ನವದೆಹಲಿ(ಅ. 15): ಜಮ್ಮು-ಕಾಶ್ಮೀರಕ್ಕೆ ಸಂವಿಧಾನದಲ್ಲಿ ವಿಶೇಷ ಸ್ಥಾನಮಾನ ಮರಳಿ ತರುವಂತೆ ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಒಗ್ಗೂಡಿವೆ. ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ ಎಂಬ ಹೆಸರಿನಲ್ಲಿ ಮೈತ್ರಿಕೂಟ ರಚನೆ ಮಾಡಲಾಗಿದೆ. 370ನೇ ವಿಧಿಯನ್ನ ಪುನಃಸೇರಿಸಲು ಹೋರಾಟ ಮಾಡುವುದು ಈ ಮೈತ್ರಿಯ ಉದ್ದೇಶ. ನ್ಯಾಷನಲ್ ಕಾನ್ಫೆರೆನ್ಸ್, ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ ಹಾಗೂ ಇತರ ಪ್ರಾದೇಶಿಕ ಸಂಘಟನೆಗಳು ಈ ಮೈತ್ರಿಕೂಟದಲ್ಲಿವೆ. ಸಾಜದ್ ಲೋನೆ ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ನ್ಯಾಷನಲ್ ಕಾನ್ಫೆರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಈ ಮೈತ್ರಿಕೂಟ ರಚನೆಯನ್ನು ಘೋಷಿಸಿದ್ದಾರೆ.
“ಈ ಮೈತ್ರಿಕೂಟಕ್ಕೆ ‘ಪೀಪಲ್ಸ್ ಅಲಾಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್’ ಎಂದು ಹೆಸರಿಸಿದ್ದೇವೆ. ನಮ್ಮದು ಸಂವಿಧಾನಿಕ ಹೋರಾಟ. 2019ರ ಆಗಸ್ಟ್ 5ಕ್ಕೆ ಮುಂಚೆ ಇದ್ದ ಕಾಶ್ಮೀರಿಗಳ ಹಕ್ಕನ್ನು ಮರಳಬೇಕೆಂಬುದು ನಮ್ಮ ಉದ್ದೇಶ” ಎಂದು ಫಾರೂಕ್ ಹೇಳಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಗ್ಯಾಸ್ ಸ್ಟವ್ ಹೋಲ್ಡರ್ನಲ್ಲಿ ಡ್ರಗ್ಸ್; ಬೆಂಗಳೂರು ಏರ್ಪೋರ್ಟ್ನಲ್ಲಿ ಸಿಕ್ಕಿದ ಎಫೆಡ್ರೈನ್
ಏನಿದು ಗುಪ್ಕರ್ ಡಿಕ್ಲರೇಶನ್?
ಫಾರೂಕ್ ಅಬ್ದುಲ್ಲಾ ಅವರ ನಿವಾಸ ಇರುವುದು ಗುಪ್ಕರ್ ರಸ್ತೆಯಲ್ಲಿ. ಕೇಂದ್ರ ಸರ್ಕಾರ 370ನೇ ವಿಧಿ ತೆಗೆದುಹಾಕುವ ಒಂದು ದಿನ ಮುನ್ನ, ಅಂದರೆ 2019ರ ಆಗಸ್ಟ್ 4ರಂದು ಎಲ್ಲಾ ಪ್ರಾದೇಶಿಕ ಪಕ್ಷಗಳ ಸಭೆ ನಡೆದಿತ್ತು. ಅದರಲ್ಲಿ ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ, ಅಸ್ಮಿತೆ, ವಿಶೇಷ ಸ್ಥಾನಮಾನವನ್ನು ಉಳಿಸಿಕೊಳ್ಳಲು ಎಲ್ಲಾ ಪಕ್ಷಗಳೂ ಒಗ್ಗೂಡಲು ನಿರ್ಣಯಿಸಿ ಜಂಟಿಯಾಗಿ ಪ್ರಕಟಣೆ ಹೊರಡಿಸಲಾಗಿತ್ತು. ಅದೇ ಗುಪ್ಕರ್ ಘೋಷಣೆ ಎಂದು ಪರಿಗಣಿತವಾಗಿದೆ.
ಇದನ್ನೂ ಓದಿ: ನ್ಯೂಸ್ ಚಾನಲ್ಗಳ ಟಿಆರ್ಪಿ ರೇಟಿಂಗ್ ಮೂರು ತಿಂಗಳ ಕಾಲ ಸ್ಥಗಿತ
ಅದಾಗಿ ಮಾರನೇ ದಿನವೇ ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದುಹಾಕಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಹೋಳು ಮಾಡಿತು. ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಸಾಜದ್ ಲೋನೆ ಸೇರಿದಂತೆ ಕಣಿವೆ ರಾಜ್ಯದ ಬಹುತೇಕ ರಾಜಕೀಯ ಮುಖಂಡರು, ಪ್ರತ್ಯೇಕತಾವಾದಿ ಹೋರಾಟಗಾರರೆಲ್ಲರನ್ನೂ ಬಂಧನದಲ್ಲಿಡಲಾಯಿತು. ಇತ್ತೀಚೆಗಷ್ಟೇ ಕೆಲವರನ್ನು ಬಿಡುಗಡೆಗೊಳಿಸಲಾಗಿದೆ. ಇದರ ಬೆನ್ನಲ್ಲೇ ವಿವಿಧ ರಾಜಕೀಯ ಮುಖಂಡರು ಮತ್ತೆ ಒಗ್ಗೂಡುತ್ತಿದ್ದಾರೆ. ನಿನ್ನೆ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಅವರು ಮೆಹಬೂಬ ಮುಫ್ತಿ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ಗುಪ್ಕರ್ ಘೋಷಣೆಯ ಎರಡನೇ ಆವೃತ್ತಿ ಸಿದ್ಧಗೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ