ಬೆಂಗಳೂರು(ಅ. 10): ಹವಾಮಾನ ಬದಲಾವಣೆಯ ಸಮಸ್ಯೆ ಇಡೀ ವಿಶ್ವವನ್ನೇ ಬಾಧಿಸುತ್ತಿದೆ. ಮಾನವ ಸಂಕುಲಕ್ಕೆ ಅಪಾಯಕಾರಿಯಾದ ಈ ಸಮಸ್ಯೆ ನಿವಾರಣೆಗೆ ಪರಿಹಾರ ಹುಡುಕಲು ಟೆಡ್ (TED) ಸಂಸ್ಥೆ ಕ್ಲೈಮೇಟ್ ಕೌಂಟ್ಡೌನ್ ಇನಿಶಿಯೇಟಿವ್ ಎಂಬ ಕಾರ್ಯಕ್ರಮವನ್ನು ಜಾಗತಿಕವಾಗಿ ಹಮ್ಮಿಕೊಂಡಿದೆ. ಹವಾಮಾನ ಬದಲಾವಣೆಯ ಸಮಸಸ್ಯೆಗೆ ಇರುವ ಪರಿಹಾವನ್ನ ಕಾರ್ಯರೂಪಕ್ಕೆ ತರುವುದು ಈ ಯೋಜನೆಯ ಉದ್ದೇಶ. ಟೆಡ್ನ ಈ ಕಾರ್ಯಕ್ರಮಕ್ಕೆ ರಿಲಾಯನ್ಸ್ ಜಿಯೋ ಕೂಡ ಕೈ ಜೋಡಿಸಿದೆ. ಇಂದು ರಾತ್ರಿ 8:30ರಿಂದ ಟೆಡ್ನ ಕ್ಲೈಮೇಟ್ ಕೌಂಟ್ಡೌನ್ ಕಾರ್ಯಕ್ರಮ ನಡೆಯಲಿದ್ದು, ಜಿಯೋ ಬಳಕೆದಾರರಿಗೆ ಈ ನೇರ ವೀಕ್ಷಣೆಯ ಸೌಲಭ್ಯವನ್ನು ನೀಡಲಾಗಿದೆ.
ಟೆಡ್ ಎಂಬುದು 1984ರಲ್ಲಿ ಅಮೆರಿಕದಲ್ಲಿ ಸ್ಥಾಪಿತವಾದ ಸಂಸ್ಥೆ. ಟೆಕ್ನಾಲಜಿ, ಎಂಟರ್ಟೈನ್ಮೆಂಟ್, ಡಿಸೈನ್ ಎಂಬುದು ಇದರ ಪದವಿಸ್ತಾರ. ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನ ವಿಚಾರಗಳಿಗೆ ವೇದಿಕೆ ಕಲ್ಪಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಟೆಡ್ ಟಾಕ್ಸ್ ಬಹಳ ಜನಪ್ರಿಯವಾಗಿರುವ ಸಂವಾದ ವೇದಿಕೆ. ಈಗ ಹವಾಮಾನ ಬದಲಾವಣೆಯ ಸಮಸ್ಯೆ ಜಗತ್ತನ್ನು ಅಪಾಯದ ಅಂಚಿಗೆ ನೂಕುತ್ತಿರುವುದರಿಂದ ಕ್ಲೈಮೇಟ್ ಕೌಂಟ್ಡೌನ್ ಇನಿಷಿಯೇಟಿವ್ ಎಂಬ ಆಂದೋಲನ ಹಮ್ಮಿಕೊಂಡಿದ್ದು, ವಿಶ್ವದ ಹಲವು ತಜ್ಞರು ಈ ವೇದಿಕೆಯಲ್ಲಿ ತಮ್ಮ ವಿಚಾರಗಳನ್ನ ಪ್ರಸ್ತುತಪಡಿಸುತ್ತಿದ್ಧಾರೆ.
ಕಾರ್ಬನ್ ಡೈ ಆಕ್ಸೈಡ್ನಂಥ ಗ್ರೀನ್ ಹೌಸ್ ಗ್ಯಾಸ್ (ಹಸಿರುಮನೆ ಅನಿಲ) ಹೆಚ್ಚೆಚ್ಚು ಹೊರಬರುತ್ತಿರುವುದು ಜಗತ್ತಿಗೆ ಅಪಾಯದ ಸೂಚನೆ ನೀಡಿದೆ. ಇಂಥ ಅನಿಲಗಳನ್ನ ಸಾಧ್ಯವಾದಷ್ಟೂ ನಿಯಂತ್ರಿಸಬೇಕೆಂದು ತಜ್ಞರು ಬಹಳ ವರ್ಷಗಳಿಂದ ಹೇಳುತ್ತಲೇ ಬಂದಿದ್ಧಾರೆ. ಕಾರ್ಬನ್ ಮುಕ್ತ ಜಗತ್ತು ನಿರ್ಮಾಣದ ಗುರಿಯೊಂದಿಗೆ ಗ್ರೀನ್ ಹೌಸ್ ಗ್ಯಾಸ್ ಎಮಿಷನ್ ಅನ್ನು 2030ರಷ್ಟರಲ್ಲಿ ಅರ್ಧದಷ್ಟಾದರೂ ಇಳಿಕೆ ಮಾಡಬೇಕೆಂಬ ಸಂಕಲ್ಪದೊಂದಿಗೆ ಟೆಡ್ ಈ ಕಾರ್ಯಕ್ರಮ ನಡೆಸುತ್ತಿದೆ. ಈಗ ಟೆಡ್ ಜೊತೆ ಜಿಯೋ ಕೂಡ ಕೈಜೋಡಿಸಿದೆ. ಈ ಮೂಲಕ ವಿಜ್ಞಾನಿಗಳು, ಕಾರ್ಯಕರ್ತರು, ಉದ್ಯಮಿಗಳು, ನಗರ ಯೋಜಕರು, ರೈತರು, ಸಿಇಒಗಳು, ಹೂಡಿಕೆದಾರರು, ಕಲಾವಿದರು, ಸರ್ಕಾರಿ ಅಧಿಕಾರಿಗಳು ಹೀಗೆ ವಿವಿಧ ಕ್ಷೇತ್ರಗಳಿಂದ ತಜ್ಞರಿಂದ ವಾಸ್ತವಿಕ ಪರಿಹಾರಗಳನ್ನ ಹುಡುಕಲು ಜಿಯೋ ಪ್ರಯತ್ನಿಸುತ್ತಿದೆ.
ಬಹಳಷ್ಟು ವ್ಯಾಪ್ತಿ ಹೊಂದಿರುವ ಜಿಯೋದ ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಟೆಡ್ ಟಾಕ್ಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಿದೆ. ಇಂದು ಶನಿವಾರ ರಾತ್ರಿ 8:30ಕ್ಕೆ ಜಿಯೋ ಸೆಟ್ ಟಾಪ್ ಬಾಕ್ಸ್ ಹೊಂದಿರುವ ಬಳಕೆದಾರರಿಗೆ ನೇರ ಪ್ರಸಾರ ವೀಕ್ಷಿಸುವ ಅವಕಾಶ ಇದೆ. ಜಿಯೋಸ್ಟೋರ್ನಲ್ಲಿ ಲಭ್ಯ ಇರುವ ಟೆಡ್ ಆ್ಯಪ್ ಅನ್ನು ಡೌನ್ ಲೋಡ್ ಆ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು. JioPagesನಲ್ಲಿ ಲಭ್ಯ ಇರುವ ಟೆಡ್ ಲಿಂಕ್ ಮೂಲಕ https://countdown.ted.com ತಾಣವನ್ನು ಪ್ರವೇಶಿಸಿ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ