ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಅವಮಾನಿಸಿದ ಆರೋಪದ ಮೇಲೆ ಕಾಂಗ್ರೆಸ್ (Congress) ನಾಯಕ ಪವನ್ ಖೇರಾ (Pawan Khera) ಅವರನ್ನು ಅಸ್ಸಾಂ ಪೊಲೀಸರು (Assam Police) ಬಂಧಿಸಿದ್ದರು. ಖೇರಾ ಅವರು ಪ್ರಧಾನ ಮಂತ್ರಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅಸ್ಸಾಂ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ದೂರು ದಾಖಲಾಗಿತ್ತು. ಹಾಗಾಗಿ ಇಂದು ದೆಹಲಿಯಿಂದ ಛತ್ತೀಸ್‌ಗಢಕ್ಕೆ ತೆರಳಲು ವಿಮಾನವೇರಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಸಿ ಪೊಲೀಸರು ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ (Supreme Court)ನಿಂದ ಮಧ್ಯಂತರ ಜಾಮೀನು (Interim Bail) ಪಡೆದುಕೊಂಡಿದ್ದಾರೆ.
ಅಸ್ಸಾಂನಲ್ಲಿ ದಾಖಲಿಸಲಾಗಿದ್ದ ಎಫ್ಐಆರ್ಗೆ ಸಂಬಂಧಿಸಿದಂತೆ ಖೇರಾ ಅವರನ್ನು ಬಂಧಿಸಲಾಗಿತ್ತು. ಪವನ್ ಖೇರಾ ಹಾಗೂ ಕೆಲವು ಕಾಂಗ್ರೆಸ್ ನಾಯಕರು ದೆಹಲಿಯಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆಯಲಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಗಾಗಿ ಇಂಡಿಗೋ ವಿಮಾನದಲ್ಲಿ ಹೊರಟಿದ್ದರು. ಈ ಸಂದರ್ಭದಲ್ಲಿ ಎಫ್ಐಆರ್ನೊಂದಿಗೆ ದಾವಿಸಿದ ಪೊಲೀಸರು ಅವರನ್ನು ಬಂಧಿಸಿದ್ದರು. ಇದನ್ನು ಖಂಡಿಸಿ 50 ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ವಿಮಾನ ನಿಲ್ದಾಣದ ರನ್ ವೇನಲ್ಲೇ ಪ್ರತಿಭಟನೆ ಮಾಡಿದರು.
ಇದನ್ನೂ ಓದಿ: Sharad Pawar: ಚುನಾವಣಾ ಆಯೋಗ ಪಕ್ಷಪಾತಿಯಾಗಿ ವರ್ತಿಸಿದ್ದನ್ನು ಹಿಂದೆಂದೂ ನೋಡಿಲ್ಲ; ಶರದ್ ಪವಾರ್ ಕಿಡಿ
ಪೊಲೀಸರು ಮೊದಲು ನಿಮ್ಮ ಲಗೇಜ್‌ನಲ್ಲಿ ತೊಂದರೆ ಇದೆ ಎಂದು ಹೇಳಿದರು, ನಂತರ ಎಫ್‍ಐಆರ್ ತೋರಿಸಿ ಈ ವಿಮಾನದಲ್ಲಿ ಹೋಗಲು ಸಾಧ್ಯವಿಲ್ಲ ಎಂದರು. ಅಲ್ಲದೆ ಡಿಸಿಪಿ ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿ ಕಾಯಲು ಹೇಳಿದರು, ಬಗ್ಗೆ ನಾನು ತುಂಬಾ ಸಮಯ ಕಾದೆ ಎಂದು ಖೇರಾ ಅಸಮಧಾನ ವ್ಯಕ್ತಪಡಿಸಿದರು. ಅಲ್ಲದೆ ಇದೊಂದು ಸುದೀರ್ಘ ಯುದ್ಧವಾಗಿದೆ ಮತ್ತು ನಾನು ಹೋರಾಡಲು ಸಿದ್ಧನಿದ್ದೇನೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಖೇರಾ ವಿರುದ್ಧ ಕೇಳಿ ಬಂದಿರುವ ಆರೋಪ?
ಪವನ್ ಖೇರಾ ಇತ್ತೀಚೆಗೆ ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮೋದಿ ಹೆಸರನ್ನು ತಿರುಚಿ ಲೇವಡಿ ಮಾಡಿದ್ದರು. ನರಸಿಂಹ ರಾವ್ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಬಹುದಾದರೆ, ಅಟಲ್ ಬಿಹಾರಿ ವಾಜಪೇಯಿ ಜೆಪಿಸಿ ರಚಿಸಬಹುದಾದರೆ, ನರೇಂದ್ರ ಗೌತಮ್ ದಾಸ್, ಕ್ಷಮಿಸಿ, ದಾಮೋದರ್ ದಾಸ್ ಮೋದಿಗೆ ಜೆಪಿಸಿ ರಚನೆ ಮಾಡಲು ಏನು ಸಮಸ್ಯೆ? ಎಂದು ಕೇಳಿದ್ದರು.
ಖೇರಾ ಮೋದಿ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ವ್ಯಂಗ್ಯ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಅಸ್ಸಾಂ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಅವರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಅಸ್ಸಾಂನಲ್ಲಿ ದಾಖಲಾದ ಎಫ್‍ಐಆರ್ ಅನ್ವಯ ಅವರನ್ನು ಇಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು.
ಮಧ್ಯಂತರ ಜಾಮೀನು
ಪ್ರಕರಣಕ್ಕೆ ಸಂಬಂಧಿಸಿದಂತೆ ಪವನ್ ಖೇರಾ ಬಂಧನವಾಗುತ್ತಿದ್ದಂತೆ ಅವರ ಪರ ವಕೀಲಾ ಎ.ಎಂ ಸಿಂಘ್ವಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ನಾಯಕ ಖೇರಾ ಮೋದಿ ವಿರುದ್ಧ ನೀಡಿದ ಹೇಳಿಕೆಗಾಗಿ ಆ ದಿನವೇ ಕ್ಷಮೆ ಕೇಳಿದ್ದಾರೆ. ಹೀಗಾಗಿ ಅವರ ಬಂಧನಕ್ಕೆ ಎಫ್‍ಐಆರ್ ದಾಖಲಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಎಂ.ಆರ್ ಶಾ ಹಾಗೂ ಪಿಎಸ್ ನರಸಿಂಹರನ್ನೊಳಗೊಂಡ ತ್ರಿಸದಸ್ಯ ಪೀಠ ಖೇರಾ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಈ ಆದೇಶ ಫೆಬ್ರವರಿ 28ರ ವರೆಗೆ ಚಾಲ್ತಿಯರಲಿದ್ದು ಫೆಬ್ರವರಿ 27ರಂದು ವಿಚಾರಣೆ ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ