ತೇಜ್‌ಪಾಲ್‌ ಪ್ರಕರಣ: ಮಹಿಳೆ, ಆಕೆಯ ಕುಟುಂಬದವರ ಗುರುತು ಮರೆಮಾಚುವಂತೆ ಹೈಕೋರ್ಟ್‌ ಆದೇಶ

ತರುಣ್ ತೇಜ್​ಪಾಲ್.

ತರುಣ್ ತೇಜ್​ಪಾಲ್.

ಮಹಿಳಾ ಸಹೋದ್ಯೋಗಿ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತೆಹಲ್ಕಾ ಪತ್ರಿಕೆ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಗೋವಾದ ಸೆಷನ್ಸ್‌ ನ್ಯಾಯಾಲಯ ಮೇ 21ರಂದು ಖುಲಾಸೆಗೊಳಿಸಿತ್ತು.

  • Share this:

ಪಣಜಿ: ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ಅವರನ್ನು ಖುಲಾಸೆಗೊಳಿಸಿದ ಗೋವಾ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಿಗೆ ತೀರ್ಪಿನಲ್ಲಿ ಫಿರ್ಯಾದುದಾರೆ ಮತ್ತು ಆಕೆಯ ಕುಟುಂಬ ಸದಸ್ಯರ ಗುರುತು ಮರೆಮಾಚುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಗುರುವಾರ ಆದೇಶಿಸಿದೆ. ತೀರ್ಪಿನಲ್ಲಿ ಫಿರ್ಯಾದುದಾರೆಯ ಗುರುತು, ಆಕೆಯ ಇಮೇಲ್‌ ಹಾಗೂ ಆಕೆಯ ಪತಿಯ ಹೆಸರನ್ನು ಉಲ್ಲೇಖಿಸಲಾಗಿದೆ ಎಂಬ ವಿಚಾರವನ್ನು ಗೋವಾ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ  ಅವರು  ನ್ಯಾಯಮೂರ್ತಿ ಎಸ್‌ ಸಿ ಗುಪ್ತೆ ನೇತೃತ್ವದ ಪೀಠದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಆದೇಶ ಹೊರಡಿಸಿತು.

“ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಆದೇಶದಲ್ಲಿ ಮತ್ತು ವೆಬ್‌ಸೈಟಿಗೆ ಇನ್ನೂ ಅಪ್‌ಲೋಡ್‌ ಮಾಡಿಲ್ಲದೆ ಇರುವ ಆದೇಶದಲ್ಲಿ ಸಂತ್ರಸ್ತೆಯ ಪತಿ ಮತ್ತು ಆಕೆಯ ಇಮೇಲೆ ಐಡಿ ಉಲ್ಲೇಖಿಸಲಾಗಿದೆ. ಕಾನೂನಿಗೆ ವಿರುದ್ಧವಾಗಿ ಇಂಥ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಾರದು ಎಂಬುದನ್ನು ಪರಿಗಣಿಸಲಾಗಿದೆ. ಹೀಗಾಗಿ, ತೀರ್ಪನ್ನು ಅಪ್‌ಲೋಡ್‌ ಮಾಡುವಾಗ ಸಂತ್ರಸ್ತೆಯ ಪತಿಯ ಹೆಸರು ಮತ್ತು ಆಕೆಯ ಇಮೇಲ್‌ ಐಡಿಯನ್ನು ಪರಿಷ್ಕರಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಈ ಮೂಲಕ ನಿರ್ದೇಶಿಸಲಾಗಿದೆ. ಅಂತೆಯೇ ಫಿರ್ಯಾದುದಾರೆಯ ತಾಯಿಯ ಹೆಸರನ್ನೂ ಉಲ್ಲೇಖಿಸಲಾಗಿದ್ದು,ಅದನ್ನೂ ಪರಿಷ್ಕರಿಸುವಂತೆ ಸೂಚಿಸಿಲಾಗಿದೆ” ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಲಾಗಿದೆ.


ತರುಣ್‌ ತೇಜ್‌ಪಾಲ್‌ ಅವರನ್ನು ಖುಲಾಸೆಗೊಳಿಸಿರುವುದನ್ನು ಗೋವಾ ಸರ್ಕಾರ ಪ್ರಶ್ನಿಸಿರುವ ಆದೇಶದಲ್ಲಿಯೂ ಪರಿಷ್ಕರಣೆ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಸೆಷನ್ಸ್‌ ನ್ಯಾಯಾಲಯದ ಮೇ 21ರ ತೀರ್ಪಿನ ದಾಖಲೆ ಮೇ 25ರಂದು ಸಿಕ್ಕಿರುವುದರಿಂದ ಮೇಲ್ಮನವಿ ಮೆಮೊದಲ್ಲಿ ಹೆಚ್ಚುವರಿ ಆಧಾರಗಳನ್ನು ಸೇರಿಸಲು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಅನುಮತಿಸಿದೆ.


ವಿಚಾರಣೆಯ ವೇಳೆ ಸಲಹೆ ಪಡೆಯಲಿಕ್ಕಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರನ್ನು ದೂರುದಾರೆ ಸಂಪರ್ಕಿಸಿದ್ದರ ಕುರಿತು ಅಧೀನ ನ್ಯಾಯಾಲಯದಲ್ಲಿ ವ್ಯಕ್ತಪಡಿಸಲಾಗಿರುವ ಅಭಿಪ್ರಾಯಕ್ಕೆ ಎಸ್‌ಜಿ ಮೆಹ್ತಾ ಆಕ್ಷೇಪಿಸಿದ್ದಾರೆ. “ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯು ತನ್ನ ತಂದೆಯ ಸ್ನೇಹಿತರ ಸಂಪರ್ಕದಿಂದ ಸಲಹೆ ಪಡೆಯಲು ಖ್ಯಾತ ನ್ಯಾಯವಾದಿ ಇಂದಿರಾ ಜೈಸಿಂಗ್‌ ಅವರನ್ನು ಸಂಪರ್ಕಿಸಿದ್ದರು. ನನ್ನ ಪ್ರಕಾರ ಅಂಥ ಖ್ಯಾತನಾಮರನ್ನು ಸಂಪರ್ಕಿಸುವುದು ಸರಿ… ಹೀಗೆ ಮಾಡುವುದರಿಂದ ಘಟನಾವಳಿಗಳನ್ನು ತಿರುಚುವ ಸಾಧ್ಯತೆ ಇರುತ್ತದೆ ಎಂದು ವಾದಿಸಲಾಗಿದೆ. ಖ್ಯಾತವೆತ್ತ ನ್ಯಾಯವಾದಿಯ ವಿರುದ್ಧ ತಿರುಚುವ ಆರೋಪವೇ?” ಎಂದು ಮೆಹ್ತಾ ಆಕ್ಷೇಪಿಸಿದರು.


ಇದನ್ನು ಓದಿ: ಹಿಂದೂ ಧರ್ಮಕ್ಕೆ ಮತಾಂತರವಾಗಿ ವಿವಾಹವಾದ ಮುಸ್ಲಿಂ ಯುವತಿಗೆ ರಕ್ಷಣೆ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶ


ಬಳಿಕ ಎಸ್‌ಜಿ ಮೆಹ್ತಾ ಅವರು ವಿಚಾರಣೆಯನ್ನು ಮುಂದಿನ ವಾರಕ್ಕೆ ನಿಗದಿಗೊಳಿಸುವಂತೆ ಮನವಿ ಮಾಡಿದರು. ಪೀಠವು ಸಾಮಾನ್ಯ ರೀತಿಯಲ್ಲಿ ಏಕೆ ವಿಚಾರಣೆ ನಡೆಸಬಾರದು ಎಂದು ಪ್ರಶ್ನಿಸಿತು. ಆಗ ಮೆಹ್ತಾ ಅವರು “ಸಾಮಾನ್ಯವಾಗಿ ನಾನು ಅದಕ್ಕೆ (ಅಂತಹ ಆದೇಶಕ್ಕೆ) ತಲೆಬಾಗಿ ಬಿಡುತ್ತಿದ್ದೆ.. ಆದರೆ, ಈ ಪ್ರಕರಣದ ತೀರ್ಪಿನಲ್ಲಿ ಹೆಚ್ಚಿನ ವಿಚಾರಗಳಿವೆ.. ಹೈಕೋರ್ಟ್‌ ತಕ್ಷಣ ಪ್ರಕರಣ ಪರಿಗಣಿಸಿದೆ ಎಂಬ ವಿಚಾರ ಮಹಿಳೆಯರಿಗೆ ಗೊತ್ತಾಗುವುದು ಬಹುಮುಖ್ಯ” ಎಂದರು. ಇದಕ್ಕೆ ಪೀಠ ಸಮ್ಮತಿಸಿದ್ದು, ಜೂನ್‌ 2ಕ್ಕೆ ವಿಚಾರಣೆ ನಿಗದಿಗೊಳಿಸಿದೆ.


ಮಹಿಳಾ ಸಹೋದ್ಯೋಗಿ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತೆಹಲ್ಕಾ ಪತ್ರಿಕೆ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರನ್ನು ಗೋವಾದ ಸೆಷನ್ಸ್‌ ನ್ಯಾಯಾಲಯ ಮೇ 21ರಂದು ಖುಲಾಸೆಗೊಳಿಸಿತ್ತು. ತನಿಖೆಯಲ್ಲಿ ಹಲವು ಲೋಪಗಳಿದ್ದು ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ನಿರ್ಣಾಯಕ ಸಾಕ್ಷ್ಯಗಳನ್ನು ನೀಡಲು ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ನ್ಯಾಯಾಧೀಶೆ ಕ್ಷಮಾ ಜೋಶಿ ಆ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿದ್ದರು. ತೀರ್ಪಿನ ಪ್ರತಿ ಮೇ 25 ರಂದು ಲಭ್ಯವಾಗಿದ್ದು ಅದರ ಪ್ರಕಾರ ಸಂತ್ರಸ್ತೆಯ ಹೇಳಿಕೆಗಳಲ್ಲಿ ಬದಲಾವಣೆಗಳಾಗಿದ್ದು ವಸ್ತುತಃ ವಿರೋಧಾಭಾಸ ಕಂಡುಬಂದಿದೆ. ಲೋಪಯುಕ್ತ ಮತ್ತು ಬದಲಾಗುತ್ತಿರುವ ಹೇಳಿಕೆಗಳಲ್ಲಿ ಆತ್ಮವಿಶ್ವಾಸ ಕಂಡುಬರುತ್ತಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
First published: