• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ; ಮುಂಬೈನಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ; ಮುಂಬೈನಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ

ಅರ್ನಬ್ ಗೋಸ್ವಾಮಿ

ಅರ್ನಬ್ ಗೋಸ್ವಾಮಿ

Arnab Goswami Arrest: 2018ರ ಮೇ ತಿಂಗಳಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಇಂದು ಬೆಳಗ್ಗೆ ಬಂಧಿಸಲಾಗಿದೆ.

  • Share this:

ಮುಂಬೈ (ನ. 4): 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್​ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪದಲ್ಲಿ ಇಂದು ಬೆಳಗ್ಗೆ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಮುಂಬೈನಲ್ಲಿರುವ ಅರ್ನಬ್ ಗೋಸ್ವಾಮಿ ಮನೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿ, ಕರೆದೊಯ್ದಿದ್ದಾರೆ. ಪೊಲೀಸರೊಂದಿಗೆ ತೆರಳಲು ನಿರಾಕರಿಸಿದ ಅರ್ನಬ್ ಗೋಸ್ವಾಮಿ ಅವರನ್ನು ಬಲವಂತವಾಗಿ ಎಳೆದೊಯ್ಯಲಾಗಿದೆ.


ಬಂಧನದ ವೇಳೆ ಅರ್ನಬ್ ಗೋಸ್ವಾಮಿ ಅವರ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ಮನೆಯಿಂದ ಎಳೆದುಕೊಂಡು ಹೋಗಲಾಗಿದೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ. ಈ ವೇಳೆ ಅರ್ನಬ್ ಗೋಸ್ವಾಮಿ ಅವರ ಹೆಂಡತಿ, ಮಗ, ಅತ್ತೆ, ಮಾವನ ಮೇಲೂ ದೈಹಿಕವಾಗಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. 2018ರ ಮೇ ತಿಂಗಳಲ್ಲಿ 53 ವರ್ಷದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ ನೋಟ್ ಬರೆದಿಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಸಾವನ್ನಪ್ಪಿರುವುದು ಗೊತ್ತಾಗುತ್ತಿದ್ದಂತೆ ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿತ್ತು.


2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕೇಸನ್ನು 2019ರಲ್ಲಿ ರಾಯಘಡ ಪೊಲೀಸರು ಕ್ಲೋಸ್ ಮಾಡಿದ್ದರು. ಆದರೆ, ಅನ್ವಯ್ ನಾಯಕ್ ಅವರ ಪುತ್ರಿ ಅದ್ನಯ ನಾಯಕ್ ನೀಡಿದ್ದ ಹೊಸ ದೂರಿಗೆ ಸಂಬಂಧಪಟ್ಟಂತೆ ಪ್ರಕರಣದ ಮರು ತನಿಖೆ ಮಾಡಲಾಗುವುದು ಎಂದು ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಘೋಷಿಸಿದ್ದರು.ಅರ್ನಬ್ ಗೋಸ್ವಾಮಿ ವಿರುದ್ಧ ವಿನಾಕಾರಣ ಮಹಾರಾಷ್ಟ್ರ ಸರ್ಕಾರ ದ್ವೇಷ ಸಾಧಿಸುತ್ತಿದೆ. ಅವರ ವಾಕ್​ ಸ್ವಾತಂತ್ರ್ಯದ ಹರಣವಾಗಿದೆ. ಮಾಧ್ಯಮ ಸಂಸ್ಥೆಗಳು, ಸಂಪಾದಕರು, ವರದಿಗಾರರು ಅರ್ನಬ್ ಗೋಸ್ವಾಮಿ ಬಂಧನ ವಿಷಯದಲ್ಲಿ ಧ್ವನಿಯೆತ್ತುತ್ತಿಲ್ಲ. ಈ ಮೂಲಕ ಅವರು ಕೂಡ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತು ಪೊಲೀಸರಿಗೆ ಬೆಂಬಲ ನೀಡುತ್ತಿದ್ದಾರೆ. ಈ ಅನ್ಯಾಯವನ್ನು ಖಂಡಿಸದಿದ್ದರೆ ಮುಂದೆ ನೀವು ಕೂಡ ಬೆಲೆ ತೆರಬೇಕಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್​ ಸಂತೋಷ್ ಟ್ವೀಟ್ ಮೂಲಕ ಶಿವಸೇನೆ ಮತ್ತು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Sushma Chakre
First published: