ನವದೆಹಲಿ (ಅ. 3): ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)ಗೆ ಶುಕ್ರವಾರ ಒಂದೇ ದಿನ 7,350 ಕೋಟಿ ರೂ. ಹೂಡಿಕೆಯಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಿಲಯನ್ಸ್ ಸಂಸ್ಥೆಗೆ ವಿಶ್ವಾದ್ಯಂತ ಹೂಡಿಕೆ ಹರಿದುಬರುತ್ತಿದೆ. ಜನರಲ್ ಅಟ್ಲಾಂಟಿಕ್, ಸಿಲ್ವರ್ ಲೇಕ್, ಮುಬಾದಲ ಕಂಪನಿಯ ಬೆನ್ನಲ್ಲೇ ನಿನ್ನೆ ಸಿಂಗಾಪುರ ಮೂಲದ ಜಿಐಸಿ ಮತ್ತು ಟಿಪಿಜಿ ಕಂಪನಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಭಾಗವಾಗಿರುವ ರಿಲಯನ್ಸ್ ರೀಟೇಲ್ ಯುನಿಟ್ನಲ್ಲಿ ಒಟ್ಟು 7,35 ಕೋಟಿ ರೂ. ಹೂಡಿಕೆ ಮಾಡಿವೆ. ಇವೆರಡೂ ಕಂಪನಿಗಳು ಸೇರಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನ ಶೇ. 1.63 ಪಾಲನ್ನು ಖರೀದಿಸಿವೆ.
ಜಿಐಸಿ ಕಂಪನಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನಲ್ಲಿ 5,512.5 ಕೋಟಿ ರೂ. ಹೂಡಿಕೆ ಮಾಡಿದೆ. ಕಳೆದ ಒಂದು ವಾರದಿಂದ ರಿಲಯನ್ಸ್ನಲ್ಲಿ ಹೂಡಿಕೆ ಮಾಡುತ್ತಿರುವ 6ನೇ ಕಂಪನಿ ಇದಾಗಿದೆ. ರಿಲಯನ್ಸ್ ರೀಟೇಲ್ ವೆಂಚರ್ನ 4.285 ಲಕ್ಷ ಕೋಟಿ ಈಕ್ವಿಟಿ ಮೊತ್ತದ ಶೇ. 1.22 ಪಾಲು ಪಡೆದಿರುವ ಸಿಂಗಾಪುರದ ಜಿಐಸಿ ಒಟ್ಟು 5,512 ಕೋಟಿ ರೂ. ಹೂಡಿಕೆ ಮಾಡಿದೆ. ಹಾಗೇ, ಟಿಪಿಜಿ ಕಂಪನಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ನ ಶೇ. 0.41 ಪಾಲು ಖರೀದಿಸುವ ಮೂಲಕ 1,837.5 ಕೋಟಿ ರೂ. ಹೂಡಿಕೆ ಮಾಡಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಗೆ ಸೇರಿದ ರಿಲಯನ್ಸ್ ರೀಟೇಲ್ ವೆಂಚರ್ಸ್ (RRVL) ಕಂಪನಿಯು ಫ್ಯೂಚರ್ ಗ್ರೂಪ್ನ ಹಲವು ವ್ಯವಹಾರಗಳನ್ನ ಖರೀದಿ ಮಾಡಿತ್ತು. ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್ನ ರೀಟೇಲ್, ಹೋಲ್ಸೇಲ್, ಲಾಜಿಸ್ಟಿಕ್ಸ್, ವೇರ್ಹೌಸಿಂಗ್ ವ್ಯವಹಾರಗಳನ್ನು ಒಟ್ಟು 24,713 ಕೋಟಿ ರೂಪಾಯಿಗೆ ಕೊಳ್ಳುತ್ತಿರುವುದಾಗಿ ರಿಲಯನ್ಸ್ ರೀಟೇಲ್ ವೆಂಚರ್ಸ್ ಘೋಷಿಸಿತ್ತು. 3 ದಿನಗಳ ಹಿಂದೆ ಅಮೆರಿಕಾ ಮೂಲದ ಸಿಲ್ವರ್ ಲೇಕ್ ಎಂಬ ಸಂಸ್ಥೆ 1,875 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿತ್ತು.
ಇದನ್ನೂ ಓದಿ: GIC-Reliance Retail deal: ಸಿಂಗಾಪುರದ ಜಿಐಸಿಯಿಂದ ರಿಲಯನ್ಸ್ ರೀಟೇಲ್ನಲ್ಲಿ 5,512 ಕೋಟಿ ರೂ. ಹೂಡಿಕೆ
ಎರಡು ದಿನಗಳ ಹಿಂದೆ ಅಬುಧಾಬಿ ಮೂಲದ ಮುಬದಾಲ ಇನ್ವೆಸ್ಟ್ಮೆಂಟ್ ಕಂಪನಿ ರಿಲಯನ್ಸ್ ರೀಟೇಲ್ ವೆಂಚರ್ಸ್ನಲ್ಲಿ 6,247.50 ಕೋಟಿ ರೂ ಹೂಡಿಕೆ ಮಾಡಿತ್ತು. ಈ ಹೂಡಿಕೆಯೊಂದಿಗೆ ಮುಬಾದಲಾ ರಿಲಯನ್ಸ್ ರೀಟೇಲ್ನ ಶೇ. 1.4ರಷ್ಟು ಪಾಲನ್ನು ಖರೀದಿಸಿತ್ತು. ವಿಶ್ವದ ಅನೇಕ ಪ್ರಮುಖ ಹೂಡಿಕೆ ಸಂಸ್ಥೆಗಳಿಂದ ಬಂಡವಾಳ ಆಕರ್ಷಿಸುತ್ತಿರುವ ರಿಲಯನ್ಸ್ ರೀಟೇಲ್ನ ವ್ಯವಹಾರ ದಿನೇ ದಿನೇ ಪ್ರಬಲಗೊಳ್ಳುತ್ತಿದೆ. ದೇಶಾದ್ಯಂತ 12 ಸಾವಿರ ಮಳಿಗೆಗಳೊಂದಿಗೆ ರಿಲಯನ್ಸ್ ರೀಟೇಲ್ ವ್ಯವಹಾರ ಹೊಂದಿದೆ.
ರಿಲಯನ್ಸ್ ರೀಟೇಲ್ಸ್ ಇದುವರೆಗೂ ಶೇ. 6.87 ಪಾಲಿನ ಮೂಲಕ 30,360 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸಿದೆ. ರಿಲಯನ್ಸ್ ರೀಟೇಲ್ನಲ್ಲಿ ಹೂಡಿಕೆ ಮಾಡಿರುವ ಜಿಐಸಿ ಇದುವರೆಗೂ 40 ವಿವಿಧ ದೇಶಗಳಲ್ಲಿ ಹೂಡಿಕೆ ಮಾಡಿದೆ. 2 ದಶಕಗಳಿಗೂ ಹೆಚ್ಚು ಕಾಲದಿಂದ ಜಿಐಸಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದೆ. ಸಿಂಗಾಪುರದಲ್ಲಿ ಇದರ ಕೇಂದ್ರ ಕಚೇರಿಯಿದ್ದು, 1,700 ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಜಗತ್ತಿನ 10ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಇದರ ಕಚೇರಿಗಳಿವೆ.
ಇದನ್ನೂ ಓದಿ: Mubadala-Reliance Retail Deal – ಅಬುಧಾಬಿಯ ಮುಬಾದಲದಿಂದ ರಿಲಾಯನ್ಸ್ ರೀಟೇಲ್ನಲ್ಲಿ 6,247 ಕೋಟಿ ಹೂಡಿಕೆ
ರಿಲಯನ್ಸ್ ರೀಟೇಲ್ನಲ್ಲಿ ಹೂಡಿಕೆ ಮಾಡಿರುವ ಟಿಪಿಜಿ ಕೋ-ಸಿಇಓ ಜಿಮ್ ಕೌಲ್ಟರ್ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ತಂತ್ರಜ್ಞಾನವನ್ನು ಬಳಸಿಕೊಂಡು ರೀಟೇಲ್ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಅತ್ಯುತ್ತಮ ನಾಯಕತ್ವ, ಸಮರ್ಪಕವಾದ ಪ್ಲಾನ್ ಮೂಲಕ ರೀಟೇಲ್ ಕ್ಷೇತ್ರದಲ್ಲಿ ಪ್ರಬಲವಾಗಿ ನೆಲೆಯೂರುತ್ತಿರುವ ರಿಲಯನ್ಸ್ ರೀಟೇಲ್ಸ್ ಜೊತೆ ಕೈಜೋಡಿಸುತ್ತಿರುವುದಕ್ಕೆ ನಮಗೆ ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ