ಗಣರಾಜ್ಯೋತ್ಸವದ (Republic Day) ಪೂರ್ವಭಾವಿಯಾಗಿ, ಯಾವುದೇ ರೀತಿಯ ಭಯೋತ್ಸಾದಕ ಘಟನೆಗಳನ್ನು (Terrorist Incidents) ಹಾಗೂ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಪೊಲೀಸರು ಆಧುನಿಕ ಭದ್ರತಾ ವ್ಯವಸ್ಥೆಗಳನ್ನು (Security Measures) ನಿಯೋಜಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಆಗಮಿಸುವ ಜನರ ಮೇಲೆ ತೀವ್ರ ನಿಗಾ ಇರಿಸುವುದಕ್ಕಾಗಿ ಪೊಲೀಸರು ರಾಜ್‌ಪಥ್ (Rajpath) ಹಾಗೂ ಸುತ್ತಮುತ್ತಲಿನ ಪರಿಸರದ ಮೇಲೆ ಉನ್ನತ ದರ್ಜೆಯ ಭದ್ರತಾ ವ್ಯವಸ್ಥೆ ಮಾಡಿದ್ದು, ಯಾವುದೇ ಭಯೋತ್ಪಾದಕ ಶಂಕಿತ ವ್ಯಕ್ತಿ ಅಥವಾ ಅಪರಾಧಿಯನ್ನು ತಕ್ಷಣವೇ ಗುರುತಿಸುವ ಸಲುವಾಗಿ ಮುಖ ಗುರುತಿಸುವ (Face Recognition) ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. 50,000 ಶಂಕಿತ ಅಪರಾಧಿಗಳ ಡೇಟಾಬೇಸ್ ಅನ್ನು ವ್ಯವಸ್ಥೆಯು ಹೊಂದಿದೆ ಎಂಬುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ರೀತಿಯ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ?
ಪೊಲೀಸ್ ಅಧಿಕಾರಿಗಳು ತಿಳಿಸಿರುವಂತೆ ಪರೇಡ್ ವೀಕ್ಷಿಸಲು ಆಗಮಿಸುವ ಜನರಿಗೆ ಆರು ಪ್ರವೇಶ ಕೇಂದ್ರಗಳು ಹಾಗೂ 16 ಬ್ರಿಡ್ಜ್‌ಗಳನ್ನು ಅಳವಡಿಸಲಾಗಿದ್ದು 30 ಮುಖ ಗುರುತಿಸುವ ಸಿಸ್ಟಮ್‌ಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಸ್ಥಳಗಳಿಂದ ಶಂಕಿತ ವ್ಯಕ್ತಿ ಪ್ರವೇಶ ಪಡೆಯುತ್ತಿದ್ದಂತೆ, ಸಿಸ್ಟಮ್‌ನಲ್ಲಿ ಕೆಂಪು ದೀಪ ಹೊತ್ತಿಕೊಳ್ಳುತ್ತದೆ.
ಅಲ್ಲದೆ, ಮೂರು ಕಂಟ್ರೋಲ್ ರೂಮ್‌ಗಳು 500ಕ್ಕಿಂತಲೂ ಹೆಚ್ಚಿನ ಸಿಸಿಟಿವಿಗಳ ಮೂಲಕ ರಾಜ್‌ಪಥ್ ಮೇಲೆ ನಿಗಾ ಇರಿಸುತ್ತಿವೆ. ಗಣರಾಜ್ಯೋತ್ಸವ ಪರೇಡ್‌ಗೆ ಮುನ್ನ ದೆಹಲಿ ಪೊಲೀಸರು 65 ಕಂಪನಿ ಅರೆಸೇನಾ ಪಡೆಗಳು ಸೇರಿದಂತೆ ಸುಮಾರು 30,000 ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. 71 ಡಿಸಿಪಿಗಳು, 213 ಎಸಿಪಿಗಳು, 753 ದೆಹಲಿ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ಪರೇಡ್‌ನ ಭದ್ರತೆಯ ಜವಬ್ದಾರಿಯನ್ನು ನೀಡಲಾಗಿದೆ.
ಇದನ್ನೂ ಓದಿ: Republic day: ಗಣರಾಜ್ಯೋತ್ಸವದ ಕರ್ನಾಟಕದ ಸ್ತಬ್ಧಚಿತ್ರದಲ್ಲಿ ಕಮಲಾ ದೇವಿ ಚಟ್ಟೋಪಾಧ್ಯಾಯ ಚಿತ್ರ
ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ
ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರತಿಭಟನೆಗಳು ಮತ್ತು ರೈತರ ಆಂದೋಲನದ ಸಮಯದಲ್ಲಿ ಪೂರ್ವಭಾವಿಯಾಗಿದ್ದ ಪ್ರತಿಭಟನಾಕಾರರ ಮೇಲೆ ಕಣ್ಣಿಡಲು ಗುಪ್ತಚರ ಸಂಸ್ಥೆಗಳು ದೆಹಲಿ ಪೊಲೀಸರು ಸೇರಿದಂತೆ ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿವೆ. ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ, ಕೆಂಪು ಕೋಟೆ ಮತ್ತು ನವದೆಹಲಿ ಪ್ರದೇಶದಲ್ಲಿನ ಇತರ ಪ್ರಮುಖ ಸ್ಥಾಪನೆಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುಪ್ತಚರ ಸಂಸ್ಥೆಯು ನೀಡಿರುವ ಎಚ್ಚರಿಕೆಯ ನಂತರ ಕೆಂಪು ಕೋಟೆಯಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಜನವರಿ 25-26 ಮಧ್ಯರಾತ್ರಿಯವರೆಗೆ ದೆಹಲಿಯ ಗಡಿಗಳನ್ನು ಮುಚ್ಚಲಾಗುತ್ತದೆ. ಜನವರಿ 26ರಂದು ಐದು ಗಡಿ ಪ್ರದೇಶಗಳಿಂದ ದೆಹಲಿಯಲ್ಲಿ ಭಾರಿ ವಾಹನಗಳ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದವರು ಗಣರಾಜ್ಯೋತ್ಸವ ಆಚರಣೆಗೆ ಅಡ್ಡಿಪಡಿಸಬಹುದು ಎಂಬ ಮಾಹಿತಿ ಗುಪ್ತಚರ ಇಲಾಖೆಯಿಂದ ದೊರೆತಿದ್ದು ದೇಶದಲ್ಲಿ ಸಹಜತೆಯನ್ನು ಅಸ್ಥಿರಗೊಳಿಸಲು ಶಾಂತಿ ಕದಡಲು ಪ್ರತಿಭಟನಾಕಾರರು ವಿದೇಶಿ ಮೂಲಗಳ ಬೆಂಬಲದೊಂದಿಗೆ ಸಮಾಜ ವಿರೋಧಿ ಸಂಘಟನೆಗಳ ಸಂಪರ್ಕದಲ್ಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡ್ರೋನ್ ವ್ಯವಸ್ಥೆ:
ವಾಯು ಪ್ರದೇಶದ ಮೇಲ್ವಿಚಾರಣೆಗಾಗಿ ಕೌಂಟರ್ ಡ್ರೋನ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಯೋತ್ಪಾದಕ ಬೆದರಿಕೆಯನ್ನು ಗಮನದಲ್ಲಿರಿಸಿಕೊಂಡು 26 ಪ್ಯಾರಾಮೀಟರ್‌ಗಳ ಭಯೋತ್ಪಾದಕ-ವಿರೋಧಿ ಕ್ರಮಗಳನ್ನು ಅನುಸರಿಸಲಾಗಿದೆ. ಗುಪ್ತಚರ ಮಾಹಿತಿ ಸಂಗ್ರಹಿಸುವ ಸಲುವಾಗಿ, ದೆಹಲಿ ಪೊಲೀಸರು ಎಲ್ಲಾ ಹೋಟೆಲ್‌ಗಳು, ಅತಿಥಿ ಗೃಹಗಳು, ಧರ್ಮಶಾಲಾಗಳು, ದೆಹಲಿಯಲ್ಲಿ ವಾಸಿಸುವ ಬಾಡಿಗೆದಾರರು, ಮನೆಗಳಲ್ಲಿ ಕೆಲಸ ಮಾಡುವ ಸೇವಕರು ಮತ್ತು ಕಾರ್ಮಿಕರನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದಾರೆ.
ದೆಹಲಿ ಪೊಲೀಸರು ಕೆಲಸವನ್ನು ನಿಧಾನಗೊಳಿಸದೇ ಸೆಂಟ್ರಲ್ ವಿಸ್ಟಾ ಯೋಜನೆಯಲ್ಲಿ ತೊಡಗಿರುವ ಏಜೆನ್ಸಿಗಳೊಂದಿಗೆ ಸಮನ್ವಯದಿಂದ ಭದ್ರತಾ ವ್ಯವಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ. ಯಾವುದೇ ಸಣ್ಣ ವಿವರ ಸಂಗ್ರಹಿಸಲು, ಯಾವುದೇ ಭಯೋತ್ಪಾದಕ ಚಟುವಟಿಕೆಯನ್ನು ತಪ್ಪಿಸಲು ಅಂತರ-ರಾಜ್ಯ ಮಂಡಳಿಯ ಸಹಕಾರವನ್ನು ಬಳಸುತ್ತಿದೆ. ದೆಹಲಿ ಪೊಲೀಸ್ ಘಟಕವು ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂಬುದಾಗಿ ಮಾಹಿತಿ ದೊರಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ