• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ರಿಪಬ್ಲಿಕ್​ ಟಿವಿಯ ಅರ್ನಾಬ್​ ಗೋಸ್ವಾಮಿ ಬಂಧನ; ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ

ರಿಪಬ್ಲಿಕ್​ ಟಿವಿಯ ಅರ್ನಾಬ್​ ಗೋಸ್ವಾಮಿ ಬಂಧನ; ಸಾಮಾಜಿಕ ಜಾಲತಾಣಗಳಲ್ಲಿ ಗರಿಗೆದರಿದ ಪರ-ವಿರೋಧ ಚರ್ಚೆ

ಅರ್ನಾಬ್ ಗೋಸ್ವಾಮಿ.

ಅರ್ನಾಬ್ ಗೋಸ್ವಾಮಿ.

ಹತ್ರಾಸ್ ಘಟನೆಯನ್ನು ವರದಿ ಮಾಡಲು ಹೋಗಿದ್ದಕ್ಕೆ ಕರಾಳ ಗೂಂಡಾ ಕಾಯ್ದೆಯ ಅಡಿಯಲ್ಲಿ ಕೇರಳ ಮೂಲದ ಪತ್ರಕರ್ತನನ್ನು ಬಂಧಿಸಿದಾಗ ಅಮಿತ್ ಶಾ ಮಾತನಾಡಿದ್ದರೇ? ಅರ್ನಾಬ್ ಅರೆಸ್ಟ್‌ ಆಗಿರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿಯೇ ಹೊರತು ತನ್ನ ಪತ್ರಿಕೋದ್ಯಮದ ಕಾರ್ಯಕ್ಕಲ್ಲ ಎಂದು ಭಾರತೀಯ ಕಾಂಗ್ರೆಸ್‌ನ ವಕ್ತಾರರಾದ ಶಾಮಾ ಮೊಹಮ್ಮದ್ ಟ್ವೀಟ್ ಮಾಡಿದ್ದಾರೆ.

ಮುಂದೆ ಓದಿ ...
  • Share this:

    ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಇಂಗ್ಲೀಷ್​ ಸುದ್ದಿ ಮಾಧ್ಯಮವಾದ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ಮುಂಬೈ ಪೊಲೀಸರು ಇಂದು ಬೆಳಗ್ಗೆ ಏಕಾಏಕಿ ಬಂಧಿಸಿದ್ದಾರೆ. 2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್​ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಅರ್ನಾಬ್​ ಗೋಸ್ವಾಮಿ ಮೇಲಿದೆ. ಅರ್ನಬ್ ಗೋಸ್ವಾಮಿ ಮತ್ತು ಇನ್ನಿಬ್ಬರು ತಮಗೆ 5.4 ಕೋಟಿ ರೂ. ಹಣ ನೀಡಬೇಕು. ಆ ಹಣ ನೀಡಲು ಅವರು ಒಪ್ಪುತ್ತಿಲ್ಲ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದಿಟ್ಟು ಅನ್ವಯ್​ ನಾಯಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗ ಸಾವನ್ನಪ್ಪಿರುವುದು ಗೊತ್ತಾಗುತ್ತಿದ್ದಂತೆ ಅನ್ವಯ್ ಅವರ ತಾಯಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.


    ರಿಪಬ್ಲಿಕ್ ಟಿವಿ ಸ್ಟುಡಿಯೋ ನಿರ್ಮಿಸುವಾಗ ಅನ್ವಯ್ ನಾಯಕ್ ಅವರೇ ಇಂಟೀರಿಯರ್ ಡಿಸೈನಿಂಗ್ ಮಾಡಿಕೊಟ್ಟಿದ್ದರು. ಅದರ ಹಣ ನೀಡದೆ ಸತಾಯಿಸಿದ್ದರಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಅರ್ನಬ್ ಗೋಸ್ವಾಮಿ ವಿರುದ್ಧ ಕೇಳಿಬಂದಿತ್ತು. 2018ರಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಕೇಸನ್ನು 2019ರಲ್ಲಿ ರಾಯಘಡ ಪೊಲೀಸರು ಕ್ಲೋಸ್ ಮಾಡಿದ್ದರು. ಆದರೆ, ಅನ್ವಯ್ ನಾಯಕ್ ಅವರ ಪುತ್ರಿ ಅದ್ನಯ ನಾಯಕ್ ನೀಡಿದ್ದ ಹೊಸ ದೂರಿಗೆ ಸಂಬಂಧಪಟ್ಟಂತೆ ಪ್ರಕರಣದ ಮರು ತನಿಖೆ ಮಾಡಲಾಗುವುದು ಎಂದು ಕಳೆದ ಮೇ ತಿಂಗಳಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ಘೋಷಿಸಿದ್ದರು.


    ಇದೇ ದೂರಿನ ಅನ್ವಯ ಇಂದು ಅರ್ನಾಬ್​ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ. ಪೊಲೀಸರು ತಾವು ಕಾನೂನಿನಂತೆ ಕೆಲಸ ನಿರ್ವಹಿಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿವಾದ ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಟ್ವಿಟರ್​ನಲ್ಲಂತು ಪರ-ವಿರೋಧ ಚರ್ಚೆಗಳು ಗರಿಗೆದರಿವೆ. ಕೆಲವರು ಅರ್ನಾಬ್‌ ಗೋಸ್ವಾಮಿಯನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ಸರಿ ಎಂದು ವಾದಿಸುತ್ತಿದ್ದಾರೆ.



    ಅರ್ನಾಬ್ ಬಂಧನ ಕುರಿತಂತೆ ಟ್ವಿಟ್ಟರ್‌ನಲ್ಲಿ ವಾದ-ವಾಗ್ವಾದಗಳು ನಡೆಯುತ್ತಿದ್ದು, ಸಾವಿರಾರು ಜನ ಅರ್ನಾಬ್ ಹೆಸರಿನ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
    ಭಾರತದ ಎಡಿಟರ್ಸ್‌ ಗಿಲ್ಡ್ ಅರ್ನಾಬ್ ಪರ‌ ಟ್ವೀಟ್ ಮಾಡಿ, “ರಿಪಬ್ಲಿಕ್ ಟಿವಿ ಸಂಪಾದಕರನ್ನು ನಿರೀಕ್ಷಿತವಲ್ಲದ ರೀತಿಯಲ್ಲಿ ಬಂಧಿಸಿರುವುದು ಖಂಡನೀಯ. ಮಹಾರಾಷ್ಟ್ರ ಮುಖ್ಯಮಂತ್ರಿ ಸಂಪಾದಕರನ್ನು ಉತ್ತಮ ರೀತಿಯಲ್ಲಿ ನಡೆಸಿಕೊಳ್ಳಬೇಕು ಎಂದು ಈ ಮೂಲಕ ಒತ್ತಾಯಿಸುತ್ತೇವೆ. ರಾಜ್ಯವು ತನ್ನ ಅಧಿಕಾರವನ್ನು ತನ್ನನ್ನು ವಿಮರ್ಶಿಸುವವರ ವಿರುದ್ಧ ಉಪಯೋಗಿಸಿಕೊಳ್ಳಬಾರದು” ಎಂದು ಬರೆದುಕೊಂಡಿದೆ.


    ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಟ್ವೀಟ್ ಮಾಡಿ, “ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷ ಪ್ರಜಾಪ್ರಭುತ್ವವನ್ನು ಮತ್ತೊಮ್ಮೆ ಅವಮಾನಿಸಿದ್ದಾರೆ. ರಾಜ್ಯ ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರಿಪಬ್ಲಿಕ್ ಟಿವಿ ಮತ್ತು ಅರ್ನಾಬ್ ಮೇಲೆ ದಾಳಿ ಮಾಡಿದ್ದು, ಇದು ವೈಯಕ್ತಿಕ ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವದ 4ನೆ ಸ್ತಂಭದ ಮೇಲಿನ ದಾಳಿಯಾಗಿದೆ. ಇದು ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತದೆ. ಇದು ಸ್ವತಂತ್ರ ಪತ್ರಿಕೋದ್ಯಮದ ಮೇಲಿನ ದಾಳಿಯಾಗಿದ್ದು, ಖಂಡನೀಯವಾಗಿದೆ” ಎಂದು ಅರ್ನಾಬ್ ಪರ ಬರೆದುಕೊಂಡಿದ್ದಾರೆ.


    ಹೀಗೆ ನೂರಾರು ಜನ ಬಿಜೆಪಿ ನಾಯಕರೂ ಸೇರಿದಂತೆ ಸಾರ್ವಜನಿಕರೂ ಕೂಡ ಅರ್ನಾಬ್ ಬಂಧನವನ್ನು ಖಂಡಿಸಿ ಅವರ ಪರ ಟ್ವೀಟ್ ಮಾಡಿದ್ದು, #IndiaWithArnab ಎಂದು ಹಲವರು ಟ್ವೀಟ್ ಮಾಡಿದ್ದಾರೆ.


    ಆದರೆ ಇದರ ಜೊತೆಯಲ್ಲೇ ಮತ್ತಷ್ಟು ಟ್ವಿಟ್ಟರ್ ಬಳಕೆದಾರರು ಅರ್ನಾಬ್ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ.



    ಭಾರತೀಯ ಕಾಂಗ್ರೆಸ್‌ನ ವಕ್ತಾರರಾದ ಶಾಮಾ ಮೊಹಮ್ಮದ್ ಅಮಿತ್ ಶಾ ಅವರ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದು, “ಹತ್ರಾಸ್ ಘಟನೆಯನ್ನು ವರದಿ ಮಾಡಲು ಹೋಗಿದ್ದಕ್ಕೆ ಕರಾಳ ಗೂಂಡಾ ಕಾಯ್ದೆಯ ಅಡಿಯಲ್ಲಿ ಕೇರಳ ಮೂಲದ ಪತ್ರಕರ್ತನನ್ನು ಬಂಧಿಸಿದಾಗ ಅಮಿತ್ ಶಾ ಮಾತನಾಡಿದ್ದರೇ? ಅರ್ನಾಬ್ ಅರೆಸ್ಟ್‌ ಆಗಿರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿಯೇ ಹೊರತು ತನ್ನ ಪತ್ರಿಕೋದ್ಯಮದ ಕಾರ್ಯಕ್ಕಲ್ಲ” ಎಂದು ಟ್ವೀಟ್ ಮಾಡಿದ್ದಾರೆ.


    ಆಮ್ ಆದ್ಮಿಯ ಕಾರ್ಯಕರ್ತರಾದ ಆರತಿ ಎಂಬುವವರು ಅತ್ಮಹತ್ಯೆ ಮಾಡಿಕೊಂಡಿದ್ದ ಅನ್ವಯ್‌ ನಾಯಕ್ ಪತ್ನಿ ಮಾತನಾಡಿರುವ ವೀಡಿಯೋವನ್ನು ಹಂಚಿಕೊಂಡಿದ್ದು, “ಅನ್ವಯ್ ನಾಯಕ್ ತನ್ನ ಆತ್ಮಹತ್ಯಾ ಹೇಳಿಕೆಯಲ್ಲಿ ಅರ್ನಾಬ್ ಮತ್ತು ಇತರ ಇಬ್ಬರ ವಿರುದ್ಧ ಆರೋಪ ಮಾಡಿ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾರೆ. ಅವರ ಪತ್ನಿ ನ್ಯಾಯ ಕೇಳುತ್ತಿದ್ದಾರೆ. #justiceForAnvayNaik” ಎಂದು ಟ್ವೀಟ್ ಮಾಡಿದ್ದಾರೆ.


    ಇದನ್ನೂ ಓದಿ : ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ; ಮುಂಬೈನಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಂಧನ


    ಹೀಗೆ ನೂರಾರು ಜನರು ಅರ್ನಾಬ್ ಬಂಧನವನ್ನು ಸಮರ್ಥಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.


    ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅರ್ನಾಬ್‌‌ನನ್ನು ಬಂಧಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ. ಇನ್ನೂ ಮುಂಬೈಯಲ್ಲಿ ಅರ್ನಾಬ್ ವಿರುದ್ಧ ಟಿಆರ್‌ಪಿ ಹಗರಣ ತನಿಖೆ ನಡೆಯುತ್ತಿರುವ ಸಮಯದಲ್ಲೇ ಈ ಬಂಧನ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    Published by:MAshok Kumar
    First published: