ವಾಟ್ಸಾಪ್​ ಗ್ರೂಪ್​ಗಳನ್ನು ನೋಂದಣಿ ಮಾಡಿಸಿ, ಇಲ್ಲ ಕ್ರಮ ಎದುರಿಸಿ; ಮಾಧ್ಯಮಕ್ಕೆ ಕಡಿವಾಣ

news18
Updated:August 31, 2018, 2:23 PM IST
ವಾಟ್ಸಾಪ್​ ಗ್ರೂಪ್​ಗಳನ್ನು ನೋಂದಣಿ ಮಾಡಿಸಿ, ಇಲ್ಲ ಕ್ರಮ ಎದುರಿಸಿ; ಮಾಧ್ಯಮಕ್ಕೆ ಕಡಿವಾಣ
ವಾಟ್ಸ್​​ಆ್ಯಪ್​​
  • News18
  • Last Updated: August 31, 2018, 2:23 PM IST
  • Share this:
ಪ್ರಾಂಶು ಮಿಶ್ರಾ

ಲಖನೌ: ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥರ ಉತ್ತರ ಪ್ರದೇಶದಲ್ಲಿ ಹೊಸ ಆದೇಶವೊಂದನ್ನು ಹೊರಡಿಸಲಾಗಿದೆ. ಉತ್ತರ ಪ್ರದೇಶದ ಲಲಿತ್​ಪುರ್​ ಜಿಲ್ಲೆಯ ಪತ್ರಕರ್ತರಿಗೆ ವಾಟ್ಸಾಪ್​ ಗ್ರೂಪ್​ಗಳಲ್ಲಿ ಭಾಗಿಯಾಗಿದ್ದಲ್ಲಿ ಆಯಾ ಗುಂಪುಗಳ ಮಾಹಿತಿಯನ್ನು ವಾರ್ತಾ ಇಲಾಖೆಗೆ ನೀಡುವಂತೆ ಸರ್ಕಾರಿ ಆದೇಶ ಹೊರಡಿಸಲಾಗಿದೆ.

ಜಿಲ್ಲೆಯ ಎಲ್ಲಾ ಪತ್ರಕರ್ತರೂ ವಾರ್ತಾ ಇಲಾಖೆಯಲ್ಲಿ ವಾಟ್ಸಾಪ್​ ಗ್ರೂಪ್​ಗಳನ್ನು ನೋಂದಣಿ ಮಾಡಿಸಬೇಕು. ಇಲ್ಲದಿದ್ದಲ್ಲಿ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ ಎಂದು ಆದೇಶಿಸಲಾಗಿದೆ. ಉತ್ತರ ಪ್ರದೇಶದ ವಾರ್ತಾ ಇಲಾಖೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರ ಬಳಿಯೇ ಇದೆ. ಸರ್ಕಾರ ಮಾಡಿರುವ ಆದೇಶದ ಪ್ರತಿ ನ್ಯೂಸ್​ 18 ಬಳಿಯಿದೆ. ಅದರ ಪ್ರಕಾರ ಯಾವುದೇ ಪತ್ರಕರ್ತ ಆದೇಶದ ಅನ್ವಯ ನಡೆದುಕೊಳ್ಳದಿದ್ದರೆ ಐಟಿ ಕಾಯಿದೆಯಡಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

"ಜಿಲ್ಲೆಯಲ್ಲಿರುವ ಪತ್ರಕರ್ತರು ವಾಟ್ಸಾಪ್​ ಗ್ರೂಪ್​​ಗಳನ್ನು ರಚಿಸಬೇಕಾದರೆ ಅಥವಾ ಈಗಾಗಲೇ ರಚಿಸಿದ್ದರೆ ಅದನ್ನು ವಾರ್ತಾ ಇಲಾಖೆಯಲ್ಲಿ ನೋಂದಣಿ ಮಾಡಿಸಬೇಕು. ಆಯಾ ಗ್ರೂಪ್​ಗಳ ಅಡ್ಮಿನ್​ಗಳು ಗ್ರೂಪಿನಲ್ಲಿರುವ ಎಲ್ಲರ ವಿವರವನ್ನು ನೀಡಬೇಕು. ಫೋಟೋಗ್ರಾಫ್​ ಮತ್ತು ಆಧಾರ್​ ಕಾರ್ಡ್​ ಪ್ರತಿಯನ್ನೂ ನೀಡಬೇಕು," ಎಂದು ಡಿಸ್ಟ್ರಿಕ್ಟ್​ ಮ್ಯಾಜಿಸ್ಟ್ರೇಟ್​ ಮನ್ವೇಂದ್ರ ಸಿಂಗ್​ ಮತ್ತು ಲಲಿತ್​ಪುರ್​ನ ಎಸ್​ಪಿ ಒ.ಪಿ. ಸಿಂಗ್​ ಆಗಸ್ಟ್​ 25ರಂದು ಹೊರಡಿಸಿರುವ ಆದೇಶ ಹೇಳುತ್ತದೆ.

ಸದ್ಯ ಇದು ಕೇವಲ ಒಂದು ಜಿಲ್ಲೆಗೆ ಸೀಮಿತವಾಗಿದ್ದರೂ ಇಡೀ ರಾಜ್ಯಕ್ಕೆ ಎಚ್ಚರಿಕೆಯ ಘಂಟೆಯಾಗಿದೆ. ಉತ್ತರ ಪ್ರದೇಶ ರಾಜ್ಯಾದ್ಯಂತ ಈ ಆದೇಶವನ್ನು ಹೊರಡಿಸುವ ಸಾಧ್ಯತೆಯ ಬಗ್ಗೆ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವ್ನೀಶ್​ ಅವಾಸ್ತಿ, ಇದು ಕೇವಲ ಒಂದು ಜಿಲ್ಲೆಯ ಸ್ಥಳೀಯ ಆಡಳಿತದ ಆದೇಶವೇ ಹೊರತು ಸರ್ಕಾರದ ಆದೇಶವಲ್ಲ ಎಂದಿದ್ದಾರೆ. "ಸರ್ಕಾರದಿಂದಾಗಲೀ, ವಾರ್ತಾ ಇಲಾಖೆಯಿಂದಾಗಲೀ ಈ ರೀತಿಯಾದ ಯಾವುದೇ ಆದೇಶ ಹೊರಡಿಸಿಲ್ಲ. ಹಾಗೇನಾದರೂ ಆದೇಶ ಮಾಡಿದ್ದಲ್ಲಿ, ಅದು ಸ್ಥಳೀಯ ಆಡಳಿತದಿಂದ ಆಗಿರಬಹುದು. ರಾಜ್ಯ ಸರ್ಕಾರ ಈ ಬಗ್ಗೆ ವಿವರ ಪಡೆದು ಸೂಕ್ತ ಕ್ರಮ ಜರುಗಿಸಲಿದೆ," ಎನ್ನುತ್ತಾರೆ ಅವ್ನೀಶ್​ ಅವಾಸ್ತಿ.

ಈ ನಡುವೆ ಜಿಲ್ಲಾಡಳಿತ ಸ್ಪಷ್ಟನೆಯನ್ನು ನೀಡಿದ್ದು, ಈ ಕ್ರಮವನ್ನು ಸಾರ್ವಜನಿಕರು ಪ್ರಶಂಸಿಸುತ್ತಿದ್ದಾರೆ ಎಂದಿದೆ."ಈ ಆದೇಶವನ್ನು ಜನ ಸ್ವೀಕರಿಸಿದ್ದಾರೆ. ಇದು ನಕಲಿ ಸುದ್ದಿಗಳನ್ನು ತಡೆ ಹಿಡಿಯಲು ತೆಗೆದುಕೊಂಡ ಕ್ರಮ. ಎಷ್ಟೋ ಜನ ಪತ್ರಕರ್ತರ ಪೋಷಾಕಿನಲ್ಲಿ ಕೆಲವರು ಸುಳ್ಳು ಸುದ್ದಿ ಹರಡುತ್ತಾರೆ. ಅಂತವರಿಗೆ ಕಡಿವಾಣ ಹಾಕಲು ಈ ಆದೇಶ ಸಹಕಾರಿಯಾಗುತ್ತದೆ," ಎನ್ನುತ್ತಾರೆ ಜಿಲ್ಲಾ ನ್ಯಾಯಾಧೀಶ ಮನ್ವೇಂದರ್​ ಸಿಂಗ್​.

ಈ ಆದೇಶಕ್ಕೆ ಸ್ಥಳೀಯ ಪತ್ರಕರ್ತರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಕೆಲವರು ಆದೇಶಕ್ಕೆ ಹೆದರಿ ವಾಟ್ಸಾಪ್​ ಗ್ರೂಪ್​ಗಳಿಂದ ಆಚೆ ಬಂದಿದ್ದಾರೆ.

ಈ ಆದೇಶವನ್ನು ಕಟುವಾಗಿ ವಿರೋಧಿಸಿರುವ ಭಾರತೀಯ ವೃತ್ತಿನಿರತ ಪತ್ರಕರ್ತರ ಫೆಡರೇಷನ್​ನ ರಾಷ್ಟ್ರೀಯ ಸಂಚಾಲಕ ಕೆ. ವಿಶ್ವದೆಯೊ ರಾವ್​, "ನಕಲಿ ಸುದ್ದಿಗಳಿಗೆ ಕಡಿವಾಣ ಹಾಕುವ ಆಶಯವಿದ್ದರೆ, ಅಂಥಾ ಸುದ್ದಿಗಳ ಮೂಲವನ್ನು ಹುಡುಕಬೇಕು. ಪತ್ರಕರ್ತರು ಸಂದೇಶ ರವಾನಿಸಲು ಮಾಡಿಕೊಂಡಿರುವ ಗುಂಪುಗಳನ್ನು ವಾರ್ತಾ ಇಲಾಖೆಯಲ್ಲಿ ನೋಂದಣಿ ಮಾಡಿಸುವುದೆಂದರೆ ಸ್ವತಂತ್ರ ಪತ್ರಿಕೋದ್ಯಮವನ್ನು ಕೊಲೆ ಮಾಡಿದಂತೆ. ಸರ್ಕಾರ ಈ ಮೂಲಕ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲು ಮುಂದಾಗಿದೆ," ಎಂದು ಪ್ರತಿಕ್ರಿಯಿಸಿದರು.
First published: August 31, 2018, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading