ಅಮ್ಮನನ್ನು ತಬ್ಬಿಕೊಂಡಿದ್ದ ಮಕ್ಕಳು ಅಲ್ಲೇ ಸಮಾಧಿಯಾಗಿದ್ದರು: ದೇವರನಾಡಿನಲ್ಲಿ ಮಹಾಪ್ರವಾಹ

news18
Updated:August 14, 2018, 9:33 AM IST
ಅಮ್ಮನನ್ನು ತಬ್ಬಿಕೊಂಡಿದ್ದ ಮಕ್ಕಳು ಅಲ್ಲೇ ಸಮಾಧಿಯಾಗಿದ್ದರು: ದೇವರನಾಡಿನಲ್ಲಿ ಮಹಾಪ್ರವಾಹ
news18
Updated: August 14, 2018, 9:33 AM IST
ನ್ಯೂಸ್​18 ಕನ್ನಡ

ಕೊಚ್ಚಿ (ಆ. 14): ಎಲ್ಲಿ ಕಣ್ಣು ಹಾಯಿಸಿದರೂ ನೀರು. ನೀರಿನ ಪ್ರವಾಹಕ್ಕೆ ಮುರಿದು ಬಿದ್ದ ಮನೆಯ ಮಣ್ಣಿನಡಿ ತಾಯಿ-ಮಕ್ಕಳ ದೇಹ ಸಿಲುಕಿತ್ತು. ತಮ್ಮ ಅಮ್ಮನನ್ನು ತಬ್ಬಿಹಿಡಿದುಕೊಂಡೇ ಪ್ರಾಣಬಿಟ್ಟ ಆ ಚಿತ್ರಣ ಎಂಥವರ ಮನಸನ್ನೂ ಕರಗಿಸುವಂತಿತ್ತು.

ಕೇರಳದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಆಗಿರುವ ಅನಾಹುತಗಳು ಒಂದೆರಡಲ್ಲ. ಇಡುಕ್ಕಿ ಅಣೆಕಟ್ಟೆ ಸೇರಿದಂತೆ ಕೆಲ ಪ್ರಮುಖ ಜಲಾಶಯಗಳ ಗೇಟುಗಳನ್ನು ತೆರೆದ ನಂತರ ಪ್ರವಾಹದ ಭೀತಿ ಎದುರಾಗಿದ್ದು, ಎರಡು ದಿನಗಳ ಹಿಂದಷ್ಟೇ ರಕ್ಷಣಾ ಸಿಬ್ಬಂದಿಯೊಬ್ಬರು ಪ್ರಾಣದ ಹಂಗುತೊರೆದು ಮಗುವನ್ನೆತ್ತಿಕೊಂಡು ಸೇತುವೆಯ ಮೇಲೆ ಓಡಿದ ವಿಡಿಯೋ ಹೊರಬಿದ್ದಿತ್ತು.

ಕೇರಳದ ಬಹುಭಾಗದಲ್ಲಿ ನೀರು ತುಂಬಿದ್ದು, ಮಲಪ್ಪುರಂನ ವೇಲಾಯುಧನ್​ ಕುಟುಂಬ ಈ ಮಳೆಗೆ ಬಲಿಯಾಗಿದೆ. ರಾತ್ರಿ ಉಂಟಾದ ಭೂಕುಸಿತದಿಂದ ಈ ಕುಟುಂಬದ 6 ಜನರು ಮ ಮಣ್ಣಿನ ಅಡಿಯಲ್ಲಿ ಸಮಾಧಿಯಾಗಿದ್ದಾರೆ.

ವೇಲಾಯುಧನ್​ ಅವರ ಅಣ್ಣ, ಅಮ್ಮ, ಹೆಂಡತಿ ಮತ್ತು ಇಬ್ಬರು ಮಕ್ಕಳು ಹಾಗೂ ಸಂಬಂಧಿಕರು ಮಲಪ್ಪುರಂನಲ್ಲಿ ನುಗ್ಗಿದ ಪ್ರವಾಹದ ಕಾರಣದಿಂದ ಉಂಟಾದ ಭೂಕುಸಿತದಲ್ಲಿ ಸಾವನ್ನಪ್ಪಿದ್ದಾರೆ. ಆ ಕುಟುಂಬದಲ್ಲಿ ಜೀವಂತವಾಗಿ ಉಳಿದಿರುವುದು ವೇಲಾಯುಧನ್​ ಮಾತ್ರ. ಆತನ ಕಣ್ಣಮುಂದೆಯೇ ಇಡೀ ಕುಟುಂಬ ಸಾವಿಗೀಡಾಗಿದ್ದನ್ನು ನೋಡಿ ಆತನಿನ್ನೂ ಆಘಾತದಲ್ಲಿದ್ದಾನೆ.

'ಆ ದಿನ ನನ್ನ ಹೆಂಡತಿ ಮಕ್ಕಳು ಮನೆಯಲ್ಲಿಯೇ ಇದ್ದರು. ನಾನು ಕೆಲಸ ಮುಗಿಸಿ ವಾಪಾಸ್​ ಬರುವಾಗ ನನ್ನ ಮನೆಯ ಬಳಿ ಇದ್ದ ಮನೆಗಳಿಂದ ಎಲ್ಲರೂ ಹೊರಗೆ ಓಡಿಬರುತ್ತಿದ್ದರು. ನನ್ನ ಅಮ್ಮ, ಹೆಂಡತಿ, ಅಣ್ಣ, ಮಕ್ಕಳ್ಯಾರೂ ಕಾಣಲಿಲ್ಲ. ಎಲ್ಲ ಕಡೆ ಹುಡುಕಿದ ನಂತರ ರಾತ್ರಿ ಮನೆಯ ಬಳಿ ಹೋಗಿ ಹುಡುಕಾಡಿದೆ. ಆದರೂ ಯಾರೂ ಕಾಣಲಿಲ್ಲ. ಇನ್ನೂ ಮಳೆ ಸುರಿಯುತ್ತಲೇ ಇತ್ತು. ಮಣ್ಣು ಕುಸಿಯುತ್ತಲೇ ಇತ್ತು. ಅಕ್ಕಪಕ್ಕದವರೆಲ್ಲ ಅಲ್ಲಿರುವುದು ಸುರಕ್ಷಿತವಲ್ಲ ಅಂತ ಹೇಳಿ ನನ್ನನ್ನು ಕರೆದುಕೊಂಡು ಹೋದರು.'

'ಮಾರನೇ ದಿನ ಮತ್ತೆ ಮನೆಯ ಬಳಿ ಹೋಗಿ ಎಲ್ಲರೂ ಹುಡುಕಾಡಿದೆವು. ಅಲ್ಲಿ ನನ್ನಮ್ಮ ಮಣ್ಣಿ ಅಡಿಯಲ್ಲಿ ನಿರ್ಜೀವವಾಗಿ ಬಿದ್ದಿದ್ದರು. ಅದೇ ಜಾಗದಲ್ಲಿ ಹೆಂಡತಿ-ಮಕ್ಕಳ ದೇಹ ಕೂಡ ಇತ್ತು. ಆಮೇಲೇನೂ ನನಗೆ ನೆನಪಿಲ್ಲ, ನಾನಲ್ಲೇ ಕುಸಿದುಬಿದ್ದೆ' ಎಂದು ವೇಲಾಯುಧನ್​ ನೆನಪಿಸಿಕೊಂಡಿದ್ದಾರೆ.
First published:August 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ