ಮೀಸಲಾತಿ ಒಂದು ಮೂಲಭೂತ ಹಕ್ಕಲ್ಲ: ತಮಿಳುನಾಡಿನ ವಿಪಕ್ಷಗಳಿಗೆ ಸುಪ್ರೀಂ ಕೋರ್ಟ್ ಮನವರಿಕೆ

ತಮಿಳುನಾಡಿನಲ್ಲಿ ಎಸ್ಸಿ, ಎಸ್ಟಿ ಮತ್ತು ಓಬಿಸಿಗೆ ಶೇ. 69ರಷ್ಟು ಮೀಸಲಾತಿ ಇದೆ. ಅದರಲ್ಲಿ ಓಬಿಸಿಗೆ ಶೇ. 50 ಮೀಸಲಾತಿ ಇದೆ. ಆದರೆ, ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟಾರೆ ಇರುವ ಸೀಟುಗಳ ಪೈಕಿ ಶೇ. 50 ಪಾಲು ಓಬಿಸಿಗೆ ದಕ್ಕಬೇಕು ಎಂಬ ಅರ್ಜಿದಾರರ ವಾದವನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಲಿಲ್ಲ.

ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

 • Share this:
  ನವದೆಹಲಿ(ಜೂನ್ 11): ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ತಮಿಳುನಾಡಿನ ವೈದ್ಯಕೀಯ ಕಾಲೇಜುಗಳಲ್ಲಿ ಓಬಿಸಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವ ವಿಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯ ಈ ನಿಷ್ಕರ್ಷೆ ಮಾಡಿದೆ. ಮೀಸಲಾತಿ ಹಕ್ಕು ಮೂಲಭೂತ ಹಕ್ಕು ಎಂದು ಯಾರೂ ಕೂಡ ಪ್ರತಿಪಾದಿಸಲು ಸಾಧ್ಯವಿಲ್ಲ. ಮೀಸಲಾತಿ ಸೌಲಭ್ಯ ನಿರಾಕರಿಸಿದಾಗ ಅದು ಸಂವಿಧಾನಿಕ ಹಕ್ಕಿಗೆ ಚ್ಯುತಿ ಎಂದು ಭಾವಿಸಬೇಕಿಲ್ಲ ಎಂದು ನ್ಯಾ| ಎಲ್ ನಾಗೇಶ್ವರ ರಾವ್ ನೇತೃತ್ವದ ಸುಪ್ರೀಂ ನ್ಯಾಯಪೀಠ ಹೇಳಿದೆ.

  2020-21ರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣಕ್ಕೆ ಓಬಿಸಿ ವರ್ಗದವರಿಗೆ ಶೇ. 50ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ತಮಿಳುನಾಡಿನ ವಿಪಕ್ಷಗಳಾದ ಡಿಎಂಕೆ ಮತ್ತು ಸಿಪಿಐನ ಮುಖಂಡರು ನ್ಯಾಯಾಲಯದಲ್ಲಿ ಅರ್ಜಿ ಗುಜರಾಯಿಸಿದ್ದರು.

  ತಮಿಳುನಾಡಿನಲ್ಲಿ ಎಸ್​ಸಿ, ಎಸ್​ಟಿ ಮತ್ತು ಓಬಿಸಿಗೆ ಶೇ. 69ರಷ್ಟು ಮೀಸಲಾತಿ ಇದೆ. ಅದರಲ್ಲಿ ಓಬಿಸಿಗೆ ಶೇ. 50 ಮೀಸಲಾತಿ ಇದೆ. ಆದರೆ, ಅರ್ಜಿದಾರರು ತಮಿಳುನಾಡಿನ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟಾರೆ ಇರುವ ಸೀಟುಗಳ ಪೈಕಿ ಶೇ. 50 ಪಾಲು ಓಬಿಸಿಗೆ ದಕ್ಕಬೇಕು. ಅದರ ಪ್ರಕಾರ ಸೀಟು ಕೊಡದಿದ್ದರೆ ಮೂಲಭೂತ ಹಕ್ಕಿನ ಉಲ್ಲಂಘನೆಯಾದಂತಾಗುತ್ತದೆ ಎಂದು ಆರ್ಟಿಕಲ್ 32 ಅನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್​ನಲ್ಲಿ ವಾದಿಸಿದ್ದರು.

  ಇದನ್ನೂ ಓದಿ: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿದೆ: ಟ್ರಂಪ್ ಸರ್ಕಾರದ ಉನ್ನತ ಅಧಿಕಾರಿ ಆತಂಕ

  ಆದರೆ, ಸರ್ವೋಚ್ಚ ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಲಿಲ್ಲ. “ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ? ಸಂವಿಧಾನದ ಆರ್ಟಿಕಲ್ 32 ಮೂಲಭೂತ ಹಕ್ಕಿನ ಉಲ್ಲಂಘನೆಗೆ ಮಾತ್ರ ಸಂಬಂಧಿಸಿದ್ದಾಗಿದೆ. ನೀವು ತಮಿಳುನಾಡಿನ ಜನರ ಮೂಲಭೂತ ಹಕ್ಕುಗಳ ಬಗ್ಗೆ ಆಸಕ್ತರಾಗಿದ್ದೀರೆಂದು ನಾವು ಭಾವಿಸಿದ್ದೇವೆ. ಮೀಸಲಾತಿ ಎಂಬುದು ಮೂಲಭೂತ ಹಕ್ಕಲ್ಲ” ಎಂದು ನ್ಯಾಯಪೀಠ ಹೇಳಿತು.  ತಮಿಳುನಾಡು ಸರ್ಕಾರ ಮೀಸಲಾತಿಯ ಕಾನೂನನ್ನ ಉಲ್ಲಂಘಿಸಿದೆ ಎಂದು ಅರ್ಜಿದಾರರು ವಾದಿಸಿದಾಗ ಸರ್ವೋಚ್ಚ ನ್ಯಾಯಾಲಯವು ಮದ್ರಾಸ್ ಹೈಕೋರ್ಟ್​ನಲ್ಲಿ ಪೆಟಿಶನ್ ಫೈಲ್ ಮಾಡುವಂತೆ ಸೂಚಿಸಿತು.

  ಈ ಹಿಂದಿನ ಕೆಲ ಪ್ರಕರಣಗಳಲ್ಲೂ ಸುಪ್ರೀಂ ಕೋರ್ಟ್ ಮೀಸಲಾತಿ ಮೂಲಭೂತ ಹಕ್ಕಲ್ಲ ಎಂಬ ವಿಚಾರವನ್ನು ಎತ್ತಿಹಿಡಿದಿತ್ತು.
  First published: