ಮುಂಬೈ(ಮೇ 04): ಫೇಸ್ಬುಕ್ ಸಂಸ್ಥೆ ರಿಲಾಯನ್ಸ್ ಜಿಯೋದಲ್ಲಿ ಬಂಡವಾಳ ಹೂಡಿದ್ದು ದೊಡ್ಡ ಸುದ್ದಿಯಾಗಿತ್ತು. ಜಿಯೋವನ್ನು ಇನ್ನಷ್ಟು ಬಲಿಷ್ಠಗೊಳಿಸಿತ್ತು. ಈಗ ಅಮೆರಿಕದ ಮತ್ತೊಂದು ಬೃಹತ್ ಕಂಪನಿ ಸಿಲ್ವರ್ ಲೇಕ್ ಕೂಡ ಜಿಯೋದಲ್ಲಿ ಹೂಡಿಕೆ ಮಾಡಿದೆ. ಖಾಸಗಿ ಹೂಡಿಕೆ ನಿರ್ವಹಣಾ ಕಂಪನಿಯಾದ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1ರಷ್ಟು ಪಾಲನ್ನು ಖರೀದಿಸಿದೆ. ಇದು ಸುಮಾರು 750 ಮಿಲಿಯನ್ ಡಾಲರ್, ಅಂದರೆ ಸುಮಾರು 5,655.75 ಕೋಟಿ ರೂ ಮೊತ್ತವಾಗುತ್ತದೆ. ಈ ಒಪ್ಪಂದದಿಂದ ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಇನ್ನಷ್ಟು ಶ್ರೀಮಂತವಾಗಲಿದೆ. ಆರ್ಐಎಲ್ ಮೌಲ್ಯ ಸುಮಾರು 65 ಬಿಲಿಯನ್ ಡಾಲರ್ನಷ್ಟಾಗಿದೆ.
ಕೆಲ ದಿನಗಳ ಹಿಂದಷ್ಟೇ ಫೇಸ್ಬುಕ್ ಸಂಸ್ಥೆ ಜಿಯೋದಲ್ಲಿ ಶೇ. 9.99ರಷ್ಟು ಪಾಲನ್ನು ಖರೀದಿಸಿತ್ತು. ಈ ಮೂಲಕ ಜಿಯೋದಲ್ಲಿ 5.7 ಬಿಲಿಯನ್ ಡಾಲರ್ ಹಣವನ್ನು ಹೂಡಿಕೆ ಮಾಡಿತ್ತು. ಫೇಸ್ಬುಕ್ ಇಷ್ಟೊ ದೊಡ್ಡ ಮೊತ್ತದ ಹೂಡಿಕೆ ಮಾಡಿದ್ದು ಅಪರೂಪ. ಫೇಸ್ಬುಕ್ 2014ರಲ್ಲಿ 22 ಬಿಲಿಯನ್ ಡಾಲರ್ ಹಣ ತೆತ್ತು ವಾಟ್ಸಾಪ್ ಖರೀದಿ ಮಾಡಿತ್ತು. ಆ ಬಳಿಕ ಜಿಯೋದಲ್ಲಿ ಪಾಲು ಖರೀದಿಗೆ ಫೇಸ್ಬುಕ್ ಅತಿ ಹೆಚ್ಚು ಹಣ ವ್ಯಯಿಸಿದೆ.
ಇದನ್ನೂ ಓದಿ: Mukesh Ambani: ಫೇಸ್ಬುಕ್ ಜೊತೆಗಿನ ಒಪ್ಪಂದದ ನಂತರ ಏಷ್ಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡ ಮುಖೇಶ್ ಅಂಬಾನಿ
ಭಾರತದ ಡಿಜಿಟಲ್ ಮಾರುಕಟ್ಟೆಯಲ್ಲಿ ರಿಲಾಯನ್ಸ್ ಜಿಯೋ ಮುಂಚೂಣಿಯಲ್ಲಿದೆ. ಹೀಗಾಗಿ, ವಿಶ್ವದ ದಿಗ್ಗಜ ಕಂಪನಿಗಳು ಜಿಯೋದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರುತ್ತಿವೆ. ಸಿಲ್ವರ್ ಲೇಕ್ನಿಂದ ಹೂಡಿಕೆಯಾಗಿರುವ ಬೆಳವಣಿಗೆಯನ್ನು ಆರ್ಐಎಲ್ ಛೇರ್ಮನ್ ಮುಕೇಶ್ ಅಂಬಾನಿ ಸ್ವಾಗತಿಸಿದ್ಧಾರೆ. ಭಾರತೀಯ ಡಿಜಿಟಲ್ ವ್ಯವಸ್ಥೆಗೆ ಪುಷ್ಟಿ ನೀಡಲು ಇದು ಸಹಕಾರಿಯಾಗಲಿದೆ ಎಂದವರು ಹೇಳಿದ್ದಾರೆ.
ಕೊರೋನಾದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಬೆಳವಣಿಗೆಗಳಾಗುತ್ತಿರುವುದು ಗಮನಾರ್ಹ. ಭಾರತದಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಅಗತ್ಯವಿದೆ. ದೇಶದ ಮೂಲೆ ಮೂಲೆಯಲ್ಲೂ ಡಿಜಿಟಲ್ ವ್ಯವಸ್ಥೆ ಸಮರ್ಪಕವಾಗಿ ಅಳವಡಿಕೆಯಾಗಬೇಕಿದೆ. ಈ ದೃಷ್ಟಿಯಿಂದ ಜಿಯೋದಲ್ಲಿ ವಿದೇಶೀ ಹೂಡಿಕೆಯಾಗುತ್ತಿರುವುದು ಒಳ್ಳೆಯದು ಎಂದು ಕೆಲ ತಜ್ಫರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ