಆಡಳಿತ ಮಂಡಳಿ ಒಪ್ಪಿದ್ದು, ವಿದೇಶಿ ದೇಣಿಗೆ ಸ್ವೀಕರಿಸುವ ಸಂದರ್ಭದಲ್ಲಿ ಆಗಿರುವ ಕೆಲವೊಂದು ಲೋಪದೋಷಗಳಿಗಾಗಿ ಈ ದಂಡ ಪಾವತಿಸಲಾಗಿದೆ ಎಂದು ಹೇಳಿದ್ದಾರೆ. ವಿದೇಶದಿಂದ ಟಿಟಿಡಿಗೆ ಭಕ್ತರು ನೀಡುವ ಕೊಡುಗೆಗಳನ್ನು ಭಾರತೀಯ ಕರೆನ್ಸಿಗೆ ಪರಿವರ್ತನೆ ಮಾಡುವುದರಲ್ಲಿ ವ್ಯತ್ಯಾಸವಾಗಿದೆ. ಈ ಮೊತ್ತವನ್ನು ಖರ್ಚು ಮಾಡುವುದಕ್ಕೂ ಕೆಲವು ನಿಯಮ ಮತ್ತು ನಿಬಂಧನೆಗಳಿವೆ. ಖರ್ಚು ಮಾಡಿದ ಮೊತ್ತ ಅತ್ಯಲ್ಪವಾಗಿದ್ದರೂ ವಿದೇಶಿ ಕೊಡುಗೆಗಳನ್ನು ಖರ್ಚು ಮಾಡಿದ ರೀತಿಗೆ ಎಂಎಚ್‌ಎ ಆಕ್ಷೇಪ ವ್ಯಕ್ತಪಡಿಸಿ ಎಂದು ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ:Tirumala: ಭಕ್ತರ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ ಮಾಡಿದ ಟಿಟಿಡಿ
ಮೂರು ವರ್ಷಗಳಿಂದ ಎಫ್‌ಸಿಆರ್‌ಎ ಪರವಾನಗಿ ಸ್ಥಗಿತ
ಟಿಟಿಡಿಯ ಎಫ್‌ಸಿಆರ್‌ಎ ಪರವಾನಗಿ 2018ರಲ್ಲಿ ಸ್ಥಗಿತಗೊಂಡಿದ್ದು, ಇದನ್ನು ಇನ್ನೂ ನವೀಕರಿಸದ ಕಾರಣ ಟಿಟಿಡಿ ಮಂಡಳಿಯು ತನ್ನ ಬ್ಯಾಂಕ್ ಖಾತೆಗಳಿಗೆ ವಿದೇಶಿ ಕರೆನ್ಸಿಯನ್ನು ಜಮಾ ಮಾಡುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ನವೀಕರಣವನ್ನು ಟಿಟಿಡಿ ವಿಳಂಬ ಮಾಡಿರುವುದೇ ತೊಂದರೆಗೆ ಕಾರಣ ಎಂದು ವರದಿಗಳು ತಿಳಿಸಿವೆ. ಇನ್ನು ಆರ್‌ಬಿಐ ವಿದಿಸಿರುವ 3 ಕೋಟಿ ರೂಪಾಯಿ ದಂಡವನ್ನು ಟಿಟಿಡಿ 2 ಕಂತುಗಳಲ್ಲಿ ಪಾವತಿಸಿದೆ ಎಂದು ಸುಬ್ಬಾ ರೆಡ್ಡಿ ಬಹಿರಂಗಪಡಿಸಿದ್ದಾರೆ. ಎಫ್‌ಸಿಆರ್‌ಎ ಪರವಾನಗಿಯನ್ನು ನವೀಕರಿಸಲು ಟಿಟಿಡಿ ಆರ್‌ಬಿಐಗೆ ಮನವಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ